ಇದು ಗ್ರಾಮ ಭಾರತ. ಉದಯವಾಣಿಯ ಹೊಸ ಸರಣಿ. ಉಭಯ ಜಿಲ್ಲೆಗಳಲ್ಲಿರುವ ಹಲವು ಗ್ರಾಮಗಳು ಇನ್ನೂ ಕುಗ್ರಾಮ ಪಟ್ಟಿಯಿಂದ ಹೊರಗೆ ಬಂದಿಲ್ಲ. ಮೇಲ್ನೋಟಕ್ಕೆ ಸೌಲಭ್ಯ ಸಿಕ್ಕಿದೆ ಎನಿಸಿದರೂ ಆಳಕ್ಕಿಳಿದು ನೋಡಿದರೆ ಹಲವಾರು ಸಮಸ್ಯೆಗಳು ದಿನೇದಿನೆ ಬೆಳೆಯುತ್ತಿವೆ. ಹಿಂದೆ ಕುಂದಾಪುರ ತಾಲೂಕಿನಲ್ಲಿದ್ದು ಈಗ ಹೊಸ ತಾಲೂಕು ಬೈಂದೂರಿಗೆ ಸೇರಿರುವ ಹಳ್ಳಿಹೊಳೆ ಮತ್ತು ಅದರ ಸುತ್ತಲಿನ ಗ್ರಾಮಗಳದ್ದು ಇದೇ ಸ್ಥಿತಿ. ಜನಪ್ರತಿನಿಧಿಗಳು ಅಭಿವೃದ್ಧಿ ಮಾಡಿಲ್ಲವೇ ಎಂದರೆ ಇಲ್ಲ ಎನ್ನುವಂತಿಲ್ಲ, ಹೊಟ್ಟೆ ತುಂಬಿದೆಯೇ ಎಂದು ಕೇಳಿದರೆ ಹೌದು ಎನ್ನುವಂತಿಲ್ಲ. ಇದರಿಂದ ಸಂಕಷ್ಟಕ್ಕೆ ಗುರಿಯಾಗಿರುವುದು ಗ್ರಾಮಸ್ಥರು. ಇದರ ಕುರಿತೇ ಸವಿವರವಾದ ವರದಿ ನಮ್ಮ ಗ್ರಾಮ ಭಾರತ ಸರಣಿ ತಂಡದಿಂದ.
ಹಳ್ಳಿಹೊಳೆ: ಇಳಿದಷ್ಟೂ ಸಮಸ್ಯೆ ಆಳ:
ಹಳ್ಳಿಹೊಳೆ: ಉಡುಪಿ ಜಿಲ್ಲೆಯ ಅತ್ಯಂತ ಕುಗ್ರಾಮಗಳಲ್ಲಿ ಒಂದಾದ, ಅಭಿವೃದ್ಧಿಯ ಬೆಳಕಿಗೆ ಕಾಯುತ್ತಿರುವ ಹಳ್ಳಿಹೊಳೆ ನಮ್ಮ “ಗ್ರಾಮ ಭಾರತ’ದ ಪ್ರಮುಖ ಅಧ್ಯಾಯಗಳಿಗೆ ಸೇರುವಂಥದು.
ಅಂದಿಗೆ ಹೋಲಿಸಿದರೆ ಇಂದು ಪರವಾಗಿಲ್ಲ ಎನ್ನಬಹುದಾದರೂ ಇವುಗಳ ಸುತ್ತಲಿನ ಗ್ರಾಮ ಗಳೊಂದಿಗೆ ತಾಳೆ ಹಾಕಿದರೆ ಅಭಿವೃದ್ಧಿಯ ಬೆಳಕು ಈ ಹಳ್ಳಿಹೊಳೆ ಮತ್ತು ಸುತ್ತಲಿನ ಗ್ರಾಮಗಳಿಗೆ ಇನ್ನೂ ಸಾಕಷ್ಟು ಹರಿಯಬೇಕಿದೆ. ಒಳ್ಳೆಯ ರಸ್ತೆ, ನೆಟ್ ವರ್ಕ್, ಸೇತುವೆ ಎಂಬಿತ್ಯಾದಿ ಸೌಕರ್ಯ ಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ಪ್ರಕ್ರಿಯೆ ಇನ್ನೂ ಮುಂದುವರಿದೇ ಇದೆ.
