Advertisement
ಅತಿಥಿ ಉಪನ್ಯಾಸಕರ ಆಯ್ಕೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ವಿಷಯವಾರು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಕಾಲೇಜುಗಳಲ್ಲಿ ಲಭ್ಯವಿರುವ ಕಾರ್ಯಭಾರಕ್ಕೆ ಅನುಗುಣವಾಗಿ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳ ಮಾಹಿತಿಯನ್ನು ಇಲಾಖೆಯ ತಂತ್ರಾಂಶದ ಮೂಲಕ ಅಪ್‌ಲೋಡ್‌ಗೆ ಸೂಚನೆ ನೀಡಲಾಗಿತ್ತು. ಜತೆಗೆ ತಪ್ಪು ಮಾಹಿತಿ ನೀಡಿದವರನ್ನು ಆಯ್ಕೆ ಮಾಡಿಕೊಳ್ಳಬಾರದು ಹಾಗೂ ಇಂತಹ ಪ್ರಕರಣಗಳ ಮಾಹಿತಿಯನ್ನು ಪ್ರತ್ಯೇಕವಾಗಿ ನೀಡುವಂತೆ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲಾಗಿತ್ತು.
ಕೆಲವು ಅಭ್ಯರ್ಥಿಗಳು ತಾವು ನೀಡಿದ್ದ ಮಾಹಿತಿ ತಪ್ಪು ಎಂದು ಅರಿವಾಗುತ್ತಿದ್ದಂತೆ ಸರಿಪಡಿಸಿಕೊಳ್ಳಲು ಕೇಂದ್ರ ಕಚೇರಿಗೆ ದೌಡಾಯಿಸಿದ್ದರು. ಈ ಮಧ್ಯೆ ನಿಖರವಾದ ದಾಖಲೆ ನೀಡಿ, ಅವಕಾಶದಿಂದ ವಂಚಿತರಾಗಿರುವ ಅಭ್ಯರ್ಥಿಗಳು ಎಚ್ಚೆತ್ತುಕೊಂಡಿದ್ದಾರೆ. ಸುಳ್ಳು ದಾಖಲೆ ನೀಡಿದ ಅಭ್ಯರ್ಥಿಗಳಿಗೆ ಅವಕಾಶ ನೀಡಬಾರದು. ಅತಿಥಿ ಉಪನ್ಯಾಸಕರಾಗಿ ಒಂದು ತಿಂಗಳು, ಒಂದೂವರೆ ತಿಂಗಳು ಸೇವೆ ಸಲ್ಲಿಸಿದವರು. 4ರಿಂದ 6 ತಿಂಗಳು ಎಂದು ನಮೂದಿಸಿಕೊಂಡು ಅತಿಥಿ ಉಪನ್ಯಾಸಕರಾಗುತ್ತಿದ್ದಾರೆ. ಇದರಿಂದ ಅವರಿಗೆ 1.50 ಹೆಚ್ಚುವರಿ ಅಂಕ ಸಿಗುತ್ತಿದೆ. ಸುಲಭವಾಗಿ ಅರ್ಹತೆ ಪಡೆಯುತ್ತಿದ್ದಾರೆ. ಈ ಬಗ್ಗೆ ಇಲಾಖೆ ವಿಶೇಷ ಗಮನ ಹರಿಸಬೇಕು ಮತ್ತು ತಪ್ಪು ಮಾಹಿತಿ ನೀಡಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಪ್ರಾಂಶುಪಾಲರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ನಿಖರ ದಾಖಲೆ ಸಲ್ಲಿಸಿರುವ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಅತಿಥಿ ಉಪನ್ಯಾಸಕರಾಗಲು ಸುಳ್ಳು ಮಾಹಿತಿ ನೀಡಿದ ಅನೇಕರು ಕಚೇರಿಗೆ ಬಂದು ಮಾಹಿತಿ ಸರಿಪಡಿಸುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಆನ್‌ಲೈನ್‌ನಲ್ಲಿ ಅವರೇ ತುಂಬಿರುವ ಮಾಹಿತಿ ಮತ್ತು ತಿದ್ದುಪಡಿಗೂ ಅವಕಾಶ ನೀಡಿದ್ದೇವೆ. ಈಗ ಯಾವುದೇ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಕಾಲೇಜುಗಳಲ್ಲಿ ದಾಖಲಾತಿ ಪರಿಶೀಲನೆ ವೇಳೆ ತಪ್ಪುಗಳು ಕಂಡುಬಂದಲ್ಲಿ ಅಂತವರಿಗೆ ಅವಕಾಶ ನೀಡುವುದಿಲ್ಲ. ಅದ್ಯಾಗ್ಯೂ ಅವಕಾಶ ಕಲ್ಪಿಸಿದರೆ ಅಂತಹ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.
– ಪಿ. ಪ್ರದೀಪ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