Advertisement

ಹಳ್ಳಿಹೊಳೆ: ಗ್ರಾಮಭಾರತ ವರದಿಗೆ ಸಂಸದರ ಸ್ಪಂದನೆ : ಹಳ್ಳಿಹೊಳೆಗೆ ಸಂಸದರ ಕಚೇರಿ ತಂಡ ಭೇಟಿ

03:01 AM Jul 04, 2021 | Team Udayavani |

ಹಳ್ಳಿಹೊಳೆ : ಗ್ರಾಮದ ಹಲವು ಸಮಸ್ಯೆಗಳ ಬಗ್ಗೆ “ಇಳಿದಷ್ಟೂ ಸಮಸ್ಯೆ ಆಳ’ ಎನ್ನುವ ಶೀರ್ಷಿಕೆಯಡಿ “ಗ್ರಾಮಭಾರತ’ ಹೊಸ ಸರಣಿಯಲ್ಲಿ ಪ್ರಕಟಗೊಂಡ ಸಮಗ್ರ ವರದಿಗೆ ಸಂಸದ ಬಿ.ವೈ. ರಾಘವೇಂದ್ರ ಸ್ಪಂದಿಸಿದ್ದು, ಶನಿವಾರ ಹಳ್ಳಿಹೊಳೆಗೆ ಭೇಟಿ ನೀಡಿದ ಅವರ ಕಚೇರಿಯ ತಂಡವು ಗ್ರಾಮಸ್ಥರ ಬೇಡಿಕೆ ಕುರಿತಂತೆ ವಿಸ್ತೃತ ವರದಿ ತಯಾರಿಸಲು ಮುಂದಾಗಿದೆ.

Advertisement

ತಂಡವು ಶನಿವಾರ ಪ್ರಮುಖವಾಗಿ ಸೇತುವೆ ಬೇಡಿಕೆಯಿರುವ ಕಬ್ಬಿನಾಲೆ, ದೇವರಬಾಳು, ಕಟ್ಟಿನಾಡಿ ಪ್ರದೇಶಕ್ಕೆ ಭೇಟಿ ನೀಡಿ, ಎರಡೂ ಕಡೆ ಗಳಲ್ಲಿ ಸೇತುವೆಗೆ ಪ್ರಸ್ತಾವ ಸಲ್ಲಿಸುವ ಸಂಬಂಧ ಪರಿಶೀಲಿಸಿತು. ತ್ವರಿತವಾಗಿ ಅಂದಾಜು ಪಟ್ಟಿ ತಯಾರಿಸಿ, ಸಂಸದರ ಕಡೆಯಿಂದ ಸರಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ.

ಮಳೆಗಾಲದಲ್ಲಿ ದ್ವೀಪದಂತಾಗುವ ದೇವರಬಾಳುವಿನ ಜನರು, ಶಾಲಾ ಮಕ್ಕಳು ಪಡುತ್ತಿರುವ ಸಂಕಷ್ಟದ ಬಗ್ಗೆ “ಗ್ರಾಮಭಾರತ’ ಸರಣಿಯಲ್ಲಿ ಗಮನಸೆಳೆಯಲಾಗಿತ್ತು.

ಗ್ರಾ.ಪಂ. ಕಚೇರಿಗೆ ಭೇಟಿ, ಸಭೆ
ಹಳ್ಳಿಹೊಳೆ ಗ್ರಾ.ಪಂ. ಕಚೇರಿಗೆ ಭೇಟಿ ನೀಡಿದ ತಂಡವು ಅಧ್ಯಕ್ಷರು, ಉಪಾಧ್ಯ ಕ್ಷರು, ಸದಸ್ಯರು, ಕೆಲವು ಗ್ರಾಮಸ್ಥರೊಂದಿಗೆ ಚರ್ಚಿಸಿತು. ಪಂಚಾಯತ್‌ ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಸಹಿತ ವಿವಿಧ ಬೇಡಿಕೆಗಳನ್ನು ತಂಡಕ್ಕೆ ಸಲ್ಲಿಸಲಾಯಿತು. ಹಳ್ಳಿಹೊಳೆ ಗ್ರಾ.ಪಂ. ಅಧ್ಯಕ್ಷ ಪ್ರದೀಪ್‌ ಕೊಠಾರಿ, ಉಪಾಧ್ಯಕ್ಷ ಮಂಜುನಾಥ್‌ ಶೆಟ್ಟಿ, ಸದಸ್ಯರಾದ ನೇತ್ರಾವತಿ ನಾಯ್ಕ, ಗುಲಾಬಿ, ಪ್ರಭಾಕರ ನಾಯ್ಕ ಉಪಸ್ಥಿತರಿದ್ದರು.