“ಉದಯವಾಣಿ’ಯ “ಗ್ರಾಮ ಭಾರತ’ ಸರಣಿಯ ತಂಡ ಈ ಗ್ರಾಮದ ನೈಜ ಸಮಸ್ಯೆಗಳನ್ನು ಅರಿಯಲು ಭೇಟಿ ಕೊಟ್ಟಿತು. ಹಲವು ಗ್ರಾಮಸ್ಥ ರೊಂದಿಗೆ ಚರ್ಚಿಸಿ, ಸಮಸ್ಯೆಗಳನ್ನು ತಿಳಿದು, ಅವರ ನಿರೀಕ್ಷೆ ಮತ್ತು ಅಗತ್ಯಗಳನ್ನು ಪಟ್ಟಿ ಮಾಡಿ ಇಲ್ಲಿ ನೀಡಲಾಗಿದೆ. ಸಂಸದರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರಕಾರ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕಿದೆ.
ಒಂದು ಕಾಲದಲ್ಲಿ ನಕ್ಸಲರ ಹಾವಳಿ, ಪೊಲೀಸರ ಗುಂಡಿನ ದಾಳಿಯಿಂದ ನಲುಗಿ ಹೋಗಿದ್ದ ಈ ಊರಿನಲ್ಲಿ ಸುಧಾರಣೆಯ ಗಾಳಿ ಬೀಸಿದೆಯಾದರೂ ನಿರೀಕ್ಷಿಸಿದಷ್ಟು ಇಲ್ಲ. ಈಗ ನಕ್ಸಲರ ಬೂಟುಗಳ ಶಬ್ದವೂ ಕೇಳುತ್ತಿಲ್ಲ, ನಕ್ಸಲ್ ನಿಗ್ರಹ ಪಡೆಯ ಬೂಟುಗಳ ಸದ್ದುಗಳೂ ಕ್ಷೀಣಿಸಿವೆ. ಆದರೆ ಈ ಗ್ರಾಮಗಳ ಜನರ ಬೇಡಿಕೆಗಳ ಕೂಗು ಇನ್ನೂ ಗಿರಿಯ ಮೇಲಿನ ದೊರೆಗಳಿಗೆ ತಲುಪಿಲ್ಲ.
ಚುನಾವಣೆಗೆ ಮುನ್ನ ಒಂದಿಷ್ಟು ಜನ ಬರುತ್ತಾರೆ, ಕಾರುಗಳು ಬರುತ್ತವೆ, ಎಲ್ಲರೂ ಕೈ ಮುಗಿಯುತ್ತಾರೆ, ಜನರು ಬೇಡಿಕೆಯ ಪಟ್ಟಿ ಮಂಡಿಸಿದರೆ ಭರವಸೆ ನೀಡಲಾಗುತ್ತದೆ, ತೀರಾ ಅಗತ್ಯವಿದ್ದಲ್ಲಿ ಆಣೆ ಪ್ರಮಾಣಗಳನ್ನೂ ಮಾಡ ಲಾಗುತ್ತದೆ. ಜನರು ಚುನಾವಣೆಯ ದಿನ ಮತ ಗಟ್ಟೆಗಳಿಗೆ ತೆರಳಿ ಓಟು ಹಾಕಿ ಮನೆಗೆ ವಾಪ ಸಾಗುತ್ತಾರೆ. ವಿಜಯೋತ್ಸವದ ಸುದ್ದಿ ಮರುದಿನ ಸಿಗುತ್ತದೆ. ಮತ್ತೆ ಅವರು, ಆ ಕಾರುಗಳು ಬರು ವುದು ಮತ್ತೂಂದು ಚುನಾವಣೆಗೆ ಎನ್ನುವ ಅಭಿ
ಪ್ರಾಯ ಜನರದ್ದು. ನಕ್ಸಲ್ ಬಾಧಿತ ಪ್ರದೇಶ ವೆಂದು ಹಣೆಪಟ್ಟಿ ಹೊತ್ತು, ನಕ್ಸಲ್ ಪ್ಯಾಕೇಜ್ ಅಡಿ ಒಂದಷ್ಟು ಅನುದಾನ ಬಂದರೂ ಈಗಲೂ ಇಲ್ಲಿನ ಜನ ಸಮಸ್ಯೆ ಅನುಭವಿಸುತ್ತಲೇ ಇದ್ದಾರೆ.
