ಲಕ್ನೋ: ಭಾರತದಲ್ಲಿ ಭಗವಾನ್ ಶ್ರೀರಾಮ, ಶ್ರೀಕೃಷ್ಣ, ಬುದ್ಧನ ಸಂಪ್ರದಾಯ ಮುಂದುವರಿಯಲಿದ್ದು, ಬಾಬರ್, ಔರಂಗಜೇಬನ ಸಂಪ್ರದಾಯ ಮರೆಯಾಗಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಉತ್ತರಪ್ರದೇಶ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಯೋಗಿ ಅವರು, ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಿ ಹಿಂದೂಗಳ ಮೆರವಣಿಗೆಗೆ ಅವಕಾಶ ನೀಡುವುದು ಹಾಗೂ ಘೋಷಣೆ ಕೂಗುವುದಕ್ಕೆ ಅನುಮತಿ ನೀಡಿದರೆ ಕೋಮುಗಲಭೆಗೆ ಕಾರಣವಾಗಲಿದೆ ಎಂಬ ವಿಪಕ್ಷಗಳ ಸಲಹೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
“ ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಹಿಂದೂಗಳು ಮೆರವಣಿಗೆ ಮಾಡಬಾರದು ಎಂದು ಸಂವಿಧಾನದಲ್ಲಿ ಎಲ್ಲಿ ಉಲ್ಲೇಖಿಸಲಾಗಿದೆ ಎಂದು” ಯೋಗಿ ಪ್ರಶ್ನಿಸಿದ್ದಾರೆ. ಮಸೀದಿಯ ಮುಂಭಾಗದಿಂದ ಹಾದು ಹೋಗಲು ಹಿಂದೂಗಳ ಮೆರವಣಿಗೆಗೆ ಅವಕಾಶ ನೀಡಬಾರದು ಎಂಬ ಅಭಿಪ್ರಾಯ ಕೇಳಿ ನಾನು ಅಚ್ಚರಿಗೊಂಡಿದ್ದೇನೆ. ಈ ರಸ್ತೆಗಳು ಯಾರಿಗೆ ಸೇರಿವೆ? ಇದು ಸಾರ್ವಜನಿಕ ರಸ್ತೆ…ನೀವು ಅವರನ್ನು ಹೇಗೆ ತಡೆಯುತ್ತೀರಿ? ಎಂದು ಸಿಎಂ ತೀಕ್ಷ್ಣವಾಗಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇತ್ತೀಚೆಗೆ ಬಹ್ರೈಚ್ ನಲ್ಲಿ ನಡೆದ ಘಟನೆಯನ್ನು ಉದಾಹರಿಸಿದ ಸಿಎಂ ಯೋಗಿ, ಸಾಂಪ್ರದಾಯಿಕ ಮೆರವಣಿಗೆಗೆ ಎಲ್ಲಾ ಸಿದ್ಧತೆ ನಡೆಸಿದ್ದರೂ, ಅದನ್ನು ತಡೆದು ನಿಲ್ಲಿಸಲಾಗಿತ್ತು. ಅಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿದ್ದರಿಂದ ಮೆರವಣಿಗೆಗೆ ಅವಕಾಶ ನೀಡಿಲ್ಲ ಎನ್ನುವುದಾದರೆ, ಜೈ ಶ್ರೀರಾಮ್ ಎಂಬುದು ಪ್ರಚೋದನೆಕಾರಿಯೇ? ಇದು ನಮ್ಮ ಭಕ್ತಿ ಮತ್ತು ನಂಬಿಕೆಯ ಪ್ರತೀಕವಾಗಿದೆ ಎಂದು ಪ್ರತಿಪಾದಿಸಿದರು.
ಅವರು ಕೂಡಾ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾರೆ…ಒಂದು ವೇಳೆ ನಾನು ಅಲ್ಲಾಹು ಅಕ್ಬರ್ ಘೋಷಣೆ ನನಗೆ ಇಷ್ಟವಿಲ್ಲ ಎಂದು ಹೇಳಿದರೆ, ನೀವು ಅದನ್ನು ಒಪ್ಪಿಕೊಳ್ಳುವಿರಾ ಎಂದು ಸಿಎಂ ಯೋಗಿ ಪ್ರಶ್ನಿಸಿದ್ದಾರೆ.
ಸಂಭಲ್ ನಲ್ಲಿ ನಡೆದ ಕೋಮು ಹಿಂ*ಸಾಚಾರದ ಕುರಿತು ಉಲ್ಲೇಖಿಸಿದ ಸಿಎಂ ಯೋಗಿ, 1947ರಿಂದ ಈವರೆಗೆ 209 ಹಿಂದೂಗಳ ಹ*ತ್ಯೆಯಾಗಿದೆ. ಆದರೆ ತಮ್ಮ ಮೂಗಿನ ನೇರಕ್ಕೆ ಆಲೋಚಿಸಿ ಟೀಕಿಸುವವರು ಕೇವಲ ಮುಸ್ಲಿಂ ಸಂತ್ರಸ್ತರ ಬಗ್ಗೆ ಮಾತ್ರ ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಆದರೆ ಅಮಾಯಕ ಹಿಂದೂಗಳ ಹ*ತ್ಯೆ ಬಗ್ಗೆ ತುಟಿ ಬಿಚ್ಚುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.