Advertisement

ನೆಟ್‌ವರ್ಕ್‌ ಸಮಸ್ಯೆಗೆ ಮುಕ್ತಿ?
ಗ್ರಾಮಸ್ಥರು ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಸದರ ಸೂಚನೆ ಮೇರೆಗೆ ಜಿಯೋ ಖಾಸಗಿ ಸಂಸ್ಥೆಯ ಪ್ರತಿನಿಧಿಗಳು ಆಗಮಿಸಿ ಪರಿಶೀಲಿಸಿದರು.

ಯಳಬೇರಿನಲ್ಲಿ ರಿಪ್ಲೆಕೇಬಲ್‌ ಅಳವಡಿಸಿದರೆ ಚಕ್ರಾ ಮೈದಾನ, ದೇವರಬಾಳು ಮತ್ತು ಹಳ್ಳಿಹೊಳೆ -ಹೀಗೆ 3 ಕಡೆಗಳಲ್ಲಿ ಟವರ್‌ ನಿರ್ಮಿಸಬಹುದು. ಆದರೆ ಡೀಮ್ಡ್ ಫಾರೆಸ್ಟ್‌ ನಿಯಮ ಅಡ್ಡಿಯಾಗಿದ್ದು, ಇದಕ್ಕೆ ಕಂದಾಯ ಜಾಗ ಗುರುತಿಸಿ ಕೊಡುವುದಾಗಿ ಸಂಸದರು ಭರವಸೆ ನೀಡಿದ್ದಾರೆ.

ತ್ವರಿತ ಭೇಟಿ: ಮೆಚ್ಚುಗೆ
ಉದಯವಾಣಿಯಲ್ಲಿ ಹಳ್ಳಿಹೊಳೆ ಗ್ರಾಮದ ಸಂಕಷ್ಟದ ಕುರಿತಂತೆ ಜನಪ್ರತಿನಿಧಿಗಳ ಗಮನಸೆಳೆಯುವ ವರದಿಗಳನ್ನು ಪ್ರಕಟಿಸಿದ್ದು, ಇದಕ್ಕೆ ಸ್ಪಂದಿಸಿ ಸಂಸದರು ಅಧಿಕಾರಿಗಳನ್ನು ತ್ವರಿತಗತಿಯಲ್ಲಿ ಕಳುಹಿಸಿ ಸ್ಪಂದಿಸಿದ್ದಾರೆ. ಸಂಸದರು ಮತ್ತು ಉದಯವಾಣಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

ನೇರ ಬಸ್‌ ವ್ಯವಸ್ಥೆ
ಹಳ್ಳಿಹೊಳೆ ಗ್ರಾಮಸ್ಥರಿಗೆ ತಾಲೂಕು ಕೇಂದ್ರವಾದ ಬೈಂದೂರಿಗೆ ತೆರಳಲು ಆಗುತ್ತಿರುವ ಸಮಸ್ಯೆಯನ್ನು ಮನಗಂಡು ಸಂಸದರು ಸಿದ್ದಾಪುರದಿಂದ ಜಡ್ಕಲ್‌, ಹಳ್ಳಿಹೊಳೆ ಮಾರ್ಗವಾಗಿ ಬೈಂದೂರಿಗೆ ನೇರ ಬಸ್‌ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು, ಖಾಸಗಿ ಅಥವಾ ಕೆಎಸ್ಸಾರ್ಟಿಸಿ ಬಸ್‌ಗೆ ಕೂಡಲೇ ರೂಟ್‌ ಪರ್ಮಿಟ್‌ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ವಾರದಲ್ಲಿ 2 ದಿನ ಭೇಟಿ
ಹಳ್ಳಿಹೊಳೆ ಗ್ರಾಮದಲ್ಲಿ ಪ್ರಭಾರ ನೆಲೆಯಲ್ಲಿ ಗ್ರಾಮ ಕರಣಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ವಾರದಲ್ಲಿ ಒಂದು ದಿನ ಮಾತ್ರ ಬರುತ್ತಿದ್ದರು. ಅವರು ವಾರದಲ್ಲಿ ಎರಡು ದಿನ ಇಲ್ಲಿರುವಂತೆ ಜಿಲ್ಲಾಧಿಕಾರಿಗೆ ಸೂಚಿಸುವುದಾಗಿ ಸಂಸದರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next