Advertisement
ಗುರುವಾಯನಕೆರೆ ಪೇಟೆ ಬೆಳೆಯುತ್ತಿದೆ. ಕಿರಿದಾದ ರಸ್ತೆಗಳಲ್ಲೇ ಸಂಚರಿಸಬೇಕಲ್ಲ ಎಂಬ ಬೇಸರ ಕಾಡುವುದು ನಿಜ. ಆದರೆ ಬೆಳ್ತಂಗಡಿ ತಾಲೂಕಿನ ಪ್ರಮುಖ ಜಂಕ್ಷನ್ ಆಗಿ ಗುರುತಿಸಿಕೊಂಡಿರುವ ಇದು ತಾಲೂಕಿನ ಹಲವು ಗ್ರಾಮಗಳಿಗಷ್ಟೇ ಸಂಪರ್ಕ ಕಲ್ಪಿಸುವುದಿಲ್ಲ. ಒಂದು ಬದಿ ಉಪ್ಪಿನಂಗಡಿ, ಪುತ್ತೂರು, ಸುಳ್ಯ, ಮಡಿಕೇರಿ, ಮೈಸೂರು ಭಾಗಗಳಿಂದ ಸಂಪರ್ಕ ಕಲ್ಪಿಸಿದರೆ, ಇನ್ನೊಂದು ಬದಿ ಮೂಡಬಿದಿರೆ, ಕಾರ್ಕಳ, ಉಡುಪಿ, ಕುಂದಾಪುರ, ಹುಬ್ಬಳ್ಳಿ ಮೊದಲಾದ ಪ್ರದೇಶಗಳನ್ನೂ ಬೆಸೆಯುತ್ತದೆ.
ಇದೇ ಕಾರಣದಿಂದ ಮಂಗಳೂರು, ಪುತ್ತೂರು, ಉಜಿರೆ ಇತ್ಯಾದಿ ಪ್ರದೇಶಗಳ ಶಾಲಾ- ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಈ ಜಂಕ್ಷನ್ ಬಳಸುತ್ತಾರೆ. ಬೆಳ್ತಂಗಡಿ, ಪುತ್ತೂರು ತಾಲೂಕುಗಳ ಹತ್ತಾರು ಗ್ರಾಮಗಳ ಜನರೂ ಬೇರೆಡೆ ತೆರಳಲು ಇದನ್ನೇ ಆಶ್ರಯಿಸುತ್ತಾರೆ. ಹಾಗಾಗಿ ನಿತ್ಯವೂ ಸಾವಿರಾರು ವಾಹನಗಳು, ಸಾವಿರಾರು ಜನರ ಓಡಾಟವಿದ್ದೇ ಇದೆ.
Related Articles
ಈ ಜಂಕ್ಷನ್‌ನಲ್ಲಿ ಮೂಲ ಸೌಕರ್ಯಗಳು ಇದೆ. ಕೆಲವೊಮ್ಮೆ ಇಲ್ಲವೆಂದೂ ಅನಿಸುತ್ತದೆ. ಇಲ್ಲಿ ಬಸ್ ನಿಲ್ದಾಣವಿದೆ, ಸುಸಜ್ಜಿತವಾಗಿಲ್ಲ. ಒಂದು ಬದಿಯಲ್ಲಿ ಮಾತ್ರ ನಿರ್ಮಾಣವಾಗಿದೆ. ಹೆದ್ದಾರಿ ಹೊಂಡ-ಗುಂಡಿಗಳಿಂದ ತುಂಬಿಕೊಂಡಿದೆ. ಕುಡಿಯುವ ನೀರಿನ ವ್ಯವಸ್ಥೆ ಬೇಸಗೆಯಲ್ಲಿ ಮಾತ್ರ ಇರುತ್ತದೆ. ಶೌಚಾಲಯವೊಂದಿದೆ, ಆರೋಗ್ಯ ಕೇಂದ್ರಕ್ಕೆ ಬೆಳ್ತಂಗಡಿಗೆ ಬರಬೇಕಿದೆ.
