ಮನಸ್ಸೆಂಬ ಸಂಚಿಯಲ್ಲಿ ನೆನಪುಗಳ ಹೊಯ್ದಾಟ. ಒಂದೊಂದು ನೆನಪೂ ತಾ ಮುಂದು, ತಾ ಮುಂದು ಎನ್ನುತ್ತ ಒಂದನ್ನೊಂದು ಹಿಂದಕ್ಕೆ ಸರಿಸಿ ನನ್ನ ಸ್ಮತಿಪಟಲದಲ್ಲಿ ಮಿಂಚುತ್ತಿತ್ತು. ಈ ಮನಸ್ಸೇ ಹಾಗೆ. ನೆನಪುಗಳ ಉದ್ಯಾನದಲ್ಲಿ ಒಮ್ಮೆ ವಿಹರಿಸಹೊರಟರೆ ಮತ್ತೆ ಅದನ್ನು ವಾಸ್ತವಕ್ಕೆ ಎಳೆದು ತರುವುದು ಬಲು ಪ್ರಯಾಸದ ಕೆಲಸ. ಇನ್ನು ಆ ನೆನಪುಗಳ ಗುತ್ಛಕ್ಕೆ ಪೂರಕವಾಗುವಂತೆ ಯಾವುದಾದರೂ ವಸ್ತು ಕಣ್ಣಿಗೆ ಬಿದ್ದರಂತೂ ಕೇಳುವುದೇ ಬೇಡ. ಇದೇ ನನ್ನ ಕೊನೆಯ ನಿಲ್ದಾಣ ಎನ್ನುತ್ತ ಅಲ್ಲಿಯೇ ಗಟ್ಟಿ ನಿಂತುಬಿಡುತ್ತದೆ ಈ ಮನಸ್ಸು. ಮೊನ್ನೆ ನನ್ನಲ್ಲಿ ಆದದ್ದೂ ಅದೇ.
ನನ್ನ ಅಜ್ಜ ನಮ್ಮನ್ನಗಲಿ ಕೆಲವು ದಿನಗಳಾದ ಮೇಲೆ ಮೊನ್ನೆ ಏನೋ ಒಂದು ವಸ್ತುವನ್ನು ಹುಡುಕುತ್ತಿದ್ದ ನನಗೆ, ಅಕಸ್ಮತ್ತಾಗಿ ಅಜ್ಜನ ಕನ್ನಡಕ ಕಣ್ಣಿಗೆ ಬಿತ್ತು. ಏನೋ ಕುತೂಹಲವಾಗಿ ಅಜ್ಜನ ಪೆಟ್ಟಿಗೆಯ ತೆರೆದೆ, ನೆನಪುಗಳ ಪ್ರಪಂಚಕ್ಕೆ ಕಾಲಿಟ್ಟೆ.
“ಅಜ್ಜ’ ಎಂದಾಗ ಸೊಂಟದಲ್ಲೊಂದು ಬೈರಾಸು, ಕೈಯಲ್ಲೊಂದು ಕತ್ತಿ, ಹೆಗಲ ಮೇಲೊಂದು ಹಾಳೆಯ ಬ್ಯಾಗ್ ಹಾಕಿಕೊಂಡು ತೋಟಕ್ಕೆ ಹೋಗುತ್ತಿರುವ ಒಂದು ವ್ಯಕ್ತಿತ್ವ ಕಣ್ಣೆದುರಿಗೆ ಬರುತ್ತದೆ. “ಚಕ್ಕುಲಿ ಭಟ್ರಾ’ ಎಂದು ಎಲ್ಲೆಡೆಯೂ ಚಿರಪರಿಚಿತರು ನನ್ನ ಅಜ್ಜ . ಯಾರಾದರೂ ಊರಲ್ಲಿ ನನ್ನ ಪರಿಚಯವನ್ನು ಕೇಳಿದರೆ, ನಾನು ಹೇಳುವ ಮೊದಲೇ “”ಆರ್ ಚಕ್ಕುಲಿ ಭಟ್ರೆನ ಪುಲ್ಲಿ ಅತೆ. ಈರೊಂಜಿ ದಾದೆ” ಎನ್ನುವ ಊರಿನವರ ಮಾತುಗಳ ಕೇಳಿದಾಗ, ಅಜ್ಜನ ಬಗ್ಗೆ ಹೆಮ್ಮೆ ಎನಿಸುತ್ತಿತ್ತು. ಮೊನ್ನೆ ಅಜ್ಜನ ಪೆಟ್ಟಿಗೆಯ ತೆರೆದಾಗ ನನಗೆ ಸಿಕ್ಕಿದ್ದು ಅವರ ಕನ್ನಡಕ, ಅಡಕೆ ಕತ್ತರಿಸಲು ಬಳಸುತ್ತಿದ್ದ ಚೂರಿ, ಹಲ್ಲು ಸೆಟ್ಟಿನ ಬಾಕ್ಸ್, ಒಂದು ಮಂತ್ರಪುಸ್ತಕ, ಹಳೇ ಪರ್ಸ್, ಆ ಪರ್ಸಿನೊಳಗೆ ಮೊಮ್ಮಕ್ಕಳಾದ ನಮ್ಮ ಫೋಟೋಗಳು ಮತ್ತು ಒಂದು ನೋಟ್‌ಪುಸ್ತಕ. ಪ್ರತಿಯೊಂದರ ಹಿಂದೆಯೂ ಒಂದೊಂದು ಕತೆ ಇದೆ. ಹಲ್ಲು ಸೆಟ್ಟು ಕೇವಲ ಒಂದು ಬಾರಿ ಬಳಸಿ, ಆ ಡಾಕ್ಟರಿಗೆ ದಿನಕ್ಕೊಮ್ಮೆಯಾದರೂ “”ನನ್ನ ಅಷ್ಟು ಗಟ್ಟಿಯ ಹಲ್ಲು ಪೂರಾ ಲಗಾಡಿ ತೆಗª ಅವ ಡಾಕುó” ಎಂದು ಶಪಿಸುತ್ತಾ ನಮ್ಮನ್ನೆಲ್ಲಾ ನಗೆಯಲ್ಲಿ ತೇಲಿಸುತ್ತಿದ್ದರು. ಇನ್ನು ಕನ್ನಡಕ, “”ಅಜ್ಜ , ಕನ್ನಡಕ ಇಡಿ” ಎಂದು ನಾವು ಹೇಳಿದರೆ, “”ನಾನೇನು ಮುದುಕನಾ?” ಎಂದು ತುಸು ಮುನಿಸಿಕೊಳ್ಳುತ್ತಿದ್ದ ಅವರು, ಒಮ್ಮೆ ನಾವು, “”ಅದು ಈಗಿನ ಟ್ರೆಂಡ್ ಕನ್ನಡಕ ಹಾಕುದು” ಎಂದಾಗ, “”ಹೌದಾ” ಎಂದು ಉದ್ಗರಿಸಿ, ಮರುದಿನ ಬೆಳಿಗ್ಗೆಯೇ ನಮ್ಮಿಂದ ತಪ್ಪಿಸಿಟ್ಟಿದ್ದ ಕನ್ನಡಕ ಹುಡುಕಿ ಹಾಕಿಕೊಂಡು ಪೇಪರ್ ಓದಿದ್ದು ಇಂದಿಗೂ ನೆನಪಿದೆ. ಹೀಗೆ ಆ ಕತೆಗಳ ಸರಣಿ ಮುಂದುವರಿಯುತ್ತದೆ.
ಜೀವನ ಎಂಬ ನಾಟಕರಂಗದಲ್ಲಿ ಅಜ್ಜಂದು ಪರಿಪೂರ್ಣವಾದಂತಹ ಪಾತ್ರ. ಗಂಡನಾಗಿ, ಅಪ್ಪನಾಗಿ, ಮಾವನಾಗಿ, ಚಿಕ್ಕಪ್ಪನಾಗಿ, ಅಣ್ಣನಾಗಿ, ದೊಡ್ಡಪ್ಪನಾಗಿ- ಹೀಗೆ ಎಲ್ಲಾ ಪಾತ್ರಗಳಿಗೂ ನ್ಯಾಯ ಸಲ್ಲಿಸಿದ್ದಾರೆ. ನಾವು “ವಾಚ್ ಕಟ್ಟಿ ಅಜ್ಜ” ಎಂದರೆ, “”ನನಗೆ ಯಾಕೆಯಾ ವಾಚ್, ನೀನು ಕಟ್ಟು” ಎನ್ನುತ್ತಲೇ ತನ್ನ ಇಡೀ ಜೀವನವನ್ನು ಹಳೆಯ ಮನೆಯಲ್ಲಿಯೇ ಕಳೆದುಬಿಟ್ಟರು. ತನ್ನ ಸಂಬಂಧಿಕರೇ ನನಗೆ ಮೋಸ ಮಾಡಿದರಲ್ಲ ಎನ್ನುವ ಕೊರಗು ಅವರಲ್ಲಿತ್ತು. ಅದನ್ನು ಅವರು ನಮ್ಮ ಆಟ-ಪಾಠಗಳಲ್ಲಿ ಮರೆಯಲು ಯತ್ನಿಸುತ್ತಿದ್ದುದು ಎಲ್ಲರಿಗೂ ಗೊತ್ತಿದ್ದ ಗುಟ್ಟು.
ಅಜ್ಜನ ಕೈಯ ಹಿಡಿದುಕೊಂಡು ಹೋಗುತ್ತಿದ್ದ ಜಾತ್ರೆಗಳು, ಯಕ್ಷಗಾನಗಳು, ಅಲ್ಲಿ ಅವರ ಸಮಕಾಲೀನರ ಜೊತೆ ಹಂಚಿಕೊಳ್ಳುತ್ತಿದ್ದ ಸಾಹಸಗಾಥೆಗಳು, ಅವರು ತಂದುಕೊಡುತ್ತಿದ್ದ ಒಣದ್ರಾಕ್ಷಿ , ಖರ್ಜೂರ ಹೀಗೆ ಎಲ್ಲವೂ ನನ್ನ ನೆನಪಿನ ಸರಣಿಯಲ್ಲಿ ಸೇರಿಕೊಂಡಿದೆ.
ಒಂದು ಕೈಯಲ್ಲಿ ಚಕ್ಕುಲಿಯ ಕಟ್ಟುಗಳ ಬ್ಯಾಗ್, ಇನ್ನೊಂದು ಕೈಯಲ್ಲಿ ನನ್ನ ಎತ್ತಿಕೊಂಡು ಊರೆಲ್ಲ ಸುತ್ತಿಸಿದ ನನ್ನ ಅಜ್ಜನ ನೆನಪನ್ನು ಜೀವಂತವಾಗಿಡಲು ಪದಗಳೇ ಸೂಕ್ತ ಎಂದೆನಿಸಿತು. ಬರೆದುಬಿಟ್ಟೆ.
ವಸುಧಾ ಎನ್. ರಾವ್ ತೃತೀಯ ಬಿ.ಕಾಂ ಶ್ರೀ ಮಹಾವೀರ ಕಾಲೇಜು, ಮೂಡಬಿದ್ರೆ