ಹಳ್ಳಿಹೊಳೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಿಂದೆ ಹಳ್ಳಿಹೊಳೆ ಮತ್ತು ಕಮಲಶಿಲೆ ಎರಡು ಗ್ರಾಮಗಳಿದ್ದವು. ಈಗ ಹಳ್ಳಿಹೊಳೆ ಗ್ರಾಮ ಬೈಂದೂರಿಗೆ, ಕಮಲಶಿಲೆ ಕುಂದಾಪುರ ತಾಲೂ ಕಿಗೆ ಸೇರಿದ ಅನಂತರ ಹಳ್ಳಿಹೊಳೆ ಗ್ರಾಮ ವೊಂದೇ ಈ ಪಂಚಾಯತ್ ವ್ಯಾಪ್ತಿಯಲ್ಲಿದೆ. ಕಮಲಶಿಲೆ ಆಜ್ರಿ ಗ್ರಾ.ಪಂ.ಗೆ ಸೇರಿದೆ. ಈ ಗ್ರಾಮದಲ್ಲಿ ಪ್ರಸ್ತುತ 2,885 ಜನರಿದ್ದು, 638 ಮನೆಗಳಿವೆ. ಇವರ ಸಮಸ್ಯೆ ಬೇರೆಯದೇ ಆಗಿದೆ.
ಹಳ್ಳಿಹೊಳೆ: ಈ ಊರಿನಲ್ಲಿ ಪ್ರತೀ ಮಳೆಗಾಲ ಬಂದಿತೆಂದರೆ ಅಘೋಷಿತ ಲಾಕ್ ಡೌನ್ ! ಇಲ್ಲಿನ ಹೊಳೆ ದಾಟಿದರೆ ಆಚೆಗೊಂದು ಊರು. ನೋಡಿದರೆ ನಡೆದು ಹೋಗಬಹುದಾದ ಹೊಳೆ. ಆದರೆ, ಮಳೆಗಾಲದಲ್ಲಿ ಊರು ಇಬ್ಭಾಗವಾಗಿ ಬಿಡುತ್ತದೆ. ಆಚೆ ಇರುವವರು ಆಚೆ, ಈಚೆ ಇರುವವರು ಈಚೆಯೇ. ನೆರೆ ಇಳಿಯುವವರೆಗೂ ಕಾಯಬೇಕು. ಕೆಲವೊಮ್ಮೆ ಗಂಟೆಗಟ್ಟಲೆ, ಇನ್ನೂ ಕೆಲವೊಮ್ಮೆ ದಿನಗಳೂ ಸಹ. ಸುಮಾರು 76 ಕುಟುಂಬಗಳು ಪ್ರತೀ ಮಳೆಗಾಲದಲ್ಲೂ ಈ ಸಂಕಷ್ಟ ಅನುಭವಿಸಬೇಕು.
ವಾಹನ ಸಂಚಾರ ಸಾಧ್ಯವಿಲ್ಲ. ಜನರು ಬರಬೇಕೆಂ ದರೂ ಅಡಿಕೆ ಮರ ಕಡಿದು ನಿರ್ಮಿಸಿದ ಕಾಲುಸಂಕವೇ ಆಸರೆ. ಆಗಲೂ ನೆರೆ ಪ್ರಮಾಣ ಹೆಚ್ಚಿದ್ದರೆ ಸುಮ್ಮನೆ ಕೈ ಕಟ್ಟಿಕೊಂಡೇ ಕುಳಿತುಕೊಳ್ಳಬೇಕು.
