ಬೆಂಗಳೂರು: ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಯೋಜನೆ ಬುಧವಾರದಿಂದ ರಾಜ್ಯದ 3,026 ಗ್ರಾಮ ಪಂಚಾಯತ್‌ಗಳಲ್ಲಿ ಆರಂಭವಾಗಿದೆ. ಮಾರ್ಚ್ ಅಂತ್ಯದೊಳಗೆ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವರ್ಚುಯಲ್ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ರಾಜ್ಯದ 12 ಜಿಲ್ಲೆಗಳಲ್ಲಿ ಗ್ರಾಮ ಒನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರಕಾರದ ಸೌಲಭ್ಯ ಪಡೆಯಲು ಜನರು ಸಮಯ ಹಾಗೂ ಹಣ ವ್ಯಯಿಸುವುದನ್ನು ತಪ್ಪಿಸಿ ಗ್ರಾಮೀಣ ಜನರ ಬಳಿಯೇ ಸೇವೆಗಳನ್ನು ತಲುಪಿಸುವ ಧ್ಯೇಯದೊಂದಿಗೆ ಗ್ರಾಮ ಒನ್ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಕೃಷಿ, ತೋಟಗಾರಿಕೆ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಹಲವಾರು ಸೇವೆಗಳು ಗ್ರಾಮ ಮಟ್ಟದಲ್ಲಿ ಲಭ್ಯವಾಗಿಸುವ ಚಿಂತನೆಯಿಂದ ಗ್ರಾಮ ಒನ್ ಪ್ರಾರಂಭಿಸಲಾಗಿದೆ. ತಾಲೂಕು ಕಚೇರಿಯಲ್ಲಿ ಸೇವೆಗಳಿಗಾಗಿ ಜನಸಂದಣಿ ತಪ್ಪಿಸಲು ಹಾಗೂ ಸೇವೆಗಳ ಪೂರೈಕೆಯಲ್ಲಿ ವಿಕೇಂದ್ರೀಕರಣದ ಉದ್ದೇಶದಿಂದ, ಗ್ರಾಮಮಟ್ಟದಲ್ಲಿಯೂ ಈ ಎಲ್ಲ ಸೇವೆಗಳನ್ನು ಒದಗಿಸಲಾಗುವುದು. ಗ್ರಾಮಸ್ಥರು ನೇರವಾಗಿ ಗ್ರಾಮ ಪಂಚಾಯತಿಗಳಿಗೆ ತೆರಳಿ ಗ್ರಾಮ ಒನ್ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಯತ್ನಾಳ್ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ
ಜಿಲ್ಲಾಧಿಕಾರಿಗಳ ನಾಯಕತ್ವ
ಗ್ರಾಮ ಒನ್‌ನ ಪ್ರಾಯೋಗಿಕ ಹಂತದಲ್ಲಿಯೇ 6 ಲಕ್ಷಕ್ಕಿಂತ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ ಸೇವೆಗಳನ್ನು ಪೂರೈಸಲಾಗಿದೆ. ತಹಶೀಲ್ದಾರರು, ಸಹಾಯಕ ಕಮೀಷನರ್ ಅವರ ಸಹಕಾರ ಬಹಳ ಮುಖ್ಯ. ಅನ್‌ಲೈನ್‌ನಲ್ಲಿ ಸ್ವೀಕೃತವಾಗುವ ಅರ್ಜಿಗಳಿಗೆ ಶೀಘ್ರವಾಗಿ ಮಂಜೂರಾತಿ ನೀಡಿದಾಗ ಮಾತ್ರ ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ಜನರಿಗೆ ದೊರಕಿಸಿಕೊಡಲು ಸಾಧ್ಯವಾಗುತ್ತದೆ. ಆಯಾ ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಜವಾಬ್ದಾರಿ ಹಾಗೂ ನಾಯಕತ್ವ ವಹಿಸಬೇಕು ಎಂದು ತಿಳಿಸಿದರು.