ಗುಡಿಬಂಡೆ: ಬ್ರಾಹ್ಮಣರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿ ಗುಂಡಿ ಮಟ್ಟದಲ್ಲೇ ನಿಂತಿದ್ದು, ವಿದ್ಯಾರ್ಥಿಗಳು ಏನಾದರೂ ಗುಂಡಿಯಲ್ಲಿ ಬಿದ್ದ ಅನಾಹುತ ಆದರೆ ಯಾರು ಹೊಣೆ ಎಂದು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹಮೂರ್ತಿ ಕಿಡಿ ಕಾರಿದ್ದಾರೆ.
ಉದಯವಾಣಿಯೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು 12 ಲಕ್ಷ ಅನುದಾನದಲ್ಲಿ ಬ್ರಾಹ್ಮಣರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರದಲ್ಲಿ ಒಂದು ಕೊಠಡಿ ನಿರ್ಮಾಣ ಮಾಡಲು ಕಾರ್ಯದೇಶವಾಗಿದ್ದು, ಆದರೆ ಗುತ್ತಿಗೆದಾರರು ಹಳೇ ಕೊಠಡಿಯ ಪಕ್ಕದಲ್ಲಿ ಕಾಮಗಾರಿ ಪ್ರಾರಂಭ ಮಾಡಿ, ಪಿಲ್ಲರ್‌ಗಳನ್ನು ನಿರ್ಮಾಣ ಮಾಡಲು ಸುಮಾರು ಮೂರು ನಾಲ್ಕು ಅಡಿ ಆಳದ ನಾಲ್ಕೈದು ಗುಂಡಿಗಳನ್ನು ತೋಡಿರುತ್ತಾರೆ, ಈ ಗುಂಡಿಗಳನ್ನು ತೆಗೆದು ನಾಲ್ಕು ಐದು ದಿನಗಳು ಕಳೆದಿದ್ದು, ಗುತ್ತಿಗೆದಾರ ಮಾತ್ರ ಸ್ಥಳಕ್ಕೆ ಬಾರದೆ, ಕಾಮಗಾರಿ ಪ್ರಾರಂಭ ಮಾಡಲು ವಿಳಂಬ ಮಾಡಿರುತ್ತಾನೆ ಎಂದು ದೂರಿದರು.
ಈ ಶಾಲೆಯಲ್ಲಿ ಸುಮಾರು 29 ವಿದ್ಯಾರ್ಥಿಗಳು ಒಂದು ರಿಂದ ಏಳನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡುತ್ತಿದ್ದು, ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳು ಆಟ ಆಡುವ ವೇಳೆಯಲ್ಲಿ ಏನಾದರೂ ಗುಂಡಿಗೆ ಬಿದ್ದು, ಕೈ ಕಾಲು ಅಪಾಯ ಮಾಡಿಕೊಂಡರೇ ಯಾರು ಹೊಣೆ ಎಂದು ಗುಡುಗಿದರು, ಈ ವಿಚಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರು ಅವರು ಯಾವುದೇ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದರು.
ಈ ವಿಚಾರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮುನೇಗೌಡ ಅವರು ಮಾತನಾಡಿ ಇಲ್ಲಿ ಜಾಗದ ಸಮಸ್ಯೆ ಇದ್ದು, ಕೆಲವು ಕಾರಣಾಂತರಗಳಿಂದ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ ತ್ವರಿತವಾಗಿ ಇತ್ಯರ್ಥ ಪಡಿಸಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸುತ್ತೇನೆ ಎಂದರು.
ಇನ್ನು ಲೋಕೋಪಯೋಗಿ ಇಲಾಖೆಯ ಎ.ಇ.ಇ. ಪ್ರದೀಪ್ ಮಾತನಾಡಿ ಗುರುವಾರ ಬೆಳಿಗ್ಗೆ ಶಾಲೆಯ ಕಾಮಗಾರಿ ಜಾಗವನ್ನು ಪರಿಶೀಲನೆ ಮಾಡಿ, ಸಮಸ್ಯೆ ಇತ್ಯರ್ಥ ಪಡಿಸಿ ಕಾಮಗಾರಿ ಪ್ರಾರಂಭ ಮಾಡಿಸಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.