ಯಾದಗಿರಿ: ಬಿಜೆಪಿ ಪಕ್ಷವು ಜೆಡಿಎಸ್ ನೊಂದಿಗೆ ಮೈತ್ರಿ ಧರ್ಮಪಾಲನೆ ಮಾಡುತ್ತಿಲ್ಲ. ಆರಂಭದಲ್ಲಿ ಅಸಮಾಧಾನವಿತ್ತು, ಆದರೆ ಇದೀಗ ಬಿಜೆಪಿ ನಾಯಕರು ನಮ್ಮ ಪಕ್ಷದ ವರಿಷ್ಠರು ದೆಹಲಿಗೆ ಹೋಗಿ ಬಂದಿರುವ ಶ್ರಮದ ಫಲದ ಕೂಲಿಯೂ ದೊರಕಲಿಲ್ಲ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಸೀಟು ಹಂಚಿಕೆ ವಿಚಾರದಲ್ಲಿ ಅಪಸ್ವರದ ಬೆನ್ನಲ್ಲೇ ಅಸಮಾಧಾನ ಹೊರಹಾಕಿದ ಶಾಸಕ ಶರಣಗೌಡ ಕಂದಕೂರು ಅವರು ಮಂಗಳವಾರ ಯಾದಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಆರಂಭದಿಂದಲೂ ಮೈತ್ರಿಗೆ ವಿರೋಧಿಸಿದ್ದ ಶಾಸಕ ಶರಣಗೌಡ ಕಂದಕೂರು ಅವರು ಬಿಜೆಪಿ ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ, ದೊಡ್ಡ ಸಮಾವೇಶಗಳಿಗೆ ಅಹ್ವಾನಿಸುತ್ತಿಲ್ಲ, ಹೋಳಿ ಹಬ್ಬದ ಬಳಿಕ ಸಭೆ ಮಾಡಿ ನನ್ನ ನಿರ್ಧಾರ ತಿಳಿಸುತ್ತೇನೆ ಎಂದರು.
ಎರಡು, ಮೂರು ಸೀಟುಗಳನ್ನ ಅಂಗಲಾಚಿ ತೆಗೆದುಕೊಳ್ಳುವಂತ ದುಸ್ಥಿತಿ ಜೆಡಿಎಸ್ ಪಕ್ಷಕ್ಕೆ ಬಂದಿಲ್ಲ, ನಮ್ಮ ನಾಯಕರು ಮತ್ತೊಮ್ಮೆ ಮೈತ್ರಿಯನ್ನ ಮರು ಪರಿಶೀಲನೆ ಮಾಡಬೇಕು ಎಂದು ಅಸಮಾಧಾನ ಹೊರಹಾಕಿದರು.
ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದಾಗ ಜೆಡಿಎಸ್ ಶಾಸಕರನ್ನ ಎಲ್ಲಿಯೂ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ, ಆದರೂ ಸಹ ಬೇಸರ ಮಾಡಿಕೊಂಡಿಲ್ಲ, ಆದರೆ ಸ್ವಾಭಿಮಾನದಿಂದ ನಾವು ಸಹ ಆಲೋಚನೆ ಮಾಡಬೇಕಾಗುತ್ತದೆ. ನನಗೆ ಕಾರ್ಯಕರ್ತರೇ ಅಂತಿಮ, ಕಾರ್ಯಕರ್ತರ ಸಮ್ಮುಖದಲ್ಲಿ ಸಭೆ ಕರೆದು ಸ್ಥಳೀಯವಾಗಿ ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯ ರಾಜಕಾರಣದಲ್ಲಿ ಬಿಜೆಪಿ ನಾಯಕರು ನಮ್ಮನ್ನು ಅಗೌರವವಾಗಿ ನಡೆಸಿಕೊಳ್ಳುತ್ತಿದ್ದಾರೆ. ಅಂಗಲಾಚಿ ಲೋಕಸಭೆ ಸೀಟು ಪಡೆಯುವುದು ಬೇಡ ಎಂದು ಶಾಸಕರು ಕಡ್ಡಿ ತುಂಡಾಕಿದ ರೀತಿ ಹೇಳಿದರು.
ಇದನ್ನೂ ಓದಿ: ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