ಬೆಂಗಳೂರು: ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಕೈಗೆತ್ತಿಕೊಳ್ಳಲಾಗಿರುವ ಎತ್ತಿನಹೊಳೆ ಯೋಜನೆಗೆ ಗ್ರಹಣ ಹಿಡಿದಿದೆ. ಯೋಜನೆ ಶುರುವಾಗಿ ದಶಕಗಳಾಗಿದ್ದು, ಯೋಜನ ಗಾತ್ರವೂ ದುಪ್ಪಟ್ಟಾಗಿದೆ. ಆರಂಭದಲ್ಲಿ 8,000 ಕೋಟಿ ರೂ.ಗಳಷ್ಟಿದ್ದ ಯೋಜನ ವೆಚ್ಚ ಈಗ 20,000 ಕೋಟಿ ರೂ.ಗಳಿಗೆ ಏರಿದೆ.
ಬಿಜೆಪಿ ಸರಕಾರ 2008ರಲ್ಲಿ ಯೋಜನೆ ರೂಪಿಸಿ ಐದು ವರ್ಷಗಳಲ್ಲಿ ಪೂರ್ಣಗೊಳಿಸಲು 8 ಸಾವಿರ ಕೋಟಿ ರೂ. ಅಂದಾಜು ಯೋಜನ ವೆಚ್ಚ ಸಿದ್ಧಪಡಿಸಿತ್ತು. ಆದರೆ ಬಿಜೆಪಿಯ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಪ್ರಗತಿ ಕಾಣದೆ ಉಳಿಯಿತು. ಅನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಯೋಜನೆ ಯನ್ನು ಪರಿಷ್ಕರಿಸಿ ಸುಮಾರು 13 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಿ ಯೋಜನೆಗೆ ಮತ್ತೆ ಚಾಲನೆ ನೀಡಿ, ಕಾರ್ಯಾರಂಭಗೊಳಿಸಿತ್ತು.
ಶುರುವಾಗದ ಬೈರಗೊಂಡ್ಲು ಅಣೆಕಟ್ಟು: ಎತ್ತಿನ ಹೊಳೆ ಯೋಜನೆಯ ಪ್ರಮುಖ ಕೇಂದ್ರವಾಗಿರುವ ಬೈರಗೊಂಡ್ಲು ಅಣೆಕಟ್ಟು ನಿರ್ಮಾಣಕ್ಕೆ ಟೆಂಡರ್ ಕರೆದು ಎರಡು ವರ್ಷ ಕಳೆದಿದ್ದರೂ ಅಣೆಕಟ್ಟು ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಬೈರಗೊಂಡ್ಲು ಅಣೆಕಟ್ಟು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಂಚಿನಲ್ಲಿದ್ದು, ಸುಮಾರು 7 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ಅಣೆಕಟ್ಟು ಪೂರ್ಣವಾಗುವವರೆಗೂ ಎತ್ತಿನಹೊಳೆ ಯೋಜನೆ ಕನಸು ನನಸಾಗುವುದಿಲ್ಲ. ಏಕೆಂದರೆ ಪಶ್ಚಿಮಾಭಿಮುಖವಾಗಿ ಹರಿಯುವ ಎತ್ತಿನ ಹೊಳೆ ನೀರನ್ನು 260 ಕಿ.ಮೀ. ದೂರದ ಕಾಲುವೆಗಳ ಮೂಲಕ ಬೈರಗೊಂಡ್ಲು ಅಣೆಕಟ್ಟುವಿಗೆ ತಿರುಗಿಸಿ, ಅಲ್ಲಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿದೆ. ಆದರೆ ಸರಕಾರಗಳು ಬದಲಾದಂತೆ ಯೋಜನೆಯ ಸ್ವರೂಪವೂ ಬದಲಾಗಿ ಹಾಸನ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂ ತರ ಜಿಲ್ಲೆಗಳಿಗೂ ನೀರು ಒದಗಿಸಲು ತೀರ್ಮಾನಿ ಸಿರುವುದರಿಂದ ಯೋಜನೆ ಮತ್ತಷ್ಟು ವಿಳಂಬವಾಗಿ ಯೋಜನೆಯ ವೆಚ್ಚವೂ ಹೆಚ್ಚಾಗಿದೆ.
ಭೂಸ್ವಾಧೀನ ಗೊಂದಲ
ಬೈರಗೊಂಡ್ಲು ಅಣೆಕಟ್ಟೆ ನಿರ್ಮಾಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತಲಾ 2500 ಎಕರೆ ಜಮೀನು ಮುಳುಗಡೆ ಯಾಗಲಿದ್ದು, ರೈತರಿಗೆ ಪರಿಹಾರ ನೀಡುವ ಕುರಿತು ಗೊಂದಲ ಉಂಟಾಗಿದೆ. 2013ರಲ್ಲಿ ಭೂಸ್ವಾಧೀನಕ್ಕೆ ನಿಗದಿ ಮಾಡಿರುವ ದರ ಈಗ ನೂತನ ಭೂಸ್ವಾಧೀನ ಕಾಯ್ದೆ ಜಾರಿಗೆ ಬಂದ ಬಳಿಕ 3 ಪಟ್ಟು ಹೆಚ್ಚಾಗಿದೆ. ಹೀಗಾಗಿ ವೆಚ್ಚ 20 ಸಾವಿರ ಕೋ.ರೂ.ಗಡಿ ದಾಟಲಿದೆ.
ಬೈರಗೊಂಡ್ಲು ಅಣೆಕಟ್ಟು ಭೂಸ್ವಾಧೀನ ಮಾಡಿಕೊಳ್ಳಲು ಕೊರಟಗೆರೆ ಹಾಗೂ ದೊಡ್ಡ ಬಳ್ಳಾಪುರ ರೈತರಿಗೆ ನೀಡುವ ಪರಿಹಾರದಲ್ಲಿ ವ್ಯತ್ಯಾಸವಿದ್ದು, ಕೊರಟಗೆರೆ ರೈತರು ಏಕರೂಪದ ದರಕ್ಕೆ ಪಟ್ಟು ಹಿಡಿದಿರುವುದರಿಂದ ಗೊಂದಲ ಉಂಟಾಗಿದೆ. ಕೊರಟಗೆರೆ ರೈತರು ಮಾರ್ಗಸೂಚಿ ದರದ ಪ್ರಕಾರ ಪರಿಹಾರ ಪಡೆದು, ಅನಂತರ ಕೋರ್ಟ್ ಮೂಲಕ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ ಸರಕಾರ ಅವರಿಗೆ ಅನುಕೂಲ ಮಾಡಿಕೊಡಲು ಸಿದ್ಧವಿದೆ.
– ಎನ್. ಲಕ್ಷ್ಮಣರಾವ್ ಪೇಶ್ವೆ, ವಿಶ್ವೇಶ್ವರ ಜಲ ನಿಗಮದ ಎಂಡಿ
- ಶಂಕರ ಪಾಗೋಜಿ