ಸಿಂಗಾಪುರ: ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಅತೀ ರೋಚಕವಾಗಿ ಗುರುವಾರ(ಡಿ12)ಕೊನೆಯಾಗಿದ್ದು ಭಾರತದ ಜಿಎಂ ಡಿ. ಗುಕೇಶ್ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆಗಿ ಅತ್ಯಮೋಘ ಯಶಸ್ಸು ಕಾಣುವಲ್ಲಿ ಯಶಸ್ವಿಯಾದರು.
ಚೀನದ ಜಿಎಂ, ಹಾಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ನಡುವಿನ ಬುಧವಾರ 13ನೇ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿತ್ತು. ಇದರೊಂದಿಗೆ ಇಬ್ಬರೂ ತಲಾ 6.5 ಅಂಕ ಗಳಿಸಿ ಸಮಬಲದ ಹೋರಾಟದೊಂದಿಗೆ ಮುಂದುವರಿದಿದ್ದರು. ಇಂದು ಗೆಲುವಿನ ಮೂಲಕ ಗುಕೇಶ್ 18 ವರ್ಷ ವಯಸ್ಸಿನಲ್ಲೇ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆದರು.
ಬುಧವಾರ ಬಿಳಿ ಕಾಯಿಯೊಂದಿಗೆ ಆಡಿದ ಡಿ. ಗುಕೇಶ್ ಮತ್ತು ಕಪ್ಪು ಕಾಯಿಯೊಂದಿಗೆ ಆಡಿದ ಲಿರೆನ್ ತಮ್ಮ 68ನೇ ನಡೆಯಲ್ಲಿ ಪಂದ್ಯವನ್ನು ಡ್ರಾಗೊಳಿಸಿಕೊಂಡಿದ್ದರು. 43ನೇ ನಡೆಯ ವರೆಗೂ ಗುಕೇಶ್ ಪಂದ್ಯವನ್ನು ತಮ್ಮ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದರು. ಆದರೆ 44ನೇ ನಡೆಯ ವೇಳೆ ರಾಣಿಯನ್ನು ಚತುರವಾಗಿ ನಡೆಸಿದ ಲಿರೆನ್, ಗುಕೇಶ್ ಅವರ ಗೆಲುವಿನ ಸಾಧ್ಯತೆಗೆ ತಣ್ಣೀರೆರಚಿದ್ದರು.
ಗುಕೇಶ್ ಅವರು ವಿಶ್ವನಾಥನ್ ಆನಂದ್ ನಂತರ ಕ್ಲಾಸಿಕಲ್ ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.
ಗೆಲುವು ತನ್ನದಾಗಿಸಿಕೊಂಡಾಗ ಗುಕೇಶ್ ಗೆ ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬೋರ್ಡ್‌ಗೆ ಹಿಂತಿರುಗಿದಾಗ ಗುಕೇಶ್ ಅವರ ಮುಖದಲ್ಲಿ ಸಂಭ್ರಮದ ಅಲೆ ಇತ್ತು, ಶೀಘ್ರದಲ್ಲೇ ಆನಂದ ಭಾಷ್ಪ ಕೆನ್ನೆಯ ಮೇಲೆ ಇಳಿಯಿತು.