Advertisement

ಹಂಗಾರಕಟ್ಟೆ ಬಂದರಿನ ಅಭಿವೃದ್ಧಿಗೆ ಸರಕಾರದ ಒತ್ತು

11:05 PM Mar 08, 2020 | Sriram |

ಕೋಟ: ಶತಮಾನಗಳ ಇತಿಹಾಸದ ಹಂಗಾರಕಟ್ಟೆಯ ಬಂದರು ವ್ಯವಸ್ಥಿತವಾಗಿ ಅಭಿವೃದ್ಧಿಗೊಳ್ಳಬೇಕು ಎನ್ನವುದು ಹಲವು ದಶಕಗಳ ಬೇಡಿಕೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಈ ಬಜೆಟ್‌ನಲ್ಲಿ 130 ಕೋಟಿ ರೂ. ಮೀಸಲಿರಿಸಿದ್ದು ಹೊಸ ಭರವಸೆ ಮೂಡಿದೆ.

Advertisement

ಮೂರು ಕಿರು ಬಂದರಿನ ಸಮಸ್ಯೆ
ಬ್ರಹ್ಮಾವರ ತಾಲೂಕು ವ್ಯಾಪ್ತಿಗೆ ಒಳಪಡುವ ಹಂಗಾರಕಟ್ಟೆ, ಕೋಡಿಕನ್ಯಾಣ, ಕೋಡಿಬೆಂಗ್ರೆ ಈ ಮೂರು ಬಂದರುಗಳು ಪರಸ್ಪರ ಒಂದಕ್ಕೊಂದು ಹೊಂದಿಕೊಂಡಿವೆ ಹಾಗೂ ಒಂದೇ ಅಳಿವೆ ಇವುಗಳಿಗೆ ಸಂಪರ್ಕ ಬೆಸೆಯುತ್ತದೆ. ಆದರೆ ಅಳಿವೆಗೆ ಬ್ರೇಕ್‌ ವಾಟರ್‌ ತಡೆಗೋಡೆ ಇಲ್ಲದಿರುವುದು ಇಲ್ಲಿನ ಪ್ರಮುಖ ಸಮಸ್ಯೆ. ಇದರಿಂದ ಬೋಟ್‌ ಸಂಚಾರ ಅಸಾಧ್ಯವಾಗಿತ್ತು ಮತ್ತು ಉಬ್ಬರ ಇಳಿತವನ್ನು ಗಮನಿಸಿ ಜಟ್ಟಿಯಿಂದ ಹೊರ ಹೋಗಬೇಕಿತ್ತು. ಹೀಗಾಗಿ ಮೀನುಗಾರಿಕೆ ಅವಧಿ ಆರಂಭಗೊಂಡು ಎರಡು-ಮೂರು ತಿಂಗಳು ಕಳೆದರು ಇಲ್ಲಿನ ಬೋಟ್‌ಗಳಿಗೆ ಮೀನುಗಾರಿಕೆಗೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಪ್ರಸ್ತುತ ಬಿಡುಗಡೆಯಾದ ಹಣವನ್ನು ಸಂಪೂರ್ಣವಾಗಿ ಬ್ರೇಕ್‌ ವಾಟರ್‌ ಕಾಮಗಾರಿಗೆ ಮೀಸಲಿರಿಸುವುದರಿಂದ ಮೂರು ಕಿರು ಬಂದರುಗಳ ಸಮಸ್ಯೆ ಏಕ ಕಾಲದಲ್ಲಿ ಪರಿಹಾರವಾಗಲಿದೆ.

ಪಾರಂಪರಿಕ ಬಂದರು
ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ಬಾರಕೂರು ಅರಸರು ಹಾಗೂ ಬ್ರಿಟಿಷ್‌ ಸರಕಾರದ ಕಾಲದಲ್ಲಿ ಹಂಗಾರಕಟ್ಟೆ ಬಂದರು ವಿದೇಶಗಳಿಗೆ ಆಹಾರ ವಸ್ತುಗಳ ಆಮದು, ರಪು¤ ನಡೆಸುವ ಪ್ರಮುಖ ವ್ಯಾಪಾರ ತಾಣವಾಗಿ ಪ್ರಸಿದ್ಧಿ ಪಡೆದಿತ್ತು.

ಸಾರ್ವಕಾಲಿಕ ಬಂದರಾಗುವ ಅವಕಾಶ
ಪ್ರಸ್ತುತ ಕೋಡಿ ಬೆಂಗ್ರೆಯಲ್ಲಿ 100ಕ್ಕೂ ಹೆಚ್ಚು ಬೋಟ್‌ಗಳು ಹಾಗೂ ಹಂಗಾರಕಟ್ಟೆಯಲ್ಲಿ 150, ಕೋಡಿಕನ್ಯಾಣದಲ್ಲಿ 200ಕ್ಕೂ ಹೆಚ್ಚು ಬೋಟ್‌ಗಳು ಮೀನುಗಾರಿಕೆ ನಡೆಸುತ್ತಿದೆ ಹಾಗೂ ಈ ಭಾಗದ ಸುಮಾರು 600ಕ್ಕೂ ಹೆಚ್ಚು ಬೋಟ್‌ಗಳು ಮಲ್ಪೆಯ ಬಂದರನ್ನು ಆಶ್ರಯಿಸಿವೆೆ. ಇಲ್ಲಿ ತಡೆಗೋಡೆ ನಿರ್ಮಾಣವಾದರೆ ಸಾರ್ವಕಾಲಿಕ ಬಂದರಾಗಿ ಮಲ್ಪೆಯ ಒತ್ತಡವೂ ಕಡಿಮೆಯಾಗುತ್ತದೆ.

ಸೀ ವಾಕ್‌ ಕುರಿತು ಚಿಂತನೆ ಅಗತ್ಯ
ಬ್ರೇಕ್‌ ವಾಟರ್‌ ತಡೆಗೋಡೆ ನಿರ್ಮಿಸುವ ಸಂದರ್ಭ ಮಲ್ಪೆಯ ಮಾದರಿ ಭವಿಷ್ಯದಲ್ಲಿ ಸೀ ವಾಕ್‌ ನಿರ್ಮಾಣ ಕೈಗೊಳ್ಳುವ ಬಗ್ಗೆ ಮುಂದಾಲೋಚನೆ ಅಗತ್ಯವಿದೆ. ಮೂರು ಕಡೆಗಳಲ್ಲಿ ಕಿರು ಬಂದರು, ದ್ವೀಪ, ಸೀತಾನದಿ ಸಮುದ್ರ ಸೇರುವ ಸಂಗಮ ಸ್ಥಳ ಹಾಗೂ ಅಪ್ರತಿಮ ಪ್ರಕೃತಿ ಸೌಂದರ್ಯದ ತಾಣವಾಗಿರುವುದರಿಂದ ಪ್ರವಾಸಿ ತಾಣವಾಗಿ ಬೆಳೆಯಲು ಅವಕಾಶವಿದೆ.

Advertisement

ಅಭಿವೃದ್ಧಿಗೆ ಅವಕಾಶ
ಹಂಗಾರಕಟ್ಟೆಯ ಬ್ರೇಕ್‌ ವಾಟರ್‌ ಕಾಮಗಾರಿಗೆ ಸರಕಾರ ಬಜೆಟ್‌ನಲ್ಲಿ 130ಕೋಟಿ ಮೀಸಲಿರಿಸಿರುವುದು ತುಂಬಾ ಸಂತಸ ತಂದಿದೆ. ಭವಿಷ್ಯದಲ್ಲಿ ಮೂರು ಕಿರುಬಂದರುಗಳು ಸಾರ್ವಕಾಲಿಕ ಬಂದರಾಗಿ ಅಭಿವೃದ್ಧಿಗೆ ಇದು ಸಹಾಯಕವಾಗಲಿದೆ.
-ರಾಜೇಂದ್ರ ಸುವರ್ಣ, ಹಂಗಾರಕಟ್ಟೆ ಬಂದರು ಅಭಿವೃದ್ಧಿ ಸಮಿತಿ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next