ಅಜೆಕಾರು: ಖಾಸಗಿ ದೂರವಾಣಿ ಕಂಪೆನಿಗಳು ಕಾರ್ಕಳ ತಾಲೂಕಿನಾದ್ಯಂತ ಕಳೆದ 4-5 ತಿಂಗಳುಗಳಿಂದ ರಸ್ತೆಯ ಅಂಚಿನಲ್ಲಿಯೇ ಬೃಹತ್ ಗಾತ್ರದ ಗುಂಡಿಗಳನ್ನು ನಿರ್ಮಾಣ ಮಾಡುತ್ತಿದ್ದು ಇದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಡಾಮರು ರಸ್ತೆಗೆ ಹೊಂದಿಕೊಂಡೆ 8-10 ಅಡಿ ಆಳದ ಗುಂಡಿಗಳನ್ನು ನಿರ್ಮಿಸ ಲಾಗಿದ್ದು ರಸ್ತೆಯ ಅಂಚಿನಲ್ಲಿ ಯಾವುದೇ ಎಚ್ಚರಿಕೆಯ ಫಲಕ ಇಲ್ಲದೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ.
ಕಳೆದ 4-5 ತಿಂಗಳಿನಿಂದ ಕಾರ್ಕಳ ತಾಲೂಕಿನ ಬಹುತೇಕ ರಸ್ತೆಗಳ ಅಂಚಿನಲ್ಲಿ ಗುಂಡಿಗಳ ಅಗೆತ ನಡೆಸಲಾಗುತ್ತಿದ್ದು ಈಗಾಗಲೇ ಹಲವಾರು ವಾಹನ ಸವಾರರು ಅಪಘಾತಕ್ಕೀಡಾಗಿದ್ದಾರೆ. ರಾತ್ರಿ ವೇಳೆಯಲ್ಲಿ ಹೆಚ್ಚಿನ ಅನಾಹುತಗಳಾಗುತ್ತಿದ್ದು ಈ ಬಗ್ಗೆ ಲೋಕೋಪಯೋಗಿ ಇಲಾಖೆ ರಸ್ತೆಯ ಅಂಚಿನಲ್ಲಿ ಗುಂಡಿಗಳ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭ ಪ್ರಯಾಣಿಕರ ಹಿತ ದೃಷ್ಟಿಯನ್ನು ಗಮನಿಸಬೇಕು ಎಂಬುವುದು ಸ್ಥಳೀಯರ ಒತ್ತಾಯ.
ಬೃಹತ್ ಗುಂಡಿಗಳ ನಿರ್ಮಾಣದ ನಂತರ ಕೇಬಲ್ ವಯರ್‌ಗಳನ್ನು ಹಾಕಿ ಕೆಲೆವೆಡೆ ಮಣ್ಣು ಹಾಕಲಾಗಿದೆಯಾದರೂ ಇದು ಮಳೆಗಾಲಕ್ಕೆ ತೀವ್ರ ಅಪಾಯ ಕಾರಿಯಾಗಿ ಪರಿಣಮಿಸಲಿದೆ.
ಡಾಮಾರು ರಸ್ತೆಯ ಅಂಚಿನಲ್ಲಿಯೇ ಗುಂಡಿಗಳು ಇರುವುದರಿಂದ ಮಳೆಗಾಲ ದಲ್ಲಿ ಮಣ್ಣು ತೇವಗೊಂಡು ಕುಸಿತ ಗೊಳ್ಳಲಿದ್ದು ವಾಹನ ಸವಾರರು ರಸ್ತೆಯ ಅಂಚಿಗೆ ಹೋದಲ್ಲಿ ಅಪಘಾತ ಸಂಭವಿಸುವುದು ನಿಚ್ಚಳವಾಗಿದೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾಹನ ಸವಾರರು ಮನವಿ ಮಾಡಿದ್ದಾರೆ.