ಹೊಸದಿಲ್ಲಿ : ಇಸ್ರೋ ಇಂದು ಬುಧವಾರ ಜಿಸ್ಯಾಟ್ 7ಎ ಮಿಲಿಟರಿ ಸಂಪರ್ಕ ಉಪಗ್ರಹವನ್ನು ಯಶಸ್ವಿಯಾಗಿ ಹಾರಿಸಿದೆ. ಇದರಿಂದ ಭಾರತದ ವಾಯು ಶಕ್ತಿ ಇನ್ನಷ್ಟು ಬಲಿಷ್ಠಗೊಂಡಿದೆ.
ಶ್ರೀಹರಿಕೋಟ ದಲ್ಲಿ ಜಿಯೋ ಸಿಂಕ್ರನಸ್ ಲಾಂಚ್ ವೆಹಿಕಲ್ ಜಿಎಸ್‌ಎಲ್‌ವಿ-ಎಫ್ 11 ಮೂಲಕ ಜಿಸ್ಯಾಟ್ 7ಎ ಉಪಗ್ರಹ ಉಡಾವಣೆ ಯಶಸ್ವಿಯಾಗಿ ನಡೆಯಿತೆಂದು ಇಸ್ರೋ ಹೇಳಿದೆ.
ಜಿಸ್ಯಾಟ್ 7ಎ ಮಿಲಿಟರಿ ಸಂಪರ್ಕ ಉಪಗ್ರಹವು 2,250 ಕಿಲೋ ತೂಕ ಹೊಂದಿದ್ದು ಒಟ್ಟು 8 ವರ್ಷಗಳ ಕಾರ್ಯಾಚರಣೆ ಆಯುಷ್ಯ ಹೊಂದಿದೆ. ಇದು ಭೂಸ್ಥಿರ ಮಿಲಿಟರಿ ಉಪಗ್ರಹವಾಗಿದೆ.
ಈ ಉಪಗ್ರಹವನ್ನು ದೇಶಾದ್ಯಂತದ ಕೂ ಬ್ಯಾಂಡ್ ಬಳಕೆದಾರರಿಗೆ ಸಂಪರ್ಕ ಸಾಮರ್ಥ್ಯವನ್ನು ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ.
ಜಿಸ್ಯಾಟ್ 7ಎ ಉಪಗ್ರಹವು 2018ರಲ್ಲಿ ಶ್ರೀ ಹರಿಕೋಟದಿಂದ ನಡೆದಿರುವ ಏಳನೇ ಉಡಾವಣೆಯಾಗಿದೆ. ಅಂತೆಯೇ ಜಿಎಸ್‌ಎಲ್‌ವಿ ಎಫ್ 11 ಇಸ್ರೋಗಾಗಿ ನಡೆಸಿರುವ 69ನೇ ಬಾಹ್ಯಾಕಾಶ ಅಭಿಯಾನವಾಗಿದೆ. ಮೂರು ಹಂತಗಳನ್ನು ಹೊಂದಿರುವ ನಾಲ್ಕನೇ ತಲೆಮಾರಿನ ಉಪಗ್ರಹ ಉಡಾವಣೆ ವಾಹನ ಇದಾಗಿದೆ.