“ಕುಚ್ಚಿಕೂ ಕುಚ್ಚಿಕು’ ಎಂಬ ಸಿನಿಮಾವೊಂದು ಆರಂಭವಾಗಿರುವ ಬಗ್ಗೆ ನೆನಪಿರಬಹುದು. ಹಿರಿಯ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ಕನಸಿನ ಸಿನಿಮಾವದು. ಈ ಸಿನಿಮಾ ಮೂಲಕ ಅವರ ಪುತ್ರಿ ನಕ್ಷತ್ರ (ದೀಪ್ತಿ) ಅವರನ್ನು ಕನ್ನಡ ಪರಿಚಯಿಸುವ ಉದ್ದೇಶವೂ ಇತ್ತು. ಸಿನಿಮಾವೆಲ್ಲ ಮುಗಿಸಿ ಬಿಡುಗಡೆಯ ಕನಸು ಕಾಣುತ್ತಿದ್ದರು. ಆದರೆ ಬಾಬು ಅವರ ಅಗಲಿಕೆಯಿಂದ ಸಿನಿಮಾ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿತ್ತು.
ಈಗ “ಕುಚ್ಚಿಕೂ ಕುಚ್ಚಿಕು’ ಚಿತ್ರ ಬಿಡುಗಡೆಗೆ ಬಂದಿದೆ. ಜುಲೈ 6 ರಂದು ಬಿಡುಗಡೆಯಾಗುತ್ತಿದ್ದು, ಸುಮಾರು ಆರು ವರ್ಷಗಳ ಹಿಂದೆ ಆರಂಭವಾದ ಚಿತ್ರ ಈಗ ಬಿಡುಗಡೆಯ ಹಂತಕೆ ಬಂದ ಸಂಭ್ರಮ ಚಿತ್ರತಂಡದ್ದು. ಈ ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಸಂಗೀತ ನೀಡಿದ್ದಾರೆ. ಈ ಸಿನಿಮಾ ಮೇಲೆ ಅವರಿಗೊಂದು ವಿಶೇಷವಾದ ಪ್ರೀತಿ ಇದೆ.
ಅದಕ್ಕೆ ಎರಡು ಕಾರಣ ಮೊದಲನೇಯದು ನಿರ್ದೇಶಕ ಡಿ.ಬಾಬು ಅವರ ಜೊತೆಗಿನ ಆತ್ಮೀಯತೆಯಾದರೆ, ಮತ್ತೂಂದು ಕಾರಣ ಈ ಸಿನಿಮಾದ ಸಂಭಾವನೆಯಿಂದ ಅವರ ಮಗಳ ಮದುವೆಯ ಸಭಾಂಗಣ ಬುಕ್ಕಿಂಗ್‌ಗೆ ಅಡ್ವಾನ್ಸ್ ಮಾಡಿದ್ದು. ಇತ್ತೀಚೆಗೆ ನಡೆದ “ಕುಚ್ಚಿಕೂ ಕುಚ್ಚಿಕು’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಸ್ವತಃ ಹಂಸಲೇಖ ಬಿಚ್ಚಿಟ್ಟರು.
“ನನಗೆ ಯಜಮಾನವರು (ರವಿಚಂದ್ರನ್) ಅವಕಾಶ ಕೊಟ್ಟರೆ, ಸಿನಿಮಾದ ಕೋಚ್ ಆಗಿ ಕೆಲಸ ಮಾಡಿದವರು ಬಾಬು ಅವರು. ಸಿನಿಮಾದ ಪರಿಭಾಷೆ ಸೇರಿದಂತೆ ಹಲವು ವಿಷಯವನ್ನು ಕಲಿಸಿಕೊಟ್ಟವರು ಬಾಬು ಅವರು. ಈಗ ಅವರ “ಕುಚ್ಚಿಕೂ ಕುಚ್ಚಿಕು’ ಚಿತ್ರ ಬಿಡುಗಡೆಯಾಗುತ್ತಿದೆ. ಇದು ಅವರ ಕನಸಿನ ಚಿತ್ರ ಕೂಡಾ. ಇನ್ನು ಈ ಚಿತ್ರ ಮೇಲೆ ನನಗೆ ಮತ್ತೂಂದು ಸೆಂಟಿಮೆಂಟ್ ಇದೆ.
ಅದೇನೆಂದರೆ ನನ್ನ ಮಗಳ ಮದುವೆಗೆ ಹಾಲ್ ಬುಕ್ ಮಾಡಲು ಬ್ಯಾಂಕ್‌ನಿಂದ ಎರಡು ಲಕ್ಷ ಡ್ರಾ ಮಾಡಿ ಅಡ್ವಾನ್ಸ್ ಕೊಡಲು ಮ್ಯಾನೇಜರ್‌ಗೆ ಹೇಳಿದ್ದೆ. ಅಷ್ಟೊತ್ತಿಗೆ ಈ ಸಿನಿಮಾದ ನಿರ್ಮಾಪಕ ಕೃಷ್ಣಮೂರ್ತಿ ಬಂದು, ಐದು ಲಕ್ಷ ಕೊಟ್ಟು ನಮ್ಮ ಸಿನಿಮಾಕ್ಕೆ ನೀವು ಸಂಗೀತ ನೀಡಬೇಕು ಎಂದರು. ಕಟ್ ಮಾಡಿದರೆ, ಮ್ಯಾನೇಜರ್‌ಗೆ ಬ್ಯಾಂಕ್‌ನಿಂದ ಡ್ರಾ ಮಾಡಬೇಡ.
ಇದನ್ನೇ ಅಡ್ವಾನ್ಸ್ ಮಾಡಿ ಎಂದು ಕೃಷ್ಣಮೂರ್ತಿಯವರು ಕೊಟ್ಟ ಹಣವನ್ನು ಹಾಲ್‌ಗೆ ಕೊಟ್ಟೆ. ಅಂದು ನನ್ನ ಮಗಳ ಮದುವೆಯ ಹಾಲ್‌ಗೆ ಅಡ್ವಾನ್ಸ್ ಮಾಡಿದ್ದು “ಕುಚ್ಚಿಕ್ಕು ಕುಚ್ಚಿಕು’ ನಿರ್ಮಾಪಕರ ದುಡ್ಡನ್ನು. ನನ್ನ ಮಗಳು-ಅಳಿಯ ಚೆನ್ನಾಗಿದ್ದಾರೆ. ಅದೇ ರೀತಿ ಈ ಸಿನಿಮಾ ಕೂಡಾ ಚೆನ್ನಾಗಿ ಆಗುತ್ತದೆ ಎಂಬ ವಿಶ್ವಾಸವಿದೆ’ ಎಂದು ಸಿನಿಮಾಕ್ಕೆ ಶುಭಕೋರಿದರು.