ಗೋಕಾಕ: ದೇಶದಲ್ಲಿ ಮತ್ತು ವಿದೇಶಕ್ಕೆ ರಫ್ತು ಮಾಡುವ ಸಿದ್ಧ ಆಹಾರಕ್ಕೆ ಹಲಾಲ್ ಹೆಸರಿನ ಪ್ರಮಾಣಪತ್ರ ಪಡೆಯಲು ಕೆಲವು ಮುಸ್ಲಿಂ ಸಂಘಟನೆಗಳಿಗೆ ಹಣ ಕೊಡಬೇಕಿದೆ. ಆ ಹಣವು ದೇಶ ವಿರೋಧಿ ಕೃತ್ಯಗಳಿಗೆ ಬಳಕೆಯಾಗುತ್ತಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆರೋಪಿಸಿದರು.
ಅವರು, ಬುಧವಾರ ನಗರದ ಸಮುದಾಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಲಾಲ್ ಹೆಸರಿನ ಪ್ರಮಾಣಪತ್ರ ಪಡೆಯಲು ಸಂಗ್ರಹವಾಗುವ ಸಾವಿರಾರು ಕೋಟಿ ಹಣ ಭಯೋತ್ಪಾದಕರಿಗೆ, ಗೋ ಹಂತಕರಿಗೆ, ದೇಶ ವಿರೋಧಿಗಳಿಗೆ ಹೋಗುತ್ತಿದೆ. ಅದರ ವಿರುದ್ಧ ಹಿಂದೂ ರಾಷ್ಟ್ರ ನಿರ್ಮಾಣ ಒಕ್ಕೂಟದ ಹೆಸರಿನಲ್ಲಿ ಹೋರಾಟ ಕೈಗೊಂಡಿದ್ದೇವೆ ಎಂದರು.
ದೇಶದ ಸಂವಿಧಾನ ಚರ್ಚ್ ಕಟ್ಟಿ ಅಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟಿದೆ ಹೊರತು ಮತಾಂತರಕ್ಕೆ ಅಲ್ಲ. ಮತಾಂತರ ಮಾಡುವವರನ್ನು ಹದ್ದುಬಸ್ತಿನಲ್ಲಿಡಲು ರಾಜ್ಯದಲ್ಲಿ ತಕ್ಷಣ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಲು ನ. 12ರಂದು 100ಕ್ಕೂ ಹೆಚ್ಚು ಮಠಾಧೀಶರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲಾಗುವುದು ಎಂದರು.
ದೇಶದಲ್ಲಿರುವ ಶೇ 99ರಷ್ಟು ಕ್ರೈಸ್ತರು ಮತಾಂತರ ಆಗಿರುವ ಹಿಂದೂಗಳೇ ಆಗಿದ್ದಾರೆ. ಅವರು ಲಂಡನ್, ಇಟಲಿಯಿಂದ ಬಂದವರು ಅಲ್ಲ. ಒತ್ತಾಯವೋ, ಆಸೆಯೋ-ಆಮಿಷವೋ ಗೊತ್ತಿಲ್ಲ. ಮತಾಂತರ ಆಗಿದ್ದಾರೆ. ಮತಾಂತರ ಮಾಡುವವರ ಸೇವೆ ಎಲ್ಲವೂ ಬೂಟಾಟಿಕೆ. ಅವೆಲ್ಲವೂ ಕೊನೆಯಾಗುವುದು ಮತಾಂತರದಲ್ಲಿ. ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲ ದೇವಸ್ಥಾನಗಳಲ್ಲಿ ಗೋ ಪೂಜೆ ನಡೆಸಿದ್ದು ಸ್ವಾಗತಾರ್ಹ. ದೀಪಾವಳಿ ಹಬ್ಬದಲ್ಲಿ ಗೋ ಪೂಜೆ
ನಡೆಸುವ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವದಕ್ಕಾಗಿ ಗೋವುಗಳ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ಜಾಗೃತಿ ಮೂಢಿಸಲು ಸರಕಾರ ಮುಂದಾಗಿದ್ದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.
ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ರವಿಕುಮಾರ ಕೋಕಿತಕರ, ರಾಜ್ಯ ಪ್ರಮುಖ ಜಯದೀಪ ದೇಸಾಯಿ, ಗೋಕಾಕ ತಾಲೂಕಾಧ್ಯಕ್ಷ ರವಿ ಪೂಜಾರಿ, ಶಿವರಾಜ ನಾಯ್ಕ, ವಿವೇಕ ಪುರಾಣಿಕ, ಶಿವು ಹಿರೇಮಠ, ಶಿವು ಬಂತೆ, ಸಿದ್ದು ಘೋರ್ಪಡೆ, ದಶರಥ ಸುಭಂಜಿ, ರಾಮು ತೋಳಿ, ರಮೇಶ
ಸಂಕಪಾಳ, ಮಂಜು ತೇಲಿ ಇದ್ದರು.