Advertisement

ರಾಜ್ಯದಲ್ಲಿ ಜಾತ್ರೆ-ಉತ್ಸವಕ್ಕೆ ಅನುಮತಿ ನೀಡಿ

05:41 PM Feb 05, 2022 | Team Udayavani |

ಬೆಳಗಾವಿ: ರಾಜ್ಯಾದ್ಯಂತ ನಿರ್ಬಂಧ ಹೇರಿರುವ ಜಾತ್ರೆ, ಪಲ್ಲಕ್ಕಿ ಉತ್ಸವ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಶ್ರೀರಾಮಸೇನೆ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ಸದ್ಯ ಕೋವಿಡ್‌ ನಿಯಮಗಳನ್ನು ಮುಕ್ತಗೊಳಿಸಿದೆ. ಮಾರುಕಟ್ಟೆ, ಮಾಲ್‌, ಪಬ್‌, ಬಾರ್‌, ಸಿನಿಮಾ ಮಂದಿರ, ಶಾಲಾ ಕಾಲೇಜುಗಳನ್ನು ಓಪನ್‌ ಮಾಡಿದೆ. ಆದರೆ ಹಿಂದೂಗಳ ಧಾರ್ಮಿಕ ಆಚರಣೆಗಳಾದ ಜಾತ್ರೆ, ಉತ್ಸವ, ರಥೋತ್ಸವಕ್ಕೆ ನಿರ್ಬಂಧ ಹೇರಿದ್ದು ಖಂಡನೀಯ ಎಂದು ದೂರಿದರು. ಪ್ರಮೋದ ಮುತಾಲಿಕ ಮಾತನಾಡಿ, ವರ್ಷಕ್ಕೆ ಒಮ್ಮೆ ನಡೆಯುವ ಈ ಜಾತ್ರೆ, ಹಬ್ಬಗಳು ಧಾರ್ಮಿಕ ಅಷ್ಟೇ ಅಲ್ಲ, ಲಕ್ಷಾಂತರ ಜನರ ಉಪಜೀವನಕ್ಕೆ ಸಹಕಾರಿಯಾಗಿವೆ. ಪಬ್‌, ಬಾರ್‌ ಗಳಲ್ಲಿ ಜನರು ಸಾರಾಯಿ ಕುಡಿದು ಸಾಯುವುದಕ್ಕಿಂತ ಜಾತ್ರೆ, ಯಾತ್ರೆಗಳ ಆಚರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಕೋವಿಡ್‌ ನೆಪ ಹೇಳಿ ಇಂತಹ ಜಾತ್ರೆ, ಉತ್ಸವಗಳನ್ನು ಬ್ಯಾನ್‌ ಮಾಡುವುದರಿಂದ ಜನರನ್ನು ಸಾಲ, ನಿರುದ್ಯೋಗ, ಹಸಿವಿನಿಂದ ಸರ್ಕಾರ ಕೊಲ್ಲುತ್ತಿದೆ. ಎರಡು ವರ್ಷದಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ತಿಂಗಳು ಪೂರ್ತಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ, ಚಿಂಚಲಿ ಮಾಯಕ್ಕಾ ದೇವಿ ಸೇರಿ ಅನೇಕ ಜಾತ್ರೆಗಳು ನಡೆಯುತ್ತವೆ. ಇದನ್ನು ನಂಬಿ ಅನೇಕರು ಬದುಕು ನಡೆಸುತ್ತಾರೆ. ಹೀಗಾಗಿ ಜಾತ್ರೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಎಲ್ಲ ಚಟುವಟಿಕೆಗಳು ಬಂದ್‌ ಆಗಿವೆ. ಆದರೆ ಹಿಂದೂ ಧರ್ಮದ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಮುಂದುವರಿಸಿರುವುದು ಸರಿಯಲ್ಲ. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳಲ್ಲಿ ರೈತರು, ಕಾರ್ಮಿಕರು, ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು ಸೇರಿದಂತೆ ಲಕ್ಷಾಂತರ ಜನರು ಬದುಕು ಸಾಗಿಸುತ್ತಾರೆ.

ಹಿಂದುತ್ವದ ಹೆಸರು ಹೇಳುವ ಬಿಜೆಪಿಯವರಿಗೆ ಗೊತ್ತಾಗುವುದಿಲ್ಲವೇ. ರಾಜಕೀಯ ಸಭೆ, ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ ಹೊರತು ಜಾತ್ರೆಗೆ ಮಾತ್ರ ನಿಬಂìಧವೇಕೆ ಎಂದು ಪ್ರಶ್ನಿಸಿದರು. ಈ ತಿಂಗಳು ರಾಜ್ಯಾದ್ಯಂತ ವಿವಿಧ ಜಾತ್ರೆಗಳು ನಡೆಯುತ್ತವೆ. ಸರ್ಕಾರ ಕೂಡಲೇ ಜಾತ್ರೆಗಳಿಗೆ, ರಥೋತ್ಸವಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್‌ ಕೋಕಿತಕರ ಹಾಗೂ ಕಾರ್ಯಾಧ್ಯಕ್ಷ ವಿನಯ್‌ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next