Advertisement
ರಸ್ತೆ ವಿಸ್ತಾರ-ಸುಸಜ್ಜಿತ ನಿಲ್ದಾಣಪ್ರಮುಖವಾಗಿ ಇಲ್ಲಿಗೇನು ಬೇಕು ಎಂದು ವಿಮರ್ಶಿಸಿದರೆ, ಹೆದ್ದಾರಿ ಸೇರಿದಂತೆ ಇಲ್ಲಿನ ರಸ್ತೆಗಳು ವಿಸ್ತಾರಗೊಳ್ಳಬೇಕು. ಪ್ರಸ್ತುತ ಒಂದು ವಾಹನ ನಿಂತರೂ, ಹಿಂದಿನಿಂದ ಬರುವ ಎಲ್ಲಾ ವಾಹನಗಳು ಸ್ಥಗಿತಗೊಳ್ಳಬೇಕು. ಉಡುಪಿ ರಸ್ತೆಯಲ್ಲಿ ತೆರಳುವ ಪ್ರಯಾಣಿಕರಿಗೆ ಮಾತ್ರ ನಿಲ್ದಾಣದ ವ್ಯವಸ್ಥೆ ಇದೆ. ಮಂಗಳೂರು, ಉಪ್ಪಿನಂಗಡಿ ರಸ್ತೆಯಲ್ಲಿ ತೆರಳುವ ಪ್ರಯಾಣಿಕರು ಅಂಗಡಿ ಮುಂಗಟ್ಟುಗಳ ಮುಂದೆ ಕಾಯಬೇಕಿದೆ. ಸುಸಜ್ಜಿತ ಬಸ್ ನಿಲ್ದಾಣದೊಂದಿಗೆ ಎಲ್ಲ ಮೂಲ ಸೌಕರ್ಯಗಳು ದೊರೆತರೆ ತಾಲೂಕಿಗೆ ದೊಡ್ಡಣ್ಣನಾಗಬಹುದಾದ ಲಕ್ಷಣ ಈ ಜಂಕ್ಷನ್‌ಗಿದೆ. ಬಸುಗಳದ್ದೇ ದರ್ಬಾರು
ಬೆಳಗ್ಗೆ ಹಾಗೂ ಸಂಜೆಯ ಹೊತ್ತು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು- ಸಾರ್ವಜನಿಕರು ಬಸ್ಸಿಗಾಗಿ ಕಾಯುತ್ತಿರುತ್ತಾರೆ. ಪುತ್ತೂರು, ಉಪ್ಪಿನಂಗಡಿ, ಸುಳ್ಯ, ಮಂಗಳೂರು, ಬಿ.ಸಿ.ರೋಡು, ಉಜಿರೆ, ಧರ್ಮಸ್ಥಳ, ವೇಣೂರು, ಮೂಡಬಿದಿರೆ, ಕಾರ್ಕಳ, ಉಡುಪಿ, ಕುಂದಾಪುರ ಮೊದಲಾದ ಪ್ರದೇಶಗಳ ಬಸ್ಸುಗಳು ಇಲ್ಲಿಗೆ ಆಗಮಿಸುತ್ತವೆ. ಬಸ್ ನಿಲ್ದಾಣ ಅಗತ್ಯ
ಗುರುವಾಯನಕೆರೆಯ ಟ್ರಾಫಿಕ್ ಸಮಸ್ಯೆ ನಿವಾರಿಸಲು ಪ್ರಮುಖವಾಗಿ ಎಲ್ಲಾ ಬಸ್ಸುಗಳು ಬಂದು ಹೋಗುವಂಥ ಬಸ್ ನಿಲ್ದಾಣ ನಿರ್ಮಿಸಬೇಕು. ಆಗ ಬಸ್ಸುಗಳು ರಸ್ತೆ ಬದಿ ನಿಲ್ಲುವುದಿಲ್ಲ. ಜತೆಗೆ ಜನರಿಗೂ ಒಂದೇ ಕಡೆ ಎಲ್ಲಾ ಪ್ರದೇಶದ ಬಸ್ಸುಗಳು ಸಿಗುತ್ತವೆ. ಇದರಿಂದ ಟ್ರಾಫಿಕ್ ಜಾಮ್‌ನಂಥ ಸಮಸ್ಯೆ ಇರದು.
- ಓಡಿಯಪ್ಪ
ಸಬ್‌ಇನ್ಸ್‌ಪೆಕ್ಟರ್, ಸಂಚಾರಿ
ಪೊಲೀಸ್ ಠಾಣೆ, ಬೆಳ್ತಂಗಡಿ ವರ್ಷದೊಳಗೆ ಅಭಿವೃದ್ಧಿ
ಒಂದು ವರ್ಷದಲ್ಲಿ ಪೇಟೆಯನ್ನು ಪರಿಪೂರ್ಣ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಯೋಜನೆ ಸಿದ್ಧವಿದೆ. ಹೆದ್ದಾರಿ ಅಗಲಗೊಳಿಸುವ ಕಾರ್ಯವನ್ನು ಇಲಾಖೆ ಮಾಡಲಿದ್ದು, ಮೂಲ ಸೌಕರ್ಯವನ್ನು ನಾವು ಒದಗಿಸುತ್ತೇವೆ. ಶೌಚಾಲಯ, ಫುಟ್‌ಪಾತ್ ಎಲ್ಲವೂ ಸುಸಜ್ಜಿತಗೊಳ್ಳಲಿದೆ. ಯಾರಿಗೂ ತೊಂದರೆಯಾಗದಂತೆ ಪೇಟೆಯನ್ನು ಅಭಿವೃದ್ಧಿಗೊಳಿಸಲಾಗುವುದು.
– ಅಶೋಕ್ ಕೋಟ್ಯಾನ್
ಅಧ್ಯಕ್ಷರು, ಕುವೆಟ್ಟು ಗ್ರಾ.ಪಂ. ಕಿರಣ್ ಸರಪಾಡಿ