ಬೆಂಗಳೂರು: ಗುರುಕುಲ ಪರಂಪರೆಯು ಸಂಗೀತ ಕಲಿಕೆಗೆ ಉತ್ತಮ ಮಾದರಿಯಾಗಿದ್ದು, ಇದರಿಂದ ಶ್ರೇಷ್ಠ ಕಲಾವಿದರು ಹೊರಹೊಮ್ಮುತ್ತಾರೆ ಎಂದು ಹಿಂದೂಸ್ತಾನಿ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ತಿಳಿಸಿದರು.
ನಗರದ ಜೆ.ಸಿ ರಸ್ತೆಯ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮಕ್ಕೆ ತಿಂಗಳ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಸಂಗೀತವನ್ನು ಯಾರೋ ಬೋಧಿಸಿ ಕಲಿಸಲು ಸಾಧ್ಯವಿಲ್ಲ.
ಅದು ನಿರಂತರ ಕಲಿಕೆ ಹಾಗೂ ಉತ್ತಮ ವಾತಾವರಣ ಮಾತ್ರ ಫಲಿಸುತ್ತದೆ. ಅದರಂತೆಯೇ ನಾನು ಕಳೆದ 50 ವರ್ಷಗಳಿಗಿಂತಲೂ ಹೆಚ್ಚಿನ ನನ್ನ ಸಂಗೀತ ಪಯಣದಲ್ಲಿ ನಿರಂತರ ಕಲಿಕೆ ಹಾಗೂ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಈ ಸ್ಥಾನ ತಲುಪಿದ್ದೇನೆ ಎಂದು ತಿಳಿಸಿದರು.
ಭಾರತದ ಇತರೆ ಭಾಗಗಳಿಗೆ ಹೋಲಿಸಿದರೆ ಹಿಂದೂಸ್ತಾನಿ ಸಂಗೀತಕ್ಕೆ ಕರ್ನಾಟಕದವರ ಕೊಡುಗೆ ಹೆಚ್ಚಿದೆ. ಇನ್ನು ದೇಶದಲ್ಲಿ ಮೊದಲು ಕರ್ನಾಟಕ ಸರ್ಕಾರ ಧಾರವಾಡದಲ್ಲಿ ಸಂಗೀತ ಕಲಿಕೆಗೆ ಗುರುಕುಲ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದು, ಇಲ್ಲಿ ಯಾವುದೇ ಪಠ್ಯಪುಸ್ತಕ, ಪರೀಕ್ಷೆಗಳ ಗೋಜು ಇರುವುದಿಲ್ಲ.
ಇದರಿಂದ ಉತ್ತಮ ಸಂಗೀತಗಾರರು ರೂಪುಗೊಳ್ಳುತ್ತಾರೆ ಇದೊಂದು ಸ್ವಾಗತರ್ಹ ನಡೆ ಎಂದರು. ಇಷ್ಟು ದಿನಗಳ ನನ್ನ ಸಂಗೀತ ಪಯಣದಲ್ಲಿ 1985ರಲ್ಲಿ ಪೂಣೆಯಲ್ಲಿ ಭೀಮಸೇನ್ ಜೋಷಿಯವರ ಎದುರಲ್ಲಿ ನಡೆದ ಸವಾಯಿ ಗಂಧರ್ವ ಸಮ್ಮೇಳನ ನನ್ನ ಜೀವನಕ್ಕೆ ತಿರುವು ಕೊಟ್ಟಿತು.
ಆ ಕಾರ್ಯಕ್ರಮದಿಂದಲೇ ನಾನು ದೇಶ ವಿದೇಶಗಳಲ್ಲಿ ಪರಿಚಿತನಾದೆ. ಇನ್ನು ಈ ಸಂದರ್ಭದಲ್ಲಿ ಗುರುಗಳಾದ ಬಸವರಾಜ ರಾಜಗುರು ಅವರೊಟ್ಟಿಗೆ ಕಳೆದ ಹಳೆಯ ನೆನಪುಗಳನ್ನು ಅವರು ಮೆಲುಕು ಹಾಕಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಉಪಸ್ಥಿತರಿದ್ದರು.