Advertisement
ಹೊಸ ತಾಲೂಕು ರಚನೆಯಾಗಿ ಆರೇಳು ವರ್ಷ ಕಳೆದರೂ ಇನ್ನೂ ಹಳ್ಳಿಹೊಳೆಯಿಂದ ತಾಲೂಕು ಕೇಂದ್ರವಾದ ಬೈಂದೂರಿಗೆ ನೇರ ಬಸ್ ಸಂಪರ್ಕವನ್ನು ಕಲ್ಪಿಸಿಲ್ಲ. ಇಲ್ಲಿನ ಗ್ರಾಮಸ್ಥರು ಅನೇಕ ಬಾರಿ ಈ ಬಗ್ಗೆ ಸಂಬಂಧಪಟ್ಟವರೆಲ್ಲರಿಗೂ ಮನವಿ ಮಾಡಿದರೂ, ಇನ್ನೂ ಬಸ್ ಬೇಡಿಕೆ ಮಾತ್ರ ಈಡೇರಿಲ್ಲ.
ಹಳ್ಳಿಹೊಳೆಯಿಂದ ಬೈಂದೂರಿಗೆ ಹೋಗಬೇಕಾದರೆ ಮುದೂರು- ಜಡ್ಕಲ್- ಹಾಲ್ಕಲ್- ಗೋಳಿಹೊಳೆ ಮೂಲಕವಾಗಿ ಹೋಗಲು 45 ಕಿ.ಮೀ. ಹಾಗೂ ಬರಲು 45 ಕಿ.ಮೀ. ದೂರ ಒಟ್ಟು ಸೇರಿ 90 ಕಿ.ಮೀ. ದೂರವಾಗುತ್ತದೆ. ಆದರೆ ಈಗ ನೇರ ಬಸ್ ವ್ಯವಸ್ಥೆಯಿಲ್ಲದ ಕಾರಣ, 50 ಕಿ.ಮೀ. ದೂರದ ಕುಂದಾಪುರಕ್ಕೆ ಬಂದು, ಅಲ್ಲಿಂದ 40 ಕಿ.ಮೀ. ಸೇರಿ 90 ಕಿ.ಮೀ. ಹೋಗಲು, ಮತ್ತೆ 90 ಕಿ.ಮೀ. ವಾಪಾಸು ಬರಲು ಒಟ್ಟು 180 ಕಿ.ಮೀ. ಸಂಚರಿಸಬೇಕಾಗಿದೆ. ನೇರ ಬಸ್‌ನ ಸಂಚಾರ ಇಲ್ಲದೇ ಇರುವುದರಿಂದ ಇಲ್ಲಿನ ಗ್ರಾಮಸ್ಥರು ಹೆಚ್ಚುವರಿಯಾಗಿ 80-90 ಕಿ.ಮೀ. ಸಂಚರಿಸಬೇಕಾದ ಅನಿವಾರ್ಯತೆಯಿದೆ.
