ಒಬ್ಬ ಬಡ ತಾತ, ತನ್ನ ಜೀವನ ನಡೆಸಲು ಒಂದು ಹೊತ್ತಿನ ಊಟಕ್ಕಾಗಿ ದುಡಿಯಲು ಬಸ್ ನಿಲ್ದಾಣಕ್ಕೆ ಬರುತ್ತಾನೆ. ಅಲ್ಲಿ ರಾತ್ರಿ ಹಗಲುಗಳನ್ನದೆ ಪೇಪರ್ ಅನ್ನು ಮಾರಲು ಪ್ರಾರಂಭಿಸುತ್ತಾನೆ. ಒಂದು ಪೇಪರ್‌ಗೆ ಐದು ರೂಪಾಯಿ ಆಗಿದ್ದು, ಎಂದಿನಂತೆ ಪೇಪರ್ ಗಳನ್ನು ಮಾರಲು ಬಸ್ ನಿಲ್ದಾಣಕ್ಕೆ ಬಂದು, ಜನರಲ್ಲಿ ಪೇಪರ್‌ಗಳನ್ನು ತೆಗೆದುಕೊಳ್ಳುವಂತೆ ಕೇಳುತ್ತಾರೆ. ಆದರೆ ಪೇಪರನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ನಾನು ಕೆಲಸಕ್ಕೆ ಹೋಗಲು ಬಸ್ಸಿನಲ್ಲಿ ಪ್ರಯಾಣಬೆಳೆಸಬೇಕಿದ್ದರಿಂದ ಆ ಬಸ್ ತಂಗುದಾಣಕ್ಕೆ ಬಂದು ಕೂತಿರುವ ಸಂದರ್ಭದಲ್ಲಿ, ಆ ತಾತನನ್ನು ನೋಡುತ್ತೇನೆ. ಆ ತಾತ ಎಲ್ಲರೊಡನೆ ಅಣ್ಣ ಪೇಪರ್ ತಗೋಳಿ ಅಣ್ಣ, ಪೇಪರ್ ತಗೋಳಿ ಎಂದು ಕೇಳುತ್ತಿರುತ್ತಾರೆ .
ಆದರೆ ಅಲ್ಲಿ ಇರುವ ಜನರಿಗೆ ಯಾರಿಗೂ ಆ ಅಜ್ಜನ ಮೇಲೆ ಕರುಣೆ ಹುಟ್ಟೋದಿಲ್ಲ, ಒಂದು ಹೊತ್ತಿನ ಊಟ ಮಾಡುತ್ತೇನೆ ಪೇಪರ್ ತಕೋಳಿ ಅಣ್ಣ,ಅಕ್ಕ ಎಂದು ಹೇಳುತ್ತಾರೆ. ಆದರೆ ಯಾರು ಖರೀದಿಸುವುದಿಲ್ಲ. ಅನಂತರ ಅಜ್ಜ ಒಂದು ಮೂಲೆಯಲ್ಲಿ ಹೋಗಿ ಕೂರುತ್ತಾರೆ. ಆಗ ಆ ತಾತ ನನ್ನನ್ನು ನೋಡಿ ನನ್ನ ಬಳಿ ಬರುತ್ತಾರೆ. ನನ್ನ ಹತ್ತಿರ ಬಂದು ಪೇಪರ್ ತಗೋ ಎಂದು ಹೇಳುತ್ತಾರೆ.
ಆಗ ನಾನು ಹತ್ತು ರೂಪಾಯಿ ಕೊಟ್ಟು ಅವರ ಕೈಯಿಂದ ಒಂದು ಪೇಪರನ್ನು ತೆಗೆದುಕೊಳ್ಳುತ್ತೇನೆ.ಅನಂತರ ತಾತ ಹೇಳುತ್ತಾರೆ,ನನ್ನ ಕೈಯಲ್ಲಿ ಚಿಲ್ಲರೆ ಇಲ್ಲ. ನೀನು ಹತ್ತು ರೂಪಾಯಿ ಕೊಟ್ಟರೆ, ನಾನು ಉಳಿದ ಚಿಲ್ಲರೆಯನ್ನು ಎಲ್ಲಿಂದ ಕೊಡಲಿ ಎಂದು ಹೇಳುತ್ತಾರೆ. ಆಗ ನಾನು ನೀವೇ ಇಟ್ಟುಕೊಳ್ಳಿ ಎಂದು ಹೇಳುತ್ತೇನೆ . ಆನಂತರ ಅವರು ಆಯ್ತಪ್ಪ ನಾನೇ ಇಟ್ಟುಕೊಳ್ಳುತ್ತೇನೆ ಎಂದರು.
