ಲಂಡನ್: ಕಳೆದ ಮಾರ್ಚ್‌ನಲ್ಲಿ ನಿಧನರಾದ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಅವರ ವೀಲ್ ಚೇರ್ ಸೇರಿದಂತೆ ಸುಮಾರು 22 ಸಾಮಗ್ರಿಗಳನ್ನು ಲಂಡನ್‌ನಲ್ಲಿ ಹರಾಜು ಹಾಕಲು ನಿರ್ಧರಿಸಲಾಗಿದೆ. ಅ.31 ಹಾಗೂ ನವೆಂಬರ್ 8 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಅವರ ವಿಶಿಷ್ಟ ವೀಲ್ ಚೇರ್, ಪಿಎಚ್‌ಡಿ ಪ್ರಬಂಧ ಹಾಗೂ ಹಲವು ವೈಜ್ಞಾನಿಕ ಸಿದ್ಧಾಂತಗಳನ್ನು ಹರಾಜಿಗೆ ಇಡಲಾಗಿದೆ. 22ನೇ ವಯಸ್ಸಿನಲ್ಲೇ ಮೋಟಾರ್ ನ್ಯೂರಾನ್ ರೋಗಕ್ಕೆ ತುತ್ತಾಗಿದ್ದ ಹಾಕಿಂಗ್, ಜೀವಿತಾವಧಿಯಲ್ಲಿ ಹಲವು ಸಿದ್ಧಾಂತಗಳನ್ನು ಮಂಡಿಸಿದ್ದಾರೆ. 1965ರಲ್ಲಿ ಮಂಡಿಸಿದ ಪಿಎಚ್‌ಡಿ ಪ್ರಬಂಧಕ್ಕೆ 1 ಕೋಟಿ ಯಿಂದ 1.50 ಕೋಟಿ ರೂ. ಅಂದಾಜು ಬೆಲೆ ಕಟ್ಟಲಾಗಿದೆ. ಇವರ ಕೈಬರಹ ದಲ್ಲಿರುವ ಈ ಪ್ರತಿಗಳು ಅವರ ಆನಾರೋಗ್ಯದ ಕಾರಣ ದಿಂದಾಗಿ ಓರೆಕೋರೆಯಾಗಿದೆ. ಈ ಪ್ರಬಂಧವು ವಿಜ್ಞಾನ ವಲಯದಲ್ಲಿ ಮಹತ್ವದ ದಾಖಲೆಗಳಾಗಿವೆ ಎಂದು ಹರಾಜು ಸಂಸ್ಥೆ ಕ್ರಿಸ್ಟೀ ಹೌಸ್ ಹೇಳಿದೆ.