ಇದು ಬಣ್ಣಗಳಿಂದ ಝಗಮಗಿಸುವ ಲೋಕ. ಮನೆಯೊಳಗೂ, ಮನೆಯಿಂದ ಹೊರಕ್ಕೆ ಕಾಲಿಟ್ಟರೂ, ಮಾಲ್, ಸಿನಿಮಾ ಮಂದಿರ, ಅಂಗಡಿ ಮಳಿಗೆ, ರಸ್ತೆ, ಬಸ್ ನಿಲ್ದಾಣ ಎಲ್ಲಿಗೆ ಕಾಲಿಟ್ಟರೂ ಕಣ್ಣಿಗೆ ರಾಚುವುದು ಬಣ್ಣ ವಿನ್ಯಾಸಗಳು. ಜಾಹಿರಾತುಗಳು, ಸೂಚನಾ ಫಲಕಗಳು, ಪುಸ್ತಕ ಮುಖಪುಟಗಳು, ಪತ್ರಿಕೆಗಳು, ಬ್ರೋಚರ್‌ಗಳು, ಪೋಸ್ಟರ್‌ಗಳು ಇವೆಲ್ಲದರ ಹಿಂದಿರುವುದು ಗ್ರಾಫಿಕ್ ಡಿಸೈನರ್.
ಗ್ರಾಫಿಕ್ ಡಿಸೈನರ್‌ಗೆನು ಕೆಲಸ?: ಯಾವುದೇ ಉತ್ಪನ್ನವಾದರೂ, ಲೋಗೋ, ಪೋಸ್ಟರ್, ಜಾಹಿರಾತು ಫಲಕವಾದರೂ ಮಾರುಕಟ್ಟೆಗೆ ಬಿಡುವ ಮುನ್ನ ಅತ್ಯಾಕರ್ಷಕವಾಗಿ ಡಿಸೈನ್ ಮಾಡಲಾಗುತ್ತದೆ. ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ತಂತ್ರಗಳನ್ನು ಅನುಸರಿಸಿ ಡಿಸೈನ್ ರೂಪಿಸುವ ತಂತ್ರಜ್ಞನೇ ಗ್ರಾಫಿಕ್ ಡಿಸೈನರ್. ಆನ್‌ಲೈನ್ ಪ್ರಪಂಚದಲ್ಲೂ ಗ್ರಾಫಿಕ್ ಡಿಸೈನರ್‌ನ ಪ್ರಭಾವ ಗಾಢವಾಗಿದೆ.
ಫೇಸ್‌ಬುಕ್‌ನ ಬಣ್ಣ ಯಾವುದೆಂದು ಕೇಳಿದರೆ, “ನೀಲಿ’ ಎಂದು ಮಗು ಕೂಡಾ ಹೇಳುತ್ತದೆ. ಜಾಲತಾಣಗಳ ಬಣ್ಣ ಸಂಯೋಜನೆ, ಐಕಾನ್, ಸೆಲಿಗಳ ಹಿಂದಿರುವುದು ಕೂಡಾ ಗ್ರಾಫಿಕ್ ಡಿಸೈನರ್. ಅವನನ್ನು ಚಿತ್ರ, ಫೋಟೋ, ಅಕ್ಷರ, ಆಕಾರ ಮತ್ತು ಗ್ರಾಫಿಕ್‌ಗಳನ್ನು ಬಳಸಿ ಯಶಸ್ವಿಯಾಗಿ ಸಂವಹನ ನಡೆಸಬಲ್ಲ ಚತುರ ಕಲಾವಿದ ಎನ್ನಬಹುದು. ಗ್ರಾಫಿಕ್ ಡಿಸೈನರ್ ಕುಂಚ, ಕ್ಯಾನ್ವಾಸ್ ಜೊತೆ ಆಟವಾಡುವವನಲ್ಲ. ಈತ ಕಂಪ್ಯೂಟರ್ ಪರದೆಯೆದುರು ಕುಳಿತು ಕೆಲಸ ಮಾಡುವಾತ.
ಗ್ರಾಹಕನ ನಾಡಿಮಿಡಿತ: ಗ್ರಾಫಿಕ್ ಡಿಸೈನರ್‌ನ ಕೆಲಸ ಮೀಟಿಂಗ್‌ನಿಂದ ಶುರುವಾಗುತ್ತದೆ. ಗ್ರಾಹಕನಿಗೆ ಏನು ಬೇಕೆನ್ನುವುದನ್ನು ಮೊದಲು ಆತ ಗ್ರಹಿಸುತ್ತಾನೆ. ಅದು ಬಹಳ ಮುಖ್ಯವಾದ ಕೆಲಸ. ತನಗೇನು ಬೇಕು ಎನ್ನುವುದಕ್ಕಿಂತಲೂ ಗ್ರಾಹಕ ಏನು ಬಯಸುತ್ತಿದ್ದಾನೆ ಎನ್ನುವುದನ್ನು ಗೊಂದಲಗಳಿಲ್ಲದಂತೆ ಸ್ಪಷ್ಟ ಪಡಿಸಿಕೊಳ್ಳಬೇಕು. ಗ್ರಾಹಕನ ಅಮೂರ್ತ ಭಾವನೆಗಳಿಗೆ ಒಂದು ರೂಪ ಕೊಡಲು ಪ್ರಯತ್ನಿಸಬೇಕು. ಚಿತ್ರಕ್ಕೆ ಸೂಕ್ತವಾದ ಅಕ್ಷರ ಶೈಲಿ (ಫಾಂಟ್), ಬಣ್ಣ, ಡಿಸೈನ್ ಲೇಔಟ್ ಬಳಕೆ ಆತನದೇ ಕೈಚಳಕ.
ಗ್ರಾಫಿಕ್ ಡಿಸೈನರ್‌ನ ವಿದ್ಯಾರ್ಹತೆ: ವಿದ್ಯಾರ್ಹತೆಗಿಂತ ಮುಖ್ಯವಾಗಿ ಸೃಜನಶೀಲ ಮನಸ್ಸು ಮೊದಲ ಅರ್ಹತೆ. ಇಂದು ಅನೇಕ ಖಾಸಗಿ ಡಿಸೈನ್ ಸ್ಕೂಲ್‌ಗಳು, ಆನ್‌ಲೈನ್ ಕೋರ್ಸ್‌ಗಳು, ಸರ್ಕಾರಿ ಕಲಾ ಶಾಲೆಗಳಲ್ಲಿ ಗ್ರಾಫಿಕ್ ಡಿಸೈನಿಂಗ್ ತರಬೇತಿ ಪಡೆಯಬಹುದು. ಇದಲ್ಲದೆ ವಿಶುವಲ್ ಆರ್ಟ್ಸ್, 2ಡಿ, 3ಡಿ, ಡಿಜಿಟಲ್ ಫೋಟೋಗ್ರಫಿ ಮುಂತಾದವನ್ನೂ ಈ ತರಗತಿಗಳಲ್ಲಿ ಕಲಿಯಬಹುದು.
ಗ್ರಾಫಿಕ್ ಡಿಸೈನರ್‌ಗೆ ಹತ್ತು ಹಲವು ಸಾಫ್ಟ್ವೇರ್‌ಗಳ ಪರಿಣತಿ ಬೇಕಾಗುತ್ತದೆ. ಅಡೋಬ್ ಇಲ್ಲಸ್ಟ್ರೇಟರ್, ಫೋಟೋಶಾಪ್, ಕೋರೆಲ್ ಡ್ರಾ, ಕ್ವಾರ್ಕ್ ಎಕ್ಸ್‌ಪ್ರೆಸ್, ಇನ್‌ಡಿಸೈನ್ ಮೊದಲಾದ ಡಿಸೈನ್ ಟೂಲ್‌ಗಳ ಪರಿಚಯ ಇರಬೇಕಾಗುತ್ತದೆ. ಕಾಲೇಜನ್ನು ಆಯ್ಕೆ ಮಾಡುವಾಗ, ಇಂಟರ್ನ್ಶಿಪ್ ದೊರೆಯುವಂತಹ ಕಾಲೇಜುಗಳನ್ನು ಸೇರುವುದು ಉತ್ತಮ.
ಎಲ್ಲೆಲ್ಲಾ ಕೆಲಸ ಗಿಟ್ಟಿಸಬಹುದು?
-ಜಾಹೀರಾತು ವಿಭಾಗ
-ಸಾರ್ವಜನಿಕ ಸಂಪರ್ಕ ವಿಭಾಗ(ಪಬ್ಲಿಕ್ ರಿಲೇಷನ್ಸ್ )
-ಪುಸ್ತಕ ಮುದ್ರಣ
-ದಿನಪತ್ರಿಕೆ, ವಾರಪತ್ರಿಕೆಗಳು
-ಆನ್‌ಲೈನ್ ಸಂಸ್ಥೆಗಳು
-ಸಿನಿಮಾ ಕಲಾ ನಿರ್ದೇಶಕ
-ಇಂಡಸ್ಟ್ರಿಯಲ್ ಡಿಸೈನರ್
-ಆರ್ಕಿಟೆಕ್ಟ್
-ಮಲ್ಟಿಮೀಡಿಯಾ ಡಿಸೈನರ್
* ರಘು. ವಿ., ಪ್ರಾಂಶುಪಾಲರು