ನನಗೆ ಕೆಲಸಕ್ಕೆ ಹೊತ್ತಾದ್ದರಿಂದ ನಾನು ಅಲ್ಲಿಂದ ಹೊರಟು ಹೋಗುತ್ತೇನೆ . ಮರುದಿನ ಬಂದಾಗ ಆ ತಾತ ಅಲ್ಲಿಯೇ ಪೇಪರನ್ನು ಮಾರಿಕೊಂಡಿರುತ್ತಾರೆ. ಎಂದಿನಂತೆ ನಾನು ಬಸ್ಸು ತಂಗುದಾನದಲ್ಲಿ ಬೆಳಗ್ಗೆ ಕುಳಿತುಕೊಂಡಿರುವಾಗ ತಾತ ಬಂದು ಉಳಿದ ಹಣವನ್ನು ನನಗೆ ಕೊಟ್ಟು ನನ್ನ ಜೊತೆ ಕೇಳುತ್ತಾರೆ, ನೀನು ಯಾಕೆ ಇಲ್ಲಿ ಕುಳಿತು ಕೊಂಡಿದ್ದೀಯಾ? ಎಂದು ಕೇಳಿದಾಗ, ನನಗೆ ಕೆಲಸಕ್ಕೆ ಹೋಗಲು ಉದಾಸೀನಾವಾಗುತ್ತಿದೆ ಎಂದು ಉತ್ತರಿಸಿದಾಗ, ವಯಸ್ಸಾದ ಅವರು ಹೇಳುತ್ತಾರೆ. ನಿನ್ನ ಯಾವ ಶ್ರಮವೂ ವ್ಯರ್ಥವಾಗಬಾರದೆಂಬ ಕಾಳಜಿ ನಿನಗಿದ್ದರೆ, ವ್ಯರ್ಥವೆನಿಸುವ ಯಾವುದೇ ಕಾರ್ಯಗಳಲ್ಲಿ ನಿನ್ನ ಅಮೂಲ್ಯವಾದ ಸಮಯ ಕಳೆಯಬೇಡ ಎನ್ನುತ್ತಾರೆ.
ಅವರ ಪರಿಸ್ಥಿತಿ ಹಾಗಿದ್ದರೂ ನನ್ನ ಒಳಿತಿಗಾಗಿ ಅವರ ಆ ಒಳ್ಳೆಯ ಮನಸ್ಸಿನಿಂದ ಒಂದು ಮಾತು ಹೇಳುತ್ತಾರೆ, ಈಗ ನಾನೇ ನೋಡು ನನ್ನ ಕೈಯಿಂದ ಯಾರಾದರೂ ಪೇಪರನ್ನು ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಮನುಷ್ಯನಾದವನಿಗೆ ನಂಬಿಕೆ ಎನ್ನುವುದು ತುಂಬಾ ಮುಖ್ಯವಾಗಿರುತ್ತದೆ. ಸದಾ ಸಂದೇಹ ಪಡುವವನಿಗೆ ಸುಖ ಎನ್ನುವುದು ಇಹಲೋಕದಲ್ಲಿ ಇಲ್ಲ, ಪರಲೋಕದಲ್ಲಿಯೂ ಇರುವುದಿಲ್ಲ. ಕೆಲ ಮನುಷ್ಯರು ಆಡುವ ಮಾತ ಕೇಳಿದರೆ ಹೊಟ್ಟೆಗೆ ಚೂರಿ ಬಿದ್ದಹಾಗೆ ಆಗುತ್ತದೆ ಎಂದು ನನ್ನೊಂದಿಗೆ ಹೇಳಿದರು. ಆದರೆ ನೀನು ನನ್ನ ಹಾಗೆ ಆಗಬೇಡ ಒಳ್ಳೆಯ ಕೆಲಸಕ್ಕೆ ಹೋಗು ಎಂದರು.
ಈ ಮಾತನ್ನು ಕೇಳಿ ನನ್ನ ಮನಸ್ಸು ಬದಲಾಗಿ ನಾನು ಕೆಲಸಕ್ಕೆ ಹೋಗುತ್ತೇನೆ. ಒಂದು ತಿಂಗಳ ಅನಂತರ ಸಂಬಳದೊಂದಿಗೆ ಬರುತ್ತೇನೆ. ಅದ್ಯಾಕೋ ನನಗೆ ಆ ತಾತನನ್ನು ಕಾಣಲೇ ಬೇಕೆಂಬ ಮನಸಾಯ್ತು. ಒಂದು ತಿಂಗಳ ಹುಡುಕಾಟದ ಬಳಿಕ ಆ ತಾತ ಸಿಕ್ಕಾಗ ಅವರ ಬಳಿ ನನ್ನ ಗುರುತಿದೆಯೇ ? ಎಂದು ಕೇಳಿದೆ. ಆಗ ನಾನು ಒಂದು ತಿಂಗಳ ಮುಂದೆ ಸಿಕ್ಕಿ ನಿಮ್ಮೊಂದಿಗೆ ಕುಳಿತು ಮಾತನಾಡಿದೆ ಅಲ್ಲ ಎಂದು ಹೇಳಿದಾಗ, ಅವರಿಗೆ ನೆನಪಾಯಿತು. ಅವರೊಂದಿಗೆ ನಾನು ನಿಮಗೆ ಏನಾದರೂ ಕೊಡಲೇಬೇಕು ಎಂದು ಹೇಳಿದೆ. ನಿಮಗೆ ಏನು ಬೇಕು ಎಂದು ಕೇಳಿದಾಗ ಅವರು, ನನ ಗೇನು ಬೇಡ ಎಂದರು.
ದಾನ, ಧರ್ಮ ಮಾಡಲು ಶ್ರೀಮಂತರಾಗಬೇಕೆಂದೇನಿಲ್ಲ ಅಥವಾ ಶ್ರೀಮಂತನಾಗುವವರೆಗೂ ಕಾಯಬೇಕಿಲ್ಲ. ಸಹಾಯ ಮಾಡುವ ಗುಣಕ್ಕೆ ಸಮಯದ ಪರಿವಿಲ್ಲ,ಆ ಗುಣವು ಹೃದಯದಿಂದ ಬರಬೇಕು.
-ಮೋಕ್ಷಿತ್ ಗೌಡ
ಜಾಲ್ಸೂರು