Related Articles
ಹಳ್ಳಿಹೊಳೆ ಗ್ರಾಮಸ್ಥರು ಪಡಿತರ ಚೀಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಬದಲಾವಣೆಗಳಿಗೆ ಬೈಂದೂರಿನ ಆಹಾರ ಇಲಾಖೆಗೆ ಹೋಗಬೇಕು. ಅದು ಒಂದು ಸಲ ಹೋಗಿ ಬಂದರೆ ಸಾಕಾಗುವುದಿಲ್ಲ. ಕೆಲವೊಮ್ಮೆ 2-3 ಸಲವೂ ಹೋಗಿ ಬರಬೇಕಾದ ಪರಿಸ್ಥಿತಿ ಇರುತ್ತದೆ. ಇನ್ನು ತಾಲೂಕು ಕಚೇರಿ ಕೆಲಸಕ್ಕೂ ಅಲ್ಲಿಗೆ ಹೋಗಬೇಕು. ಕೋರ್ಟ್ ವಿಚಾರಕ್ಕೂ ಈಗ ಬೈಂದೂರಿಗೆ ಹೋಗಬೇಕಾಗಿದೆ. ಆರ್.ಟಿ.ಸಿ. ಸರ್ವೇ, ಖಾತಾ ಬದಲಾವಣೆ ಸೇರಿದಂತೆ ಎಲ್ಲದಕ್ಕೂ ತಾಲೂಕು ಕೇಂದ್ರಕ್ಕೆ ಬರಬೇಕಿದೆ. ಅಷ್ಟು ದೂರ ಹೋಗಿ ಬರಲು ಹೆಚ್ಚಿನ ಬಸ್ ಸೌಲಭ್ಯವಾದರೂ ಇದ್ದರೆ ತೊಂದರೆಯಿಲ್ಲ, ಆದರೆ ನೇರ ಬಸ್ ಸಂಚಾರವಿಲ್ಲ. ಕುಂದಾಪುರಕ್ಕೆ ಆದರೆ ಕೆಲವಾದರೂ ಬಸ್‌ಗಳು ನಿತ್ಯ ಸಂಚರಿಸುತ್ತವೆ.
Advertisement
ಕೆಎಸ್‌ಆರ್‌ಟಿಸಿ ಬಸ್ ಆರಂಭಿಸಿಹಳ್ಳಿಹೊಳೆಯಿಂದ ಮುದೂರು- ಜಡ್ಕಲ್- ಹಾಲ್ಕಲ್ ಮೂಲಕ ಬೈಂದೂರಿಗೆ ಹತ್ತಿರವಿದೆ. ಆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಆರಂಭಿಸಿದರೆ ಒಟ್ಟಾರೆ 90 ಕಿ.ಮೀ. ಅಷ್ಟೇ ದೂರವಿರುವುದು. ಹೊಸದಾಗಿ 14 ರೂಟ್‌ಗಳಲ್ಲಿ ಪರ್ಮಿಟ್ ನೀಡಿದ್ದು, ಅದರಲ್ಲಿ ನಮ್ಮ ಹಳ್ಳಿಹೊಳೆ ಗ್ರಾಮದ ಹೆಸರೇ ಇರಲಿಲ್ಲ, ಅತೀ ಅಗತ್ಯ ಬೇಕಾಗಿರುವುದು ಇಲ್ಲಿಗೆ. ಆದಷ್ಟು ಬೇಗ ಬೈಂದೂರಿಗೆ ನೇರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಗೊಳ್ಳಲಿ.
– ಪ್ರದೀಪ್ ಕೊಠಾರಿ, ಮಾಜಿ ಅಧ್ಯಕ್ಷರು, ಹಳ್ಳಿಹೊಳೆ ಗ್ರಾ.ಪಂ. ಮನವಿ ಬಂದಿದ್ದು, ಪ್ರಕ್ರಿಯೆಯಲ್ಲಿದೆ
ಹಳ್ಳಿಹೊಳೆಯಿಂದ ಬೈಂದೂರಿಗೆ ನೇರ ಬಸ್ ಸಂಪರ್ಕಿಸುವ ಬೇಡಿಕೆ ಬಗ್ಗೆ ಗಮನದಲ್ಲಿದ್ದು, ಈ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ. ಆರ್‌ಟಿಒ ಅವರ ಗಮನಕ್ಕೂ ತರಲಾಗಿದೆ. ಹೊಸದಾಗಿ ಬಸ್ ಆರಂಭಿಸುವ ಕುರಿತ ಪ್ರಕ್ರಿಯೆ ನಡೆಯುತ್ತಿದೆ.
– ಉದಯ ಕುಮಾರ್ ಶೆಟ್ಟಿ, ಕುಂದಾಪುರ ಡಿಪ್ಪೋ ಮ್ಯಾನೇಜರ್ – ಪ್ರಶಾಂತ್ ಪಾದೆ