Advertisement

ನೀರಿನ ಸಮಸ್ಯೆಗೆ ಅಂತರ್ಜಲ ಮರುಪೂರಣ ಪರಿಹಾರ

09:02 PM Feb 03, 2020 | Lakshmi GovindaRaj |

ಚಾಮರಾಜನಗರ: ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ನಿರೀನ ಸಮಸ್ಯೆ ತಪ್ಪಿಸಲು ಅಂತರ್ಜಲ ಮರುಪೂರಣ ಕಾರ್ಯ ಅತ್ಯವಶ್ಯಕ ಎಂದು ಜಿಯೊ ರೈನ್‌ ವಾಟರ್‌ ಬೋರ್ಡ್‌ನ ಭೂವಿಜ್ಞಾನಿ ಎನ್‌.ಜೆ.ದೇವರಾಜ್‌ ರೆಡ್ಡಿ ಹೇಳಿದರು.

Advertisement

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸಹಯೋಗದಲ್ಲಿ ನಡೆದ ಜಲಮೂಲಗಳ ಪುನಶ್ಚೇತನ ಹಾಗೂ ವೈಜ್ಞಾನಿಕ ನಿರ್ಮಾಣ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹೆಚ್ಚುತ್ತಿರುವ ನೀರಿನ ಅಭಾವ: ಭಾರತ ದೇಶ ಪ್ರಪಂಚದಲ್ಲೇ ಎರಡನೇ ಅತೀ ದೊಡ್ಡ ಜಲ ಸಂಪತ್ತನ್ನು ಹೊಂದಿದೆ. ಹೀಗಿದ್ದೂ ಸಹ ದಿನ ಕಳೆದಂತೆ ನೀರಿನ ಅಭಾವ ಹೆಚ್ಚುತ್ತಲಿದೆ. ಸಾವಿರಾರು ಕೆರೆಗಳಿದ್ದರೂ, ವರ್ಷ ಪೂರ್ತಿ ನೀರು ಹೊಂದಿರದ ಕಾರಣ ಹಾಗೂ ಮಾಲಿನ್ಯದಿಂದಾಗಿ ಬಳಕೆಗೆ ಅಲಭ್ಯವಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಹೊರ ಬರಲು ವೈಜ್ಞಾನಿಕ ರೀತಿಯಲ್ಲಿ ಅಂತರ್ಜಲ ಮರುಪೂರಣ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದರು.

ಮಳೆ ಕೊರತೆಯಿಂದ ಅಂತರ್ಜಲ ಕಡಿಮೆ: ಮಳೆ ಕೊರತೆಯಿಂದಾಗಿ ಅಂತರ್ಜಲ ಪ್ರಮಾಣ ಕಡಿಮೆಯಾಗಿದೆ. ಸಮುದ್ರ ತೀರ ಅಥವಾ ನೀರು ಹರಿವಿನ ಹತ್ತಿರ ಕೊಳವೆ ಬಾವಿ ಕೊರೆದರೆ ನೀರು ಬರುತ್ತದೆ ಎಂಬ ಮನಸ್ಥಿತಿ ಇದೆ. ಆದರೆ ಅಂತರ್ಜಲದ ಬಗೆಗೆ ಇದ್ಯಾವುದು ಪೂರ್ಣ ಸತ್ಯವಲ್ಲ. ಮಳೆ ಪ್ರಮಾಣ ಹೆಚ್ಚಿರುವ ಜಾಗದಲ್ಲೂ ಅಂತರ್ಜಲ ಮಟ್ಟ ಕಡಿಮೆ ಇರುವ ಎಷ್ಟೋ ಉದಾಹರಣೆಗಳಿವೆ. ನೀರು ಹತ್ತಿರವಿರುವೆಡೆ ತೆರೆದ ಕೊಳವೆ ಬಾವಿಗಳು ವಿಫ‌ಲವಾದ ನಿದರ್ಶನಗಳಿವೆ. ನೈಜವಾಗಿ ಮಾನವ ಅನುಸರಿಸುವ ಅವೈಜ್ಞಾನಿಕ ಪದ್ಧತಿಗಳು ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಅಂತರ್ಜಲ ಮರುಪೂರಣದಿಂದ ಜಲ ಪ್ರಮಾಣ ಹೆಚ್ಚಳ: ನೀರಿನ ಸಮಸ್ಯೆಗಳನ್ನು ದೀರ್ಘ‌ಕಾಲಿಕವಾಗಿ ನಿವಾರಿಸುವ ನಿಟ್ಟಿನಲ್ಲಿ ಅಂತರ್ಜಲ ಮರುಪೂರಣ ಕಾರ್ಯವನ್ನು ಮಾಡಲಾಗುತ್ತದೆ. ನೀರು ಬತ್ತಿ ಹೋದ ಅಥವಾ ಬಾರದೇ ಇರುವ ಕೊಳವೆ ಬಾವಿಗಳನ್ನು ಪರೀಕ್ಷಿಸಿ, ಅಲ್ಲಿ ನೀರಿನ ಪೊರೆಗಳ ಇರುವಿಕೆ ಕಂಡುಬಂದಲ್ಲಿ ಮರುಪೂರಣ ಪದ್ಧತಿಯನ್ನು ಅನುಷ್ಠಾಗೊಳಿಸಲಾಗುತ್ತದೆ. ಇದರಿಂದ ಜಲ ಪ್ರಮಾಣ ಹೆಚ್ಚುವು ದಲ್ಲದೇ ನೀರು ಸದಾ ಕಾಲ ಇರುವಂತೆ ಮಾಡುತ್ತದೆ ಎಂದು ಮಾಹಿತಿ ನೀಡಿದರು.

Advertisement

ನೀರನ್ನು ಪೋಲು ಮಾಡದಿರಿ: ನೀರಿನ ಸಮಸ್ಯೆಯನ್ನು ಮೂಲದಿಂದ ಸರಿಪಡಿಸಿಕೊಳ್ಳಲು ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅಗತ್ಯ. ನೀರನ್ನು ಅನವಶ್ಯಕವಾಗಿ ಪೋಲು ಮಾಡದಂತೆ ಎಚ್ಚರ ವಹಿಸುವುದು, ಮಳೆ ನೀರು ಕೋಯ್ಲು ಮೂಲಕ ಮಳೆ ನೀರಿನ ಶೇಖರಣೆ ಮತ್ತು ಬಳಕೆಯಂಥಹ ಕೆಲವು ಉಪಕ್ರಮಗಳು ಎಲ್ಲರಿಂದ ಆಗಬೇಕು. ಕೊಳವೆ ಬಾವಿಗಳ ಬದಲಾಗಿ ತೆರೆದ ಬಾವಿಗಳಿಗೆ ಆದ್ಯತೆ ನೀಡಬೇಕು. ಇದು ಅಂತರ್ಜಲ ಮಟ್ಟವನ್ನು ಕಾಪಾಡಲು ಸಹಾಯಕಯವಾಗಲಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಉಪ ಕಾರ್ಯದರ್ಶಿ ಧರಣೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next