ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಗುರುನಾರಾಯಣ ರಾತ್ರಿ ಶಾಲೆಯ ವಾರ್ಷಿಕ ಕ್ರೀಡೋತ್ಸವವು ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯಲ್ಲಿರುವ ಮಹಾನಗರ ಪಾಲಿಕೆಯ ಶಾಲಾ ಆವರಣದಲ್ಲಿ ನೆರವೇರಿತು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಇರುವುದು ಸಹಜ. ಗೆಲುವು ಎಂಬುದು ನಮ್ಮಲ್ಲಿರುವ ಸಾಮರ್ಥ್ಯವನ್ನು ತೋರಿಸಿಕೊಡುತ್ತದೆ. ಅದೇ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಮುಂದು ವರಿಯುವುದು ಮುಖ್ಯವಾಗಿದೆ. ಸೋಲಿನಿಂದ ಹಿಂಜರಿಯದೆ ಅದನ್ನು ಧೈರ್ಯದಿಂದ ಎದುರಿಸಿ ಪ್ರಗತಿಯ ಮೆಟ್ಟಿಲು ಹತ್ತಬೇಕು. ಅದರಂತೆ ಜೀವನದಲ್ಲಿ ಬರುವ ಅನೇಕ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಯಶಸ್ವಿಯಾಗಬೇಕು. ವಿದ್ಯಾರ್ಥಿಗಳು ಕೇವಲ ಶಿಕ್ಷಣವನ್ನು ಪಡೆದರೆ ಸಾಲದು, ಅದರೊಂದಿಗೆ ಸಂಸ್ಕೃತಿ-ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಪ್ರಜೆಗಳಾಗಿ ಬಾಳಬೇಕು. ತಮ್ಮ ಸಾಧನೆಯ ಮುಖಾಂತರ ಶಾಲೆ, ಹೆತ್ತವರು ಹಾಗೂ ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್‌ಗೆ ಹೆಸರು ತರಬೇಕು ಎಂದು ನುಡಿದು ಶುಭ ಹಾರೈಸಿದರು.
ಶಾಲಾ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್ ಅವರು ಮಾತನಾಡಿ, ಹಿರಿಯರಾದ ಜಯ ಸಿ. ಸುವರ್ಣ ಮತ್ತು ನಿತ್ಯಾನಂದ ಡಿ. ಕೋಟ್ಯಾನ್ ಅವರು ಶಾಲೆಯ ಏಳ್ಗೆಗಾಗಿ ನಿರಂತರವಾಗಿ ಸಹಕರಿಸುತ್ತಿದ್ದಾರೆ. ಅವರ ಉದಾತ್ತ ವಿಚಾರವೇ ಶಾಲೆಯ ಏಳ್ಗೆಗೆ ದಾರಿ ದೀಪವಾಗಿದೆ ಎಂದು ನುಡಿದರು.
ಜಗದೀಶ್ ಅಮೀನ್ ಅವರು ಮಾತನಾಡಿ, ಕ್ರೀಡೆಯಲ್ಲಿ ಯಾವ ರೀತಿ ಉತ್ಸಾಹ ತೋರುವಿರೋ ಅದೇ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಮುಂದುವರಿಯಬೇಕು. ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭಾವಂತರಾದಾಗ ಮಾತ್ರ ವಿದ್ಯಾರ್ಥಿ ಜೀವನಕ್ಕೊಂದು ಅರ್ಥ ಬರುತ್ತದೆ ಎಂದರು.
ಪದಾಧಿಕಾರಿಗಳಾದ ದೇವೇಂದ್ರ ಬಂಗೇರ, ಚಂದ್ರಹಾಸ ಕೋಟ್ಯಾನ್, ಮೋಹನ್ ಪೂಜಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಅತಿಥಿಗಳನ್ನು ಹಾಗೂ ಪದಾಧಿಕಾರಿಗಳನ್ನು ಶಾಲೆಯ ಮುಖ್ಯ ಶಿಕ್ಷಕರು ಗೌರವಿಸಿದರು. ಕ್ರೀಡೋತ್ಸವದಲ್ಲಿ ಹಳೆವಿದ್ಯಾರ್ಥಿ ಅರುಣ್, ರಾಜೇಶ್ ಸಾಂತಾಕ್ರೂಜ್ ಬಳಗದವರ ವತಿಯಿಂದ ವಿದ್ಯಾರ್ಥಿಗಳಿಗೆ ಉಪಾಹಾರ ಮತ್ತು ಊಟದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಮುಖ್ಯ ಶಿಕ್ಷಕ ರಾಮಚಂದ್ರಯ್ಯ ಸಿ., ಶಿಕ್ಷಕರಾದ ಎಂ. ಐ. ಬಡಿಗೇರ, ಸಿದ್ಧರಾಮ ದಶಾಮಾನೆ, ಶಿವಾನಂದ ಪಾಟೀಲ್, ಶಿಕ್ಷಕಿಯರಾದ ವಿಮಲಾ ಡಿ. ಪೂಜಾರಿ, ಮೋಹಿನಿ ಪೂಜಾರಿ, ಹೇಮಾ ಗೌಡ, ಶಿಕ್ಷಕೇತರ ಸಿಬಂದಿಗಳಾದ ನಮಿತಾ ಸುವರ್ಣ, ಸುನಿಲ್ ಪಾಟೀಲ್ ಉಪಸ್ಥಿತರಿದ್ದು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದರು. ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.