Advertisement
ಈ ಸಂಬಂಧ ಕಲ್ಸಂಕ, ಇರಿಗೆ, ವಾಟೆಬಚ್ಚಲು ಮತ್ತಿತರ ಪ್ರದೇಶಗಳ ಗ್ರಾಮಸ್ಥರು ರವಿವಾರ ಸಂಜೆ ಇರಿಗೆ ಶಾಲೆಯ ಆವರಣದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ 35ರಿಂದ 40ಕ್ಕೂ ಹೆಚ್ಚು ಮನೆಗಳ ಜನರು ಸೇರಿದ್ದು, ನೆಟ್‌ವರ್ಕ್, ರಸ್ತೆ, ಸೇತುವೆ ಮತ್ತಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಪ್ರತೀ ಮನೆಯವರು “ನಮ್ಮ ಬೇಡಿಕೆ ಈಡೇರಿಸದಿದ್ದಕ್ಕೆ ಮತದಾನ ಬಹಿಷ್ಕರಿಸುತ್ತೇವೆ’ ಎನ್ನುವ ಫಲಕವನ್ನು ಮನೆ ಮುಂದೆ ಹಾಕಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ.
ಹಳ್ಳಿಹೊಳೆ ಗ್ರಾಮದ ಹಳ್ಳಿಹೊಳೆ ಗ್ರಾಮದ ಹತ್ತು ಹಲವು ಸಮಸ್ಯೆಗಳ ಬಗ್ಗೆ “ಉದಯವಾಣಿ’ ಪತ್ರಿಕೆಯು “ಇಳಿದಷ್ಟೂ ಸಮಸ್ಯೆ ಆಳ’ ಮತ್ತು “ಸಾಗರದಷ್ಟು ಸಮಸ್ಯೆಗಳಿಗೆ ಸಾಸಿವೆಯಷ್ಟೇ ಪರಿಹಾರ !’ ಶೀರ್ಷಿಕೆಯಡಿ ಜು. 2ರಂದು “ಗ್ರಾಮ ಭಾರತ’ ಸರಣಿಯಲ್ಲಿ ಸಮಗ್ರ ವರದಿಯನ್ನು ಪ್ರಕಟಿಸಿ ಗಮನ ಸೆಳೆದಿತ್ತು. ಈ ವರದಿಗೆ ಸ್ಪಂದಿಸಿ ಹಳ್ಳಿಹೊಳೆ ಗ್ರಾಮಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಕಚೇರಿ ತಂಡ, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದರು. ಸಂಸದರು ಸೇತುವೆ, ನೆಟ್‌ವರ್ಕ್ ಒದಗಿವ ಸಂಬಂಧ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದ್ದರು. ಜತೆಗೆ ಜಿಯೋ ಖಾಸಗಿ ಮೊಬೈಲ್ ಸಂಸ್ಥೆಯವರನ್ನು ಹಳ್ಳಿಹೊಳೆಗೆ ಕಳುಹಿಸಿ ಅಧ್ಯಯನ ನಡೆಸಿ, ಟವರ್ ಮಾಡಿಕೊಡುವ ಬಗ್ಗೆ ಪರಿಶೀಲಿಸಲು ಸೂಚಿಸಿದ್ದರು. ಆದರೆ ಕೆಲವು ದಿನಗಳಿಂದ ಜಿಯೋ ಸಂಸ್ಥೆಯವರು ಇಲ್ಲಿ ನೆಟ್‌ವರ್ಕ್ ಸೇವೆ ನೀಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದ್ದು, ಅದಕ್ಕಾಗಿ ಗ್ರಾಮಸ್ಥರೆಲ್ಲ ಒಟ್ಟಾಗಿ ಸಭೆ ನಡೆಸಿ, ಈ ತೀರ್ಮಾನಕ್ಕೆ ಬಂದಿದ್ದಾರೆ.