ಬೆಂಗಳೂರು: ಸಮಾಜಕ್ಕೆ ಅಂಟಿದ್ದ ಜಡತ್ವವನ್ನು ಹೋಗಲಾಡಿಸಲು ಶ್ರಮಿಸಿದ್ದ ವಚನ ಸಂಸ್ಕೃತಿಯ ಹರಿಕಾರ ಬಸವಣ್ಣನವರ ಅನುಯಾಯಿ, ಆಪ್ತ ಸ್ನೇಹಿತರಾಗಿದ್ದ ಹಡಪದ ಅಪ್ಪಣ್ಣ ಅವರು ಶ್ರಮ, ಕಾಯಕ ಸಂಸ್ಕೃತಿಯ ನಿಜವಾದ ಯೋಗಿ’ ಎಂದು ಬಾಗಲಕೋಟೆಯ ಜಮಖಂಡಿ ಮಧುರ ಖಂಡಿಯ ಶರಣ ಈಶ್ವರ್ ಮಂಟೂರ ಹೇಳಿದರು.
ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ರಾಜ್ಯ ಮಟ್ಟದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
“ಶಾಲೆಗೆ ಹೋಗದಿದ್ದರೂ, ಅಪ್ಪಣ್ಣ ಅವರು 2,051 ವಚನಗಳನ್ನು ಬರೆದು ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಅಪ್ಪಣ್ಣ , ಅವರ ಪತ್ನಿ ನಿಂಗಮ್ಮ ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. 12 ನೇ ಶತಮಾನದಲ್ಲಿ ವ್ಯಕ್ತಿಗಿಂತ ಕಾಯಕ ಮುಖ್ಯವಾಗಿತ್ತು. ಆದರೆ ಈಗ ಆ ಪ್ರವೃತ್ತಿ ಇಲ್ಲ. ಕಾಯಕಕ್ಕಿಂತ ವ್ಯಕ್ತಿಯೇ ಮುಖ್ಯವಾಗುತ್ತಿರುವುದು ದುರದೃಷ್ಟಕರ’ ಎಂದು ಮಾರ್ಮಿಕವಾಗಿ ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ನಿರ್ದೇಶಕಿ ಕೆ.ಎಂ. ಜಾನಕಿ ಮಾತನಾಡಿ, ಅಪ್ಪಣ್ಣ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರ ವಚನ, ತತ್ವಗಳು ಎಲ್ಲರಿಗೂ ಅನ್ವಯವಾಗುತ್ತದೆ. ಇಂತಹ ಮಹಾನ್ ವ್ಯಕ್ತಿಗಳ ಸಾಧನೆಯನ್ನು ಗುರುತಿಸಿ, ನೆನಪಿಸುವಂತಹ ಕಾರ್ಯ ಮತ್ತಷ್ಟು ಆಗಬೇಕಿದೆ ಎಂದರು.
ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಮಹಾ ಸ್ವಾಮೀಜಿ ಆಶೀರ್ವಚನ ನೀಡಿದರು. ಹಡಪದ ಸಮಾಜದ ಅಧ್ಯಕ್ಷ ಅಣ್ಣಾಜಿ ರಾವ್ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ದಾವಣಗೆರೆಯ ಬಸವ ಕಲಾಲೋಕ ತಂಡದಿಂದ ವಚನ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉದ್ಘಾಟನೆಗೂ ಮೊದಲು ಪುರಭವನದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಜಾನಪದ ವೈವಿಧ್ಯಮಯ ಕಲಾ ತಂಡಗಳಿಂದ ಮೆರವಣಿಗೆ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಚೆಣ್ಣೂರು, ರಂಜಿತಾ ಇತರರಿದ್ದರು.