ಬೆಂಗಳೂರು: ಗುಜರಿ ಕೇಂದ್ರದ ಜತೆಗೆ ರಾಜ್ಯದ ಇತರೆಡೆ ಸಾರ್ವಜನಿಕರ ಅನುಕೂಲಕ್ಕಾಗಿ “ಸಂಗ್ರಹ ಕೇಂದ್ರ’ಗಳನ್ನು ತೆರೆಯಲಿಕ್ಕೂ ಅವಕಾಶ ಇರಲಿದ್ದು, ಜಿಲ್ಲಾ ಮಟ್ಟದಲ್ಲೇ ವಾಹನಗಳನ್ನು ಗುಜರಿಗೆ ನೀಡಬಹುದು.
ಗುಜರಿ ಕೇಂದ್ರಗಳನ್ನು ತೆರೆಯುವ ಸಂಬಂಧ ಸಾರಿಗೆ ಇಲಾಖೆ ಅರ್ಹ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದ್ದು, ಗುತ್ತಿಗೆ ಪಡೆಯುವ ಸಂಸ್ಥೆಯೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ “ಗುಜರಿ ಸಂಗ್ರಹ ಕೇಂದ್ರ’ಗಳನ್ನೂ ತೆರೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ ಅವಧಿ ಮೀರಿದ ವಾಹನಗಳನ್ನು ಗುಜರಿಗೆ ಹಾಕಲು ಬೆಂಗಳೂರಿಗೇ ಬರಬೇಕೆಂದಿಲ್ಲ.
ಜಿಲ್ಲಾ ಮಟ್ಟದಲ್ಲಿ ಅವಧಿ ಮೀರಿದ ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಸದ್ಯಕ್ಕೆ ಸಾರಿಗೆ ಇಲಾಖೆ ಪ್ರತ್ಯೇಕ ಕೇಂದ್ರಗಳನ್ನು ತೆರೆಯಲು ಅರ್ಜಿ ಆಹ್ವಾನಿಸುತ್ತಿಲ್ಲ. ರಾಜಧಾನಿಯಲ್ಲೇ ಗುಜರಿ ಕೇಂದ್ರಗಳನ್ನು ತೆರೆಯುವ ಏಜೆನ್ಸಿಗಳು ಜಿಲ್ಲೆಗಳಲ್ಲಿ ಸಂಗ್ರಹ ಕೇಂದ್ರಗಳನ್ನು ತೆರೆಯಬಹುದು. ಅಲ್ಲಿ ಸ್ವಯಂಪ್ರೇರಿತವಾಗಿ ವಾಹನಗಳನ್ನು ತಂದುಬಿಡಬಹುದು. ಅವುಗಳನ್ನು ಏಜೆನ್ಸಿಗಳು ಕೇಂದ್ರಕ್ಕೆ ತಂದು ವೈಜ್ಞಾನಿಕವಾಗಿ ಸಾðéಪ್ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ತೆರಿಗೆ ರಿಯಾಯಿತಿ ಮುಂತಾದ ಎಲ್ಲ ಸೌಲಭ್ಯಗಳು ವಾಹನ ಸವಾರರಿಗೆ ದೊರೆಯಲಿವೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ್ ತಿಳಿಸಿದರು.
ಈ ಮಧ್ಯೆ ನೋಂದಾಯಿತ ವಾಹನ ಗುಜರಿ ಕೇಂದ್ರಗಳನ್ನು (ಆರ್‌ವಿಎಸ್‌ಎಫ್) ತೆರೆಯಲು ಸಾರಿಗೆ ಇಲಾಖೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಸಾರ್ವಜನಿಕರು ಗುಜರಿ ನಿಯಮದಡಿ ಕೇಂದ್ರ ಸರಕಾರದ ಪೋರ್ಟಲ್ //www.nsws.gov.in ನಲ್ಲಿ ಏಕಗವಾಕ್ಷಿಯಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಜಾಲತಾಣದಲ್ಲಿ ಪ್ರಕಟ
ನೋಂದಾಯಿತ ವಾಹನಗಳ “ಗುಜರಿ ನೀತಿ- 2022′ ಅನ್ನು ಜಾಲತಾಣದಲ್ಲಿ ಪ್ರಕಟಿಸಿದ್ದು, ಸಾರ್ವಜನಿಕರು ಇಲಾಖೆ ಜಾಲತಾಣ //www.transport.karnataka.gov.in ನಲ್ಲಿ ನೀತಿಯನ್ನು ನೋಡಬಹುದು. ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಸೂಚನೆ ಅನ್ವಯ 2022ರ ಡಿಸೆಂಬರ್ 30ರಂದು ಯೋಜನೆಯನ್ನು ಜಾರಿಗೊಳಿಸಿದ್ದು, ಜಾಲತಾಣದಲ್ಲಿ ಪ್ರಕಟಿಸಲಾಗಿದೆ.