Advertisement

ದಟ್ಟಣೆ ತಡೆಗಾಗಿ ಸಮೂಹ ಸಾರಿಗೆಗೆ ಸಿಗಲಿ ಹೆಚ್ಚಿನ ಒತ್ತು

12:53 AM Jun 02, 2023 | Team Udayavani |

ರಾಜ್ಯದಲ್ಲಿ ವಾಹನಗಳ ಸಂಖ್ಯೆ ಮೂರು ಕೋಟಿ ಗಡಿ ದಾಟಿದೆ. ಈ ಮೂಲಕ ಕಳೆದೊಂದು ದಶಕದಲ್ಲಿ ರಸ್ತೆಗಿಳಿದ ವಾಹನಗಳು ದುಪ್ಪಟ್ಟಾಗಿವೆ. ಇದರಲ್ಲಿ ರಾಜಧಾನಿ ಬೆಂಗಳೂರಿನಲ್ಲೇ 1.09 ಕೋಟಿ ಇವೆ. ಮತ್ತೊಂದೆಡೆ ಇದೇ ಅವಧಿಯಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಯಂತಹ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಸೇರ್ಪಡೆಗೊಂಡ ಬಸ್‌ಗಳ ಸಂಖ್ಯೆ ನಗಣ್ಯವಾಗಿದೆ.

Advertisement

ಕೋವಿಡ್‌ ಸೇರಿದಂತೆ ಇದರ ಹಿಂದಿನ ಕಾರಣಗಳು ಏನೇ ಇದ್ದರೂ ಸರಕಾರದ ಆದ್ಯತೆಗಳು ಮತ್ತು ಅವುಗಳ ಅನುಷ್ಠಾನದಲ್ಲಿರುವ ಆಸಕ್ತಿಗೆ ಇದು ಕನ್ನಡಿ ಹಿಡಿಯುತ್ತದೆ.

ವಾಹನ ದಟ್ಟಣೆಯು ರಸ್ತೆಗಳ ಮೇಲೆ ಹೊರೆ ಮಾತ್ರವಲ್ಲ; ಸಂಚಾರದಟ್ಟಣೆ, ವಾಯುಮಾಲಿನ್ಯ ಸಹಿತ ಹಲವು ರೀತಿಯ ಸಮಸ್ಯೆಗಳಿಗೆ ಎಡೆಮಾಡಿಕೊಡಲಿದೆ. ವಿಶ್ವದ ಅತೀ ಹೆಚ್ಚು ಟ್ರಾಫಿಕ್‌ವುಳ್ಳ ಎರಡನೇ ನಗರ ಎಂಬ ಅಪಖ್ಯಾತಿ ಬೆಂಗಳೂರಿಗಿದೆ. ಇದೇ ದಟ್ಟಣೆಯಲ್ಲಿ ಹೆಚ್ಚು ಹೊತ್ತು ಕಳೆಯುವ ವಾಹನ ಚಾಲಕರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ ಎಂದೂ ಮತ್ತೊಂದು ಅಧ್ಯಯನ ಹೇಳುತ್ತದೆ. ಇದೇ ಗತಿಯಲ್ಲಿ ವಾಹನಗಳ ಸಂಖ್ಯೆ ಏರಿಕೆಯಾದರೆ ಸ್ಥಿತಿ ಮತ್ತಷ್ಟು ಚಿಂತಾಜನಕ ಆಗಲಿದೆ ಎಂಬುದರಲ್ಲಿ ಎರಡುಮಾತಿಲ್ಲ.

ಬರುವ ಸರಕಾರಗಳಿಗೆ ಈಗಲೂ ಮೇಲ್ಸೇತುವೆಗಳು, ಕೆಳ ಸೇತುವೆಗಳು, ರಸ್ತೆ ವಿಸ್ತರಣೆಯಂತಹ ಕ್ರಮಗಳು ಅಭಿವೃದ್ಧಿಯ ಕುರು ಹುಗಳಾಗಿವೆ. ಇದೇ ಕಾರಣಕ್ಕೆ ಪ್ರತೀ ವರ್ಷ ಸಾವಿರಾರು ಕೋಟಿ ಹಣ ಈ ರಸ್ತೆಗಳಲ್ಲೇ ಹರಿದುಹೋಗುತ್ತದೆ. ಇದು ಖಾಸಗಿ ವಾಹನಗಳು ರಸ್ತೆ ಗಿಳಿಯಲು ಪ್ರೇರಣೆ ಹೊರತು, ದಟ್ಟಣೆಗೆ ಪರಿಹಾರವಲ್ಲ. ಮತ್ತೂಂದೆಡೆ ಸಮೂಹ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಬದಲಿಗೆ ಸಾಧ್ಯವಾದಷ್ಟು ಅದನ್ನು ದುರ್ಬಲಗೊಳಿಸುವ ಕಡೆಗೆ ಸರಕಾರ ಹೆಜ್ಜೆ ಇಡುತ್ತಿವೆ ಎಂಬುದು ಅವುಗಳ ಧೋರಣೆಯಿಂದಲೇ ಗೊತ್ತಾಗುತ್ತದೆ. ಇದಕ್ಕೆ ಪೂರಕವಾಗಿ ಹೇಳುವುದಾದರೆ, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವರ್ಗಗಳಿಗೆ ನೀಡುವ ರಿಯಾಯಿತಿ ಪಾಸಿನ ಅನುದಾನ ಇನ್ನೂ ಸಾವಿರಾರು ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ. ಕಳೆದೊಂದು ದಶಕದಲ್ಲಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳ ಸಂಖ್ಯೆ 24 ಸಾವಿರ ಆಸುಪಾಸಿನಲ್ಲೇ ಇದೆ.

ಒಂದು ಕುಟುಂಬಕ್ಕೆ ಒಂದೇ ವಾಹನ ಎಂಬ ನಿರ್ಬಂಧ, ವಾಹನ ನಿಲುಗಡೆಗೆ ಜಾಗ ಲಭ್ಯವಿದ್ದರೆ ಮಾತ್ರ ನೋಂದಣಿಗೆ ಅವಕಾಶ, ವಾಹನ ದಟ್ಟಣೆವುಳ್ಳ ರಸ್ತೆಗಳಲ್ಲಿ ತೆರಿಗೆ ವಿಧಿಸುವುದು, ಕಾರ್‌ ಪೂಲಿಂಗ್‌, ನಿಗಮಗಳಲ್ಲಿ ಬಸ್‌ಗಳ ಸಂಖ್ಯೆ ಜತೆಗೆ ನಿಖರ ಮತ್ತು ಸಮರ್ಪಕ ಸೇವೆಗಳನ್ನು ಕಲ್ಪಿಸುವಂತಹ ಕ್ರಮಗಳು ಹೆಚ್ಚಾಗಬೇಕಿದೆ. ಈಗಲೂ ಸುಮಾರು 2,600 ಹಳ್ಳಿಗಳಲ್ಲಿ ಬಸ್‌ಗಳ ಸಂಪರ್ಕ ಇಲ್ಲ. ಇದ್ದ ಬಸ್‌ಗಳಲ್ಲಿ ಬಹುತೇಕ “ಪೀಕ್‌ ಅವರ್‌’ (ಬೆಳಗ್ಗೆ ಮತ್ತು ಸಂಜೆ)ನಲ್ಲಿ ಗರಿಷ್ಠ ಸಾಮರ್ಥ್ಯಕ್ಕಿಂತ ಹೆಚ್ಚು ದಟ್ಟಣೆ ಇರುತ್ತದೆ. ಈ ಸ್ಥಿತಿಯನ್ನು ಸುಧಾರಿಸುವ ಆವಶ್ಯಕತೆ ಈಗ ತುರ್ತು ಇದೆ.

Advertisement

ವಿದ್ಯುತ್‌ ಚಾಲಿತ ಬಸ್‌ಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿರುವುದು ವಾಯುಮಾಲಿನ್ಯ ತಡೆ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಇರಬಹುದು. ಆದರೆ ಮುಂದಿನ ದಶಕಗಳಲ್ಲಿ ಇವುಗಳು ಕೂಡ ದಟ್ಟಣೆ ಸಮಸ್ಯೆಯಿಂದ ಹೊರತಾಗಿಲ್ಲ. ಜತೆಗೆ ಪೆಟ್ರೋಲ್‌-ಡೀಸೆಲ್‌ ಅವಲಂಬನೆ ಬದಲಿಗೆ ಲೀಥಿಯಂ ಮೇಲಿನ ಅವಲಂಬನೆ ಹೆಚ್ಚುತ್ತದೆ. ಹಾಗಾಗಿ, ಸಾಧ್ಯ ವಾದಷ್ಟು ಖಾಸಗಿ ವಾಹನಗಳು ರಸ್ತೆಗಿಳಿಯದಂತೆ ಹಾಗೂ ಅದಕ್ಕೆ ಪರ್ಯಾ ಯವಾಗಿ ಸಮೂಹ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ಕ್ರಮಗಳು ಹೆಚ್ಚಾಗಬೇಕು. ಆ ಮೂಲಕ ವಾಹನಗಳ ಸಂಖ್ಯೆಗೆ ಕಡಿವಾಣ ಹಾಕಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next