ಹೊಸದಿಲ್ಲಿ: ದೇಶದ ಅತ್ಯಂತ ಚರ್ಚಿತ ಲವ್ ಜೆಹಾದ್ ಪ್ರಕರಣದಲ್ಲಿ ಸೋಮವಾರ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದ್ದು, ಹದಿಯಾಳಿಗೆ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಿದೆ. ಜತೆಗೆ ಈಕೆಯ ಸಂಪೂರ್ಣ ಜವಾಬ್ದಾರಿಯನ್ನು ಕಾಲೇಜಿನ ಡೀನ್‌ಗೆ ವಹಿಸಿ ಅದು ಆದೇಶ ಹೊರಡಿಸಿದೆ.
ಅಲ್ಲದೆ ಇದೇ ಮೊದಲ ಬಾರಿಗೆ ಕೋರ್ಟ್‌ಗೆ ಹಾಜರಾದ ಹದಿಯಾ, “ತನಗೆ ಸ್ವಾತಂತ್ರ್ಯ ಬೇಕು. ನಾನು ನನ್ನ ಪತಿಯನ್ನು ಭೇಟಿ ಮಾಡಬೇಕು, ಆತನ ಜತೆಗೆ ಹೋಗಬೇಕು’ ಎಂದು ಮನವಿ ಮಾಡಿಕೊಂಡಳು. ಆದರೆ ಈ ಬಗ್ಗೆ ಯಾವುದೇ ಆದೇಶ ನೀಡದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂರು ಸದಸ್ಯರ ಪೀಠ ಸದ್ಯಕ್ಕೆ ಆಕೆಗೆ ವಿದ್ಯಾಭ್ಯಾಸ ಮುಂದು ವರಿಸಲು ಅವಕಾಶ ನೀಡಿತು. ಈ ಮೂಲಕ ಆಕೆಗೆ ಗೃಹ ಬಂಧನದಿಂದ ಸ್ವಾತಂತ್ರ್ಯ ನೀಡಿ ಎಂಬ ಮನವಿ ಪುರಸ್ಕರಿಸಿತು.
ಮೊನ್ನೆಯಷ್ಟೇ ಕೇರಳದಿಂದ ದಿಲ್ಲಿಗೆ ಬಂದಿದ್ದ ಹದಿಯಾ, ಸೋಮವಾರ ಸುಪ್ರೀಂ ಕೋರ್ಟ್‌ನ ಮುಂದೆ ಹಾಜರಾದಳು. ಈ ಸಂದರ್ಭದಲ್ಲಿ ಅದು ಸುಮಾರು 30 ನಿಮಿಷಗಳವರೆಗೆ ಹದಿಯಾ ಅಹವಾಲು ಕೇಳಲು ಅವಕಾಶ ನೀಡಿತು. ಇದೇ ವೇಳೆ ಅದು ನಿನ್ನ ಭವಿಷ್ಯದ ಬಗ್ಗೆ ಯಾವ ಕನಸನ್ನು ಹೊಂದಿರುವೆ ಎಂದು ಪ್ರಶ್ನಿಸಿತು. ಇದಕ್ಕೆ ಆಕೆ ನನಗೆ ಸ್ವಾತಂತ್ರ್ಯ ಬೇಕು ಎಂದಷ್ಟೇ ಹೇಳಿದಳು. ಅನಂತರ ಆಕೆ ಹಿಂದೆ ವ್ಯಾಸಂಗ ಮಾಡುತ್ತಿದ್ದ ತಮಿಳುನಾಡಿನ ಸೇಲಂನಲ್ಲಿ ಹೋಮಿಯೋಪತಿ ವೈದ್ಯಕೀಯ ಕೋರ್ಸ್ ಮುಂದುವರಿಸುವಂತೆ ಸೂಚಿ ಸಿದೆ. ಅಲ್ಲದೆ, ಆಕೆಯನ್ನು ಪುನಃ ಅಡ್ಮಿಶನ್ ಮಾಡಿಸಿ ಕೊಳ್ಳಬೇಕು ಹಾಗೂ ಆಕೆಗೆ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು ಎಂದು ಹೋಮಿಯೋಪತಿ ಕಾಲೇಜಿಗೆ ಕೋರ್ಟ್ ಆದೇಶಿಸಿದ್ದಲ್ಲದೆ, ಕಾಲೇಜಿನ ಡೀನ್‌ರನ್ನು ಆಕೆಯ ಪೋಷಕರನ್ನಾಗಿ ನೇಮಿಸಬೇಕೆಂದು ಸೂಚಿಸಿದೆ. ಕೇರಳ ಪೊಲೀಸರು ಹದಿಯಾಗೆ ಭದ್ರತೆ ಒದಗಿಸಿ, ಆಕೆಯನ್ನು ಕಾಲೇಜಿಗೆ ಕಳುಹಿಸುವ ವ್ಯವಸ್ಥೆಯನ್ನು ಶೀಘ್ರ ಮಾಡಬೇಕೆಂದೂ ಹೇಳಿದೆ.
ಪುತ್ರಿಯನ್ನು ಬಲವಂತವಾಗಿ ಮತಾಂತರ ಮಾಡ ಲಾಗಿದೆ ಎಂದು ಹದಿಯಾ ತಂದೆ ಅಶೋಕನ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಶಫೀನ್ ಜತೆಗಿನ ವಿವಾಹವನ್ನು ರದ್ದುಗೊಳಿಸಿದ ಕೇರಳ ಹೈಕೋರ್ಟ್, ಹದಿಯಾಳನ್ನು ಪಾಲಕರ ವಶಕ್ಕೊಪ್ಪಿಸಿತ್ತು. ಆದರೆ ಅನಂತರ ಶಫೀನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅಲ್ಲದೆ ಪ್ರಕರಣವನ್ನು ರಾಷ್ಟ್ರೀಯ
ತನಿಖಾದಳ ವಹಿಸಿಕೊಂಡಿದ್ದು, ಮತಾಂತರ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದೆ.
5 ಗಂಟೆ ಅನಂತರವೂ ನಡೆಯಿತು ವಿಚಾರಣೆ: ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯದಲ್ಲಿ ಸುಮಾರು ಎರಡು ಗಂಟೆ ವಾದ ನಡೆಸಿತು. ಕೇರಳದಲ್ಲಿ ನಡೆದಿರುವ ಮತಾಂತರದ ವರದಿಗಳನ್ನು ಎನ್‌ಐಎ ನೀಡಿತು. ಈ ಮಧ್ಯೆ ಪ್ರಕರಣದ ವಿಚಾರಣೆಯನ್ನು ಗೌಪ್ಯವಾಗಿ ನಡೆಸಬೇಕೆಂದು ಹದಿಯಾಳ ತಂದೆ ಅಶೋಕನ್ ಆಗ್ರಹಿಸಿದರಾದರೂ, ಶಫೀನ್ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕೋರ್ಟ್ ಕಲಾಪ 5 ಗಂಟೆಯ ಅನಂತರವೂ ಮುಂದು ವರಿದಿತ್ತು. ಅನಂತರ ವಿಚಾರಣೆಯನ್ನು ಜನವರಿಗೆ ಮುಂದೂಡಲಾಗಿದೆ.