ಅಡಿಲೇಡ್: ಬಾರ್ಡರ್ – ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ (Border Gavaskar Trophy Test Series) ಎರಡನೇ ಪಂದ್ಯದಲ್ಲಿ ಸೋಲು ಕಂಡ ಭಾರತ ತಂಡವು ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಮೂರನೇ ಪಂದ್ಯವು ಬ್ರಿಸ್ಬೇನ್ ನ ಗಾಬಾದಲ್ಲಿ ನಡೆಯಲಿದ್ದು, ತಯಾರಿ ಮಾಡುತ್ತಿದೆ. ಆದರೆ ಅಡಿಲೇಡ್ ನಿಂದ ಬ್ರಿಸ್ಬೇನ್ ಗೆ ಹೊರಡುವ ಮೊದಲು ನಾಯಕ ರೋಹಿತ್ ಶರ್ಮಾ (Rohit Sharma) ಅವರು ಯುವ ಆಟಗಾರನೊಬ್ಬನ ಮೇಲೆ ಸಿಟ್ಟಾದ ಬಗ್ಗೆ ವರದಿಯಾಗಿದೆ.
ಬುಧವಾರ ಟೀಂ ಇಂಡಿಯಾ ಆಟಗಾರರು ಅಡಿಲೇಡ್ ನಿಂದ ಬ್ರಿಸ್ಬೇನ್ ಗೆ ತೆರಳಿದ್ದಾರೆ. ಆದರೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರು ತಡವಾಗಿ ಬಂದ ಕಾರಣ ಟೀಂ ಬಸ್ ಅವರನ್ನು ಬಿಟ್ಟು ತೆರಳಿದೆ ಎಂದು ಸ್ಟಾರ್ ತಕ್ ವರದಿ ಮಾಡಿದೆ.
ಅಲ್ಲದೆ ತಡವಾಗಿ ಬಂದ ಜೈಸ್ವಾಲ್ ಮೇಲೆ ನಾಯಕ ರೋಹಿತ್ ಶರ್ಮಾ ಸಿಟ್ಟಾಗಿದ್ದಾರೆ ಎಂದು ವರದಿ ತಿಳಿಸಿದೆ.
ಟೀಂ ಇಂಡಿಯಾ ಬೆಳಗ್ಗೆ 10 ಗಂಟೆಯ ವಿಮಾನಕ್ಕೆ ಬ್ರಿಸ್ಬೇನ್ ಗೆ ತೆರಳಬೇಕಿತ್ತು. ಹೀಗಾಗಿ 8.30ಕ್ಕೆ ತೆರಳಲು ಸಿದ್ದವಾಗಿದ್ದರು. ಅಡಿಲೇಡ್ ಹೋಟಲ್ ಹೊರಗೆ ಟೀಂ ಬಸ್ ಕಾಯುತ್ತಿತ್ತು. ನಾಯಕ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭೀರ್ ಸೇರಿ ಎಲ್ಲರೂ ಅದರಲ್ಲಿದ್ದರು. ಆದರೆ ಸಮಯವಾದರೂ ಯಶಸ್ವಿ ಜೈಸ್ವಾಲ್ ಹೋಟೆಲ್ ಲಾಬಿಗೆ ಬರಲಿಲ್ಲ. ಸ್ವಲ್ಪ ಸಮಯ ಕಾದ ಇತರ ಆಟಗಾರರು ನಂತರ ಜೈಸ್ವಾಲ್ ಅವರನ್ನು ಬಿಟ್ಟು ವಿಮಾನ ನಿಲ್ದಾಣಕ್ಕೆ ಹೊರಟರು.
20 ನಿಮಿಷದ ಬಳಿಕ ಯಶಸ್ವಿ ಜೈಸ್ವಾಲ್ ಅವರು ಹೋಟೆಲ್ ಲಾಬಿಗೆ ಬಂದಾಗ ಬಸ್ ಹೋದ ವಿಚಾರ ತಿಳಿಯಿತು. ಆದರೆ ಟೀಂ ಮ್ಯಾನೇಜ್‌ಮೆಂಟ್ ಜೈಸ್ವಾಲ್ ಅವರಿಗೆ ಕಾರಿನ ವ್ಯವಸ್ಥೆ ಮಾಡಿತ್ತು. ಭದ್ರತಾ ಸಿಬ್ಬಂದಿಯ ಜತೆಗೆ ಜೈಸ್ವಾಲ್ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೊರಟರು.