Advertisement

Karnataka: ಗೃಹಜ್ಯೋತಿ ಹೆಚ್ಚುವರಿ ವಿದ್ಯುತ್‌ 10 ಯುನಿಟ್‌ಗೆ ನಿಗದಿ

12:37 AM Jan 19, 2024 | Team Udayavani |

ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ಫ‌ಲಾನುಭವಿಗಳಿಗೆ ಇದುವರೆಗೆ ನೀಡುತ್ತಿದ್ದ ಶೇ.10ರಷ್ಟು ಹೆಚ್ಚುವರಿ ಅರ್ಹತಾ ವಿದ್ಯುತ್‌ ಅನ್ನು 10 ಯುನಿಟ್‌ಗೆ ನಿಗದಿ ಮಾಡುವುದೂ ಸಹಿತ ಮಹತ್ವದ ನಿರ್ಧಾರವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

Advertisement

ಸಂಪುಟ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ.ಪಾಟೀಲ್‌ ಈ ವಿಷಯ ತಿಳಿಸಿದ್ದು, ಇನ್ನು ಮುಂದೆ ಕಳೆದ 12 ತಿಂಗಳ ಸರಾಸರಿ ಬಳಕೆಯ ಜತೆಗೆ ಶೇ.10ರಷ್ಟು ಉಚಿತ ವಿದ್ಯುತ್‌ ನೀಡುವ ಬದಲು ಎಲ್ಲರಿಗೂ ಅನ್ವಯವಾಗುವಂತೆ 10 ಯುನಿಟ್‌ಗೆ ಮಿತಿ ಮಾಡಲಾಗುತ್ತದೆ. ಹೀಗಾಗಿ ಗೃಹಜ್ಯೋತಿ ಯೋಜನೆ ಅನ್ವಯ ವಿವಿಧ ಹಂತದ ಸರಾಸರಿ ಯುನಿಟ್‌ ಬಳಕೆದಾರರಿಗೆ ನೀಡುವ ಅರ್ಹತಾ ವಿದ್ಯುತ್‌ನಲ್ಲಿ ಏಕರೂಪತೆ ತರಲಾಗುತ್ತದೆ.

ಶೇ.10ರಷ್ಟು ಅರ್ಹತಾ ವಿದ್ಯುತ್‌ ನೀಡಿದರೆ ಕಡಿಮೆ ಬಳಕೆ ಮಾಡುವ ಬಡ ಕುಟುಂಬಗಳಿಗೆ ಅನ್ಯಾಯವಾಗುತ್ತಿತ್ತು. ಆದರೆ ಏಕರೂಪ ಯುನಿಟ್‌ ನಿಯಮದಿಂದ ಎಲ್ಲರಿಗೂ ಒಂದು ವರ್ಷದ ಸರಾಸರಿ ಬಳಕೆಯ ಜತೆಗೆ 10 ಯುನಿಟ್‌ ಹೆಚ್ಚುವರಿಯಾಗಿ ಲಭಿಸುತ್ತದೆ. ರಾಜ್ಯದಲ್ಲಿ 1.95 ಕೋಟಿ ಗ್ರಾಹಕರು ಮಾಸಿಕ ಸರಾಸರಿ 53 ಯುನಿಟ್‌ ಬಳಕೆ ಮಾಡುತ್ತಿದ್ದಾರೆ. ಬೆಸ್ಕಾಂ ವ್ಯಾಪ್ತಿಯಲ್ಲಿ 69.73 ಲಕ್ಷ ಕುಟುಂಬಗಳು ಮಾಸಿಕ ಸರಾಸರಿ 48 ಯುನಿಟ್‌ಗಿಂತ ಕಡಿಮೆ ಬಳಸುತ್ತಿದೆ. ಈ ನಿರ್ಧಾರದಿಂದ ಸರಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 33 ಕೋಟಿ ರೂ.ಹೊರೆ ಬೀಳಲಿದೆ.

ಫೆ. 12ರಿಂದ ಅಧಿವೇಶನ 16ಕ್ಕೆ ಬಜೆಟ್‌
ಫೆಬ್ರವರಿ 12ರಿಂದ ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಪ್ರಾರಂಭವಾಗಲಿದ್ದು, ಫೆ.16ರಂದು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ ಮಂಡಿಸಲಿದ್ದಾರೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಜೆಟ್‌ಗೆ ದಿನಾಂಕ ನಿಗದಿ ಮಾಡಲಾಗಿದೆ. ಫೆ.12ರಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹೊÉàಟ್‌ ಉಭಯ ಸದನವನ್ನು ಉದ್ದೇಶಿಸಿ ಭಾಷಣ ಮಾಡುವರು. ಫೆ.16ರಂದು ಸಿಎಂ ಸಿದ್ದರಾಮಯ್ಯ ಬಜೆಟ್‌ ಮಂಡಿಸುವರು. ಫೆ.23ರ ವರೆಗೂ ವಿಧಾನಮಂಡಲದ ಕಾರ್ಯಕಲಾಪ ನಡೆಯಲಿದೆ.

ವಿದ್ಯುತ್‌ ಚಾಲಿತ ವಾಹನ ಖರೀದಿಗೆ ರಿಯಾಯಿತಿ
ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್‌ ಪಾಲಿಸಿ- 2022ರ ಕ್ರಮ ಸಂಖ್ಯೆ 9 ಅನ್ನು ಪರಿಷ್ಕರಿಸಿ, ಜಾರಿಗೊಳಿಸಲು ಸಂಪುಟ ಒಪ್ಪಿಗೆ ನೀಡಿದ್ದು, ವಿದ್ಯುತ್‌ ಚಾಲಿತ ವಾಹನಗಳ ಖರೀದಿಗೆ ಪ್ರೋತ್ಸಾಹ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ಸ್ಕ್ರಾಪಿಂಗ್‌ ನೀತಿ ಅನ್ವಯ ಯಾರು ತಮ್ಮ ಹಳೇ ವಾಹನವನ್ನು ಗುಜರಿಗೆ ಹಾಕುತ್ತಾರೋ ಅಂತವರು ಹೊಸ ಎಲೆಕ್ಟ್ರಿಕ್‌ ವಾಹನ ಖರೀದಿಸುವಾಗ ಎಕ್ಸ್‌ ಶೋ ರೂಂ ಬೆಲೆ ಆಧರಿಸಿ ತೆರಿಗೆ ವಿನಾಯಿತಿ ನೀಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next