ಇದು ಹಳ್ಳಿಹೊಳೆ ಗ್ರಾಮದ ದೇವರಬಾಳು, ಕಟ್ಟಿನಾಡಿ, ರಾಮನಹಕ್ಲು, ಕಬ್ಬಿನಾಲೆ ಭಾಗದ ಜನರ ಪ್ರತೀ ಮಳೆ ಗಾಲದ ಬದುಕು. ಇಲ್ಲಿ ಎರಡು ಪ್ರತ್ಯೇಕ ಸೇತುವೆ ನಿರ್ಮಾಣವಾದರೆ ಇವರೆಲ್ಲರ ಸಂಕಷ್ಟ ಬಗೆಹರಿಯಲಿದೆ.
ಚುನಾವಣೆ ಸಮಯದಲ್ಲಿ ಮತ ಕೇಳಲು ಬಂದವರೆಲ್ಲ ಈ ವರ್ಷ ಸೇತುವೆ ಖಚಿತ ಎನ್ನುತ್ತಾರೆ. ಸೇತುವೆ ಮಾಡಿಕೊಡುವುದಾಗಿ ಕಮಲಶಿಲೆ ದೇವರ ಮೇಲೆ, ಗಣಪತಿ ಮೇಲೆ ಆಣೆ ಮಾಡಿ ಹೋಗುತ್ತಾರೆ. ಗೆದ್ದ ಮೇಲೆ ಈಚೆ ಬರುವುದೇ ಇಲ್ಲ ಎನ್ನುತ್ತಾರೆ ಕಟ್ಟಿನಾಡಿಯಲ್ಲಿ 27 ವರ್ಷಗಳಿಂದ ನೆಲೆಸಿರುವ ಶಂಕರ ನಾಯ್ಕ.
ಶಾಲೆಗೇ ರಜೆ:
ಈಗ ಶಾಲೆ ಇಲ್ಲ ಬಿಡಿ. ಶಾಲೆ ಶುರುವಾದರೆ ಮಕ್ಕಳ ಕಷ್ಟ ಕೇಳುವಂತಿಲ್ಲ. 15 ಮಕ್ಕಳು ಇಲ್ಲಿಂದ ಶಾಲೆಗೆ ಹೋಗುತ್ತಾರೆ. ಜಾಸ್ತಿ ಮಳೆ ಬಂದರೆ 2-3 ದಿನ ಶಾಲೆಗೆ ಮಕ್ಕಳೇ ರಜೆ ಘೋಷಿಸುತ್ತಾರೆ. ಹೀಗೆ ಇಡೀ ಮಳೆಗಾಲದಲ್ಲಿ ಕನಿಷ್ಠ 5 ಬಾರಿಯಾದರೂ ಆಗುತ್ತದೆ. ಅಂದರೆ 15 ದಿನ ರಜೆ.
ಇದಲ್ಲದೇ ಬೇರೆ ಸಮಸ್ಯೆಗಳೂ ಇವೆ. ಯಾರಿಗಾದರೂ ಹುಷಾರಿರದಿದ್ದರೆ ಹೊತ್ತುಕೊಂಡೇ ಹೋಗಬೇಕು. ಬೇರೆ ವಿಧಿಯೇ ಇಲ್ಲ. ಸೇತುವೆ ಮಾಡಿಕೊಟ್ಟರೆ ಸಾಕು. ಇನ್ನಷ್ಟು ವರ್ಷ ಮಣ್ಣಿನ ರಸ್ತೆಯಲ್ಲೇ ಜೀವನ ಕಳೆಯುತ್ತೇವೆ, ಪರ ವಾಗಿಲ್ಲ. ಆದರೆ ಸೇತುವೆ ಮಾಡಿಕೊಡಿ. ಚಕ್ರಾ ನದಿಯನ್ನು ಕೂಡುವ ಈ ಕಬ್‌ಹಿತ್ಲು ಹೊಳೆ ದಾಟುವುದೇ ಮಳೆಗಾಲ ದಲ್ಲಿ ದೊಡ್ಡ ಸಂಕಷ್ಟ ಎನ್ನುತ್ತಾರೆ ಶಂಕರ್ ನಾಯ್ಕ.
ಕಟ್ಟಿನಾಡಿ ಊರಿಗೆ ಸೇರಬೇಕಾದರೆ ಕಬ್‌ಹಿತ್ಲು ಹೊಳೆ ದಾಟಿ ಹೋಗಬೇಕು. ಹಳ್ಳಿಗಾಡಿನ ಪ್ರದೇಶವಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಹಾಗಾಗಿ ಹೆಚ್ಚಿನ ಮನೆಯವರು ಸ್ವಂತ ವಾಹನ ಹೊಂದಿದ್ದಾರೆ. ಆದರೆ ಮಳೆಗಾಲದಲ್ಲಿ ಮನೆಯೊಂದು ತೀರದಲ್ಲಿದ್ದರೆ, ವಾಹನ ನಿಲ್ಲಿಸುವ ಶೆಡ್ ಇನ್ನೊಂದು ತೀರದಲ್ಲಿರುತ್ತದೆ. ಕೆಲವರಂತೂ ಮಳೆಗಾಲದಲ್ಲಿ ವಾಹನವನ್ನು ತೆಗೆಯುವುದೇ ಇಲ್ಲ.
ದೇವರಬಾಳು, ಕಟ್ಟಿನಾಡಿ, ಕಬ್ಬಿನಾಲೆ, ರಾಮನಹಕ್ಲು ಪರಿ ಸರದಲ್ಲಿ ಒಟ್ಟು 76 ಕುಟುಂಬಗಳು ನೆಲೆಸಿದ್ದು, ಇವರಲ್ಲಿ ಈವರೆಗೆ ಹಕ್ಕುಪತ್ರ ಸಿಕ್ಕಿರುವುದು 9 ಕುಟುಂಬಗಳಿಗೆ ಮಾತ್ರ. ಜಿಲ್ಲಾ ಗಡಿ ಸಮಸ್ಯೆ ಹಾಗೂ ಮೀಸಲು ಅರಣ್ಯ ಕಾಯ್ದೆಯಿಂದಾಗಿ ಬಾಕಿ ಉಳಿದ ಕುಟುಂಬಗಳಿಗೆ ಹಕ್ಕುಪತ್ರ ಸಿಗುತ್ತಿಲ್ಲ. ಜಾಗದ ಹಕ್ಕುಪತ್ರ ಸಿಗಲು ವಿಳಂಬವಾಗುತ್ತಿರುವುದರಿಂದ ಇಲ್ಲಿನ ಜನರಿಗೆ ಸರಕಾರದಿಂದ ಯಾವ ಸೌಲಭ್ಯಗಳು ಸಿಗುತ್ತಿಲ್ಲ ಎನ್ನುವುದು ಊರವರ ಅಳಲು.
ಮಳೆಗಾಲದಲ್ಲಿ ದ್ವೀಪ :
ಕಟ್ಟಿನಾಟಿ, ರಾಮನಹಕ್ಲು ಭಾಗದಲ್ಲಿ 30 ಕುಟುಂಬಗಳು ನೆಲೆಸಿದ್ದು, ಮಳೆಗಾಲದಲ್ಲಿ ಈ ಊರು ಅಕ್ಷರಶಃ ದ್ವೀಪವಾಗುತ್ತದೆ. ಕಾರಣ ಕಬ್‌ಹಿತ್ಲು ಹೊಳೆಯಾಚೆ ಈ ಮನೆಗಳಿದ್ದು, ಸೇತುವೆ ಇಲ್ಲದೇ ಕಾಲುಸಂಕವನ್ನೇ ಆಶ್ರ ಯಿಸಬೇಕು. ಪೇಟೆಯಿಂದ ಅಗತ್ಯದ ಸಾಮಗ್ರಿ, ಪಡಿತರ, ಕೃಷಿ ಸಲಕರಣೆ ತರಲೂ ಹರಸಾಹಸ ಪಡಬೇಕಿದೆ. ಹಾಗಾಗಿ ಕಟ್ಟಿನಾಡಿ ಶಂಕರ ನಾಯ್ಕ ಅವರ ಮನೆಯ ಬಳಿ ಸೇತುವೆಯೊಂದಿಗೆ ಇನ್ನೊಂದು ಇದೇ ಕಬ್ ಹಿತ್ಲು ಹೊಳೆಗೆ ಕಟ್ಟಿನಾಡಿ-ಕಬ್ಬಿನಾಲೆ ಸಮೀಪ ಬಾಬು ಕುಲಾಲ್, ನಾರಾಯಣ ಅವರ ಮನೆ ಕಡೆಗೆ ಸಂಪರ್ಕಿಸಲೂ ಒಂದು ಸೇತುವೆ ಆಗಬೇಕಿದೆ. ಇವೆರಡೂ ಈಡೇರಿದರೆ ಈ ಕುಟುಂಬಗಳ ಸಮಸ್ಯೆ ಬಗೆಹರಿಯಲಿದೆ.
ಈ ಗ್ರಾಮದ ರಸ್ತೆಗಳು ದೇವರಿಗೆ ಪ್ರೀತಿ :
ಹಳ್ಳಿಹೊಳೆ: ಈ ಊರಿನವರಿಗೆ ಹತ್ತಿರದ ದಾರಿಯೆಲ್ಲ ದೂರ ಎನಿಸಿರುವುದು ಏಕೆ ಗೊತ್ತೇ? ಬಹಳ ಸರಳ-ನೇರ-ದಿಟ್ಟ ಉತ್ತರವೆಂದರೆ “ರಸ್ತೆಯ ಅವ್ಯವಸ್ಥೆ’. ಇಲ್ಲಿನವರಿಗೆ ಎರಡು ಆಯ್ಕೆ. ಇಂಧನ ಕಳೆದು ಕೊಳ್ಳಬೇಕೆಂದರೆ ಚೆನ್ನಾಗಿರುವ ರಸ್ತೆಯಲ್ಲಿ ಸುತ್ತು ಬಳಸಿ ಹೋಗಬೇಕು. ಸ್ವಲ್ಪ ಸಮಯ ಉಳಿದೀತು. ಇಂಧನ ವ್ಯಯಿಸಿಕೊಂಡೂ, ವಾಹನದ ಆಯುಷ್ಯ ಮತ್ತು ಸಮಯವನ್ನೂ ಕಳೆದುಕೊಳ್ಳುವುದಾದರೆ ಈ ಕಲ್ಲು ಮುಳ್ಳಿನ ಹಾದಿಯಲ್ಲೇ ಸಾಗಬೇಕು.
ಹಳ್ಳಿಹೊಳೆಯ ಪ್ರತೀ ರಸ್ತೆಯದ್ದೂ ಭಿನ್ನ ಸಮಸ್ಯೆ. ಕಮಲಶಿಲೆಯಿಂದ – ಹಳ್ಳಿಹೊಳೆಗೆ ಸಂಪರ್ಕಿಸುವ ಮುಖ್ಯ ರಸ್ತೆಗೆ ತಿರುವುಗಳದ್ದೇ ಸಮಸ್ಯೆ. ಶೆಟ್ಟಿ ಪಾಲು – ವಾಟೆಬಚ್ಚಲು ರಸ್ತೆ ಡಾಮರು ಕಾಣದೇ ಹಾಳಾ ಗಿದೆ. ದೇವರಬಾಳು, ಕಬ್ಬಿನಾಲೆ ಭಾಗದ ರಸ್ತೆಯಲ್ಲಿ ಸಂಚರಿಸುವುದೇ ದೊಡ್ಡ ಸಾಹಸ.
ಐದು ಅಪಾಯಕಾರಿ ತಿರುವು:
ಸಿದ್ದಾಪುರದಿಂದ ಕಮಲಶಿಲೆಯಾಗಿ ಹಳ್ಳಿಹೊಳೆ, ಜಡ್ಕಲ್ ಮಾರ್ಗವಾಗಿ ಕೊಲ್ಲೂರಿಗೆ ಸಂಪರ್ಕಿಸುವ ಮುಖ್ಯ ರಸ್ತೆಯ 6 ಕಿ.ಮೀ. ಅಂತರದಲ್ಲಿ 5ಕ್ಕೂ ಹೆಚ್ಚು ಅಪಾಯಕಾರಿ ತಿರುವುಗಳಿವೆ. ಇಲ್ಲಿ ಅಪಘಾತ ಸಾಮಾನ್ಯ. ರಸ್ತೆ ಅಗಲಗೊಳಿಸಲು ಅನುದಾನ ಮಂಜೂರಾಗಿದೆ. ಆದರೆ ಡೀಮ್ಡ್ ಫಾರೆಸ್ಟ್ ನಿಯಮದ ಕಾರಣ ರಸ್ತೆ ಅಭಿವೃದ್ಧಿ ಸಾಧ್ಯ ವಾಗಿಲ್ಲ. ಇದನ್ನು ಬಗೆಹರಿಸಲೂ ಜನಪ್ರತಿನಿಧಿಗಳು ಪ್ರಯತ್ನಿಸಬೇಕು. ಕಿರಿದಾದ ರಸ್ತೆಯಾಗಿದ್ದು, ಬಸ್ ಮತ್ತಿತರ ಘನ ವಾಹನಗಳು ಬಂದಲ್ಲಿ ಇತರ ವಾಹನಗಳು ರಸ್ತೆಯಿಂದ ಕೆಳಗಿಳಿಯಬೇಕು. ರಸ್ತೆಯ ಅಂಚುಗಳು ಮಳೆಗೆ ಹಾನಿಯಾಗಿದ್ದು, ರಸ್ತೆಯಿಂದ ಕೆಳಗೆ ವಾಹನವನ್ನು ಇಳಿಸುವುದೂ ಅಪಾಯ. ಕಮಲಶಿಲೆಯಿಂದ ಹಳ್ಳಿಹೊಳೆ ಮೂಲಕ ಕೊಲ್ಲೂರಿಗೆ 35 ಕಿ.ಮೀ. ಅಂತರವಿದ್ದರೆ, ಕಮಲಶಿಲೆಯಿಂದ ಆಜ್ರಿ, ನೇರಳಕಟ್ಟೆ, ನೆಂಪು ಮೂಲಕ ಕೊಲ್ಲೂರಿಗೆ 47 ಕಿ.ಮೀ. ದೂರ. ಹಾಗಾಗಿ 12 ಕಿ.ಮೀ. ಕಡಿಮೆಯಾಗುವ ಹಳ್ಳಿಹೊಳೆ ರಸ್ತೆಯನ್ನು ಕೂಡಲೇ ಅಭಿವೃದ್ಧಿ ಪಡಿಸಬೇಕು.
2 ಕಿ.ಮೀ. ಗಳ ಕಥೆ:
ಇನ್ನು ಹಳ್ಳಿಹೊಳೆ ಪಂಚಾಯತ್ ಬಳಿಯಿಂದ ವಾಟೆ ಬಚ್ಚಲು, ಕೆರಾಡಿಗೆ ಸಂಪರ್ಕ ಕಲ್ಪಿಸುವ ಅಕ್ಕಿ ಕೊಡ್ಲು – ವಾಟೆಬಚ್ಚಲು ರಸ್ತೆಯ ಬಹಳಷ್ಟು ಕಡೆ ಡಾಮರೇ ಇಲ್ಲ. ಸುಮಾರು 150 ಕ್ಕೂ ಹೆಚ್ಚು ಮನೆಯವರು ಈ ಸಮಸ್ಯೆ ಅನುಭವಿಸುತ್ತಲೇ ಇದ್ದಾರೆ. ಈ ರಸ್ತೆ ಒಟ್ಟು 5 ಕಿ.ಮೀ. ಇದ್ದರೆ, ಒಂದು ಕಡೆ 1.5 ಕಿ.ಮೀ. ರಸ್ತೆಗೆ ಡಾಮರೇ ಹಾಕಿಲ್ಲ. ಇನ್ನೊಂದು ಕಡೆ 600 ಮೀ.ವರೆಗೆ ಡಾಮರು ಹಾಕಿಲ್ಲ. ಇದರಿಂದ ಒಟ್ಟು 2 ಕಿ.ಮೀ. ರಸ್ತೆ ಅಭಿವೃದ್ಧಿಯಾಗಿಲ್ಲ. ಕಾರಣ ಕೇಳಿದರೆ ಡೀಮ್ಡ್ ಫಾರೆಸ್ಟ್ ಅನ್ನುತ್ತಾರೆ. ಆದರೆ ಘಾಟಿಗಳಲ್ಲಿ ಇಲ್ಲದ ಅರಣ್ಯ ಕಾಯ್ದೆ ಈ ಗ್ರಾಮೀಣ ರಸ್ತೆಗಳಿಗೆ ಮಾತ್ರ ಯಾಕೆ ಎನ್ನುವುದು ಊರಿನ ಅಮರ್ ಛಾತ್ರ ಅವರ ಪ್ರಶ್ನೆ. ವಾಟೆಬಚ್ಚಲು ಭಾಗದವರಿಗೆ ಕಮಲಶಿಲೆ, ಸಿದ್ದಾಪುರಕ್ಕೆ ಸಂಚರಿಸಲು ಇರುವ ಪ್ರಮುಖ ರಸ್ತೆಯೇ ಇದು. ಹಳ್ಳಿಹೊಳೆಯಿಂದ ಕೆರಾಡಿಗೆ 10 ಕಿ.ಮೀ. ದೂರವಿದೆ. ಈ ಭಾಗದ ಜನರಿಗೆ ಕೆರಾಡಿಗೆ ಹೋಗಲು ಇದೇ ಹತ್ತಿರದ ಮಾರ್ಗ. ಪುರಾಣ ಪ್ರಸಿದ್ಧ ಮೂಡುಗಲ್ಲುವಿನ ಗುಹಾ ದೇಗುಲಕ್ಕೂ ಸಂಪರ್ಕ ಕಲ್ಪಿಸುವ ರಸ್ತೆ ಯೂ ಇದೇ. ಆದರೆ ಆಭಿವೃದ್ಧಿ ಸದ್ಯಕ್ಕಿಲ್ಲವೆಂಬಂತೆ ತೋರುತ್ತದೆ.
ಡಾಮರೆಲ್ಲ ಎದ್ದು ಹೋಗಿದೆ :
ಹಳ್ಳಿಹೊಳೆಯಿಂದ ದೇವರಬಾಳು, ಕಟ್ಟಿನಾಡಿ ಕಡೆಗೆ ಸಂಪರ್ಕ ಕಲ್ಪಿಸುವ ಬರೆಗುಂಡಿ – ಯಡಿಬೇರು-ದೇವರಬಾಳು- ಕಟ್ಟಿನಾಡಿಯ ಸುಮಾರು 8 ಕಿ.ಮೀ. ಉದ್ದದ ರಸ್ತೆಯೂ ಜೀರ್ಣಾವಸ್ಥೆ ಯಲ್ಲಿದೆ. ಹತ್ತು ವರ್ಷಗಳ ಹಿಂದೆ ಹಾಕಲಾದ ಡಾಮರೆಲ್ಲ ಎದ್ದು ಹೋಗಿ, ಬರೀ ಹೊಂಡಮಯ. ಇದರಿಂದ ಈ ಭಾಗದ 100 ಕ್ಕೂ ಮಿಕ್ಕಿ ಮನೆಗಳ ಜನರಿಗೆ ಗುಂಡಿ ರಸ್ತೆಯೇ ಗತಿ. ಹಿಂದೆ ನಕ್ಸಲ್ ದಾಳಿ ಸಮಯದಲ್ಲಿ ಪೊಲೀಸ್ ಇಲಾಖೆಯ ಬೇಡಿಕೆ ಮೇರೆಗೆ ಈ ರಸ್ತೆ ಅಭಿವೃದ್ಧಿಯಾಗಿತ್ತು. ಆದರೆ ಬಳಿಕ ಪುನರ್ ಅಭಿವೃದ್ಧಿ ಆಗಿಲ್ಲ ಎನ್ನುತ್ತಾರೆ ರಾಜೇಂದ