Advertisement

ನಾಮಪತ್ರ ವಾಪಸಾತಿಗೆ ಕೈ-ಕಮಲ ಕಸರತ್ತು 

01:16 PM Oct 13, 2021 | Team Udayavani |

ಹಾವೇರಿ: ಜಿಲ್ಲೆಯ ಹಾನಗಲ್ಲ ಕ್ಷೇತ್ರದ ಉಪಚುನಾವಣೆಯ ನಾಮಪತ್ರ ಸಲ್ಲಿಕೆ, ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿ ಒಟ್ಟು 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಬುಧವಾರ ಕೊನೆಯ ದಿನವಾಗಿದ್ದರಿಂದ ತಮ್ಮ ಗೆಲುವಿಗೆ ಮಗ್ಗಲು ಮುಳ್ಳಾಗುವ ಪಕ್ಷೇತರ ಅಭ್ಯರ್ಥಿಗಳ ಮನವೊಲಿಸಿ ಕಣದಿಂದ ಹಿಂತೆಗೆಸಲು ಪ್ರಮುಖ ರಾಜಕೀಯ ಪಕ್ಷಗಳು ತೀವ್ರ ಕಸರತ್ತು ನಡೆಸಿವೆ.

Advertisement

ಹಾನಗಲ್ಲ ಉಪಚುನಾವಣೆಯಲ್ಲಿ ಶತಾಯ-ಗತಾಯ ಗೆಲುವು ಸಾಧಿಸುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ತಮ್ಮದೇ ಯತ್ನ, ಶ್ರಮಕ್ಕೆ ಮುಂದಾಗುತ್ತಿವೆ. ನಾಮಪತ್ರ ಹಿಂಪಡೆಯುವುದು ಇದರ ಒಂದು ಭಾಗವಾಗಿದೆ. ಆ ಕಾರಣಕ್ಕಾಗಿಯೇ ನಾಮಪತ್ರ ಹಿಂಪಡೆಯಲು ಇನ್ನೂ ಒಂದು ದಿನ ಬಾಕಿ ಇದ್ದು, ನಾಮಪತ್ರ ಹಿಂಪಡೆಯುವ ನಿಟ್ಟಿನಲ್ಲಿ ಪಕ್ಷಗಳಿಂದ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿಗಳ ಮನವೊಲಿಕೆ ಯತ್ನ ನಡೆಸಿದರೆ, ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ಸಿನಿಂದ ವಿವಿಧ ಆಮಿಷ ಯತ್ನಗಳು ನಡೆದಿವೆ ಎಂದೇ ಹೇಳಲಾಗುತ್ತಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಪಕ್ಷೇತರರ ಸವಾಲು ಎದುರಾಗಿದೆ. ಇದನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಹಲವು ರೀತಿಯ ಯತ್ನಗಳಿಗೆ ಮುಂದಾಗಿದ್ದಾರೆ. ಪಕ್ಷೇತರರ ಮನವೊಲಿಸುವ, ಒತ್ತಡ ತರುವ ಕಾರ್ಯ ನಡೆಯುತ್ತಿದೆ. ಆದರೆ, ಪಕ್ಷೇತರರಾಗಿ ಕಣಕ್ಕಿಳಿದಿರುವವರು ಮಾತ್ರ ನಾನಾ ಬೇಡಿಕೆಗಳನ್ನಿಟ್ಟು ಅಭ್ಯರ್ಥಿಗಳಿಗೆ ಚಳ್ಳೆ ಹಣ್ಣು ತಿನ್ನಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಮನವೊಲಿಕೆ ಕಸರತ್ತು ಜೋರು: ಉಪಚುನಾವಣೆಯನ್ನು ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿದ್ದರಿಂದ ಶತಾಯ-ಗತಾಯ ಗೆಲ್ಲಲ್ಲು ರಣತಂತ್ರ ಹೆಣೆಯುತ್ತಿವೆ. ಬಿಜೆಪಿಯಿಂದ ಸಿಎಂ ಹಾಗೂ ಮಾಜಿ ಸಿಎಂ ಸೇರಿ ಎಲ್ಲರೂ ಹಾನಗಲ್ಲ ಕ್ಷೇತ್ರವನ್ನು ಮರಳಿ ಪಡೆಯಲು ಎಲ್ಲ ರೀತಿಯ ತಂತ್ರಗಳನ್ನು ಹೆಣೆಯಲಿದ್ದಾರೆ. ಅದರಂತೆ ಕಾಂಗ್ರೆಸ್‌ನಿಂದ ಮಾಜಿ ಸಿಎಂ, ಕೆಪಿಸಿಸಿ ಅಧ್ಯಕ್ಷರು ಸೇರಿ ಘಟಾನುಘಟಿಗಳೆಲ್ಲಾ  ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಮುಂದಿನ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲು ತಂತ್ರ ರೂಪಿಸಿದ್ದಾರೆ. ಹೀಗಾಗಿ, ಚುನಾವಣೆ ಗೆಲ್ಲಲು ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನು ಇಲ್ಲಿ ಪ್ರಯೋಗಿಸಲು ಸಜ್ಜಾಗಿದ್ದಾರೆ. ಇದರ ಮೊದಲ ಪ್ರಯತ್ನವಾಗಿ ತಮ್ಮ ಅಭ್ಯರ್ಥಿಗಳಿಗೆ ಮಗ್ಗಲ ಮುಳ್ಳಾಗುವಂತಹವರನ್ನು ಬಂಡಾಯವಾಗಿ ಕಣಕ್ಕಿಳಿದಿರುವವರನ್ನು ಕಣದಿಂದ ಹಿಂದೆ ಸರಿಸುವ ಕಸರತ್ತು ಜೋರಾಗಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next