Advertisement

ಗುರುವಾಯನಕೆರೆಗೆ ವಿಷಯುಕ್ತ ನೀರು ? ಸಾವಿರಾರು ಮೀನುಗಳ ಸಾವು

01:25 AM Mar 15, 2022 | Team Udayavani |

ಬೆಳ್ತಂಗಡಿ: ಕೆರೆಗಳೇ ಇಲ್ಲದೆ ಒತ್ತುವರಿಯಾಗುತ್ತಿರುವ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಏಕೈಕ ಅತೀ ದೊಡ್ಡ ಗುರುವಾಯನಕೆರೆಯಲ್ಲಿ ಮಲಿನ ನೀರು ಕೆರೆ ನೀರಿಗೆ ಸೇರಿದ ಪರಿಣಾಮ ಸೋಮವಾರ ಸಾವಿರಾರು ಮೀನುಗಳು ಜೀವತೆತ್ತ ಘಟನೆ ನಡೆದಿದೆ.

Advertisement

ಕುವೆಟ್ಟು ಗ್ರಾ.ಪಂ.ಗೆ ಒಳಪಟ್ಟಂತೆ 14.71 ಎಕ್ರೆ ವಿಸ್ತೀರ್ಣದ ಗುರುವಾಯನಕೆರೆ (ಗುರುವಯ್ಯನಕೆರೆ)ಯಲ್ಲಿ ಕಾಟ್ಲ, ಥಿಲಾಪಿಯಾ, ರೋಹು ಸಾಕು ಮೀನುಗಳು ಸೇರಿದಂತೆ ಅನೇಕ ಬಗೆಯ ಮೀನುಗಳಿವೆ. ಸೋಮವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಹಲವು ಮೀನುಗಳು ಸಾವನ್ನಪ್ಪಿರುವುದನ್ನು ಕಂಡ ಸ್ಥಳೀಯರು ಗ್ರಾ.ಪಂ.ಗೆ ಮಾಹಿತಿ ನೀಡಿದರು. 50 ಗ್ರಾಂನಿಂದ 5 ಕೆಜಿ.ವರೆಗೆ ತೂಗುವ ಮೀನುಗಳು ಈ ಕೆರೆಯಲ್ಲಿವೆ.

ವಿಷ ಪ್ರಾಶನವಾಯಿತೇ?
ಒಂದೆರಡು ವಾರಗಳಿಂದ ಕೆರೆಯ ನೀರಿನ ಬಣ್ಣ ಬದಲಾಗಿರುವ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿ ಸಿದ್ದರು. ಸೋಮವಾರ ಇದ್ದ ಕ್ಕಿದ್ದಂತೆ ಕಾಟ್ಲಾ ಜಾತಿಯ ಸಣ್ಣ ಮೀನುಗಳು ಉಸಿರಾಟ ತೊಂದರೆಯಿಂದ ಸಾವನ್ನಪ್ಪಿವೆ. ನೀರಿಗೆ ವಿಷ ಪ್ರಾಶನ ಮಾಡಲಾಗಿದೆಯೇ ಅಥವಾ ಮಲಿನ ನೀರು ಸೇರಿ ಮೀನುಗಳು ಸಾವನ್ನಪ್ಪಿ ವೆಯೇ ಎಂಬುದು ಸ್ಪಷ್ಟವಾಗಿಲ್ಲ.

ಸ್ಥಳಕ್ಕೆ ತಹಶೀಲ್ದಾರ್‌ ಮಹೇಶ್‌ ಜೆ., ತಾ.ಪಂ. ಇ.ಒ. ಕುಸುಮಾಧರ್‌ ಭೇಟಿ ನೀಡಿದರು. ನೀರನ್ನು ಸಂಗ್ರಹಿಸಿ ಮಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಯಿತು. ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಆಶಾಲತಾ, ಉಪಾಧ್ಯಕ್ಷ ಪ್ರದೀಪ್‌ ಶೆಟ್ಟಿ, ಪಿಡಿಒ ಗೀತಾ ಸಾಲಿಯಾನ್‌ ಸ್ಥಳದಲ್ಲಿದ್ದರು.

ಸಂಸ್ಥೆಯ ಮಲಿನ ನೀರು ಕೆರೆಗೆ
ಕೆರೆಯ ಸಮೀಪದಲ್ಲಿ ಖಾಸಗಿ ಸಂಸ್ಥೆಯೊಂದಿದ್ದು ಅಲ್ಲಿನ ಮಲಿನ ನೀರನ್ನು ನೇರವಾಗಿ ಕೆರೆಗೆ ಬಿಡಲಾಗುತ್ತಿದೆ. ಸಂಸ್ಥೆ ಪಕ್ಕದಲ್ಲಿ ಕೆರೆಯ ನೀರು ಸಂಪೂರ್ಣ ನೀಲಿ ಬಣ್ಣಕ್ಕೆ ತಿರುಗಿದೆ.

Advertisement

ಏಲಂ ಪಡೆದವರಿಗೆ ನಷ್ಟ
ಗುರುವಾಯನಕೆರೆಯಿಂದ ಮೀನು ಹಿಡಿಯಲು ಪ್ರತೀ ವರ್ಷ ಏಲಂ ನಡೆಯುತ್ತದೆ. 2018ರಲ್ಲಿ ಮೂರು ವರ್ಷಕ್ಕೆ ತಲಾ 45,000 ರೂ.ಗೆ ಏಲಂನಲ್ಲಿ ಪಡೆದಿದ್ದೆವು. 2019ರಲ್ಲಿ ಮೀನು ತೆರವುಗೊಳಿಸಿದ ಬಳಿಕ ಕೋವಿಡ್‌ ಆವರಿಸಿದ್ದರಿಂದ ಎರಡು ವರ್ಷ ಮೀನು ಹಿಡಿದಿರಲಿಲ್ಲ. ಎರಡು ವರ್ಷಗಳ ಹಿಂದೆ ಕಾಟ್ಲ, ಥಿಲಾಪಿಯಾ, ರೋಹು ಸೇರಿ 2 ಲಕ್ಷ ಮೀನಿನ ಮರಿಗಳನ್ನು ಕೆರೆಗೆ ಬಿಟ್ಟಿದ್ದೆವು. ಪಂಚಾಯತ್‌ ಬಳಿ ಮನವಿ ಮಾಡಿ 2023ರ ವರೆಗೆ ಹೆಚ್ಚುವರಿ ಅವಧಿ ಪಡೆಯಲಾಗಿತ್ತು. ಈ ವರ್ಷ ಎಪ್ರಿಲ್‌/ ಮೇಯಲ್ಲಿ ಮೀನು ಹಿಡಿಯಲು ನಿರ್ಧರಿಸಿದ್ದೆವು ಎಂದು ಏಲಂ ಪಡೆದ ಪುತ್ಯೆ ನಿವಾಸಿ ಅಶೋಕ್‌ ಗೋವಿಯಸ್‌ ಹಾಗೂ ಸುಭಾಷ್‌ ಉದಯವಾಣಿಗೆ ತಿಳಿಸಿದ್ದಾರೆ.

ನೀರು ಕಲುಷಿತವಾಗಿರುವ ಅನುಮಾನ ವ್ಯಕ್ತವಾಗಿದ್ದರಿಂದ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಇಂದು ಎಸಿ ಸ್ಥಳಕ್ಕೆ ಭೇಟಿ ನೀಡಲಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ಸತ್ತ ಮೀನುಗಳನ್ನು ಆಹಾರಕ್ಕೆ ಬಳಸದಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ.
ಮಹೇಶ್‌ ಜೆ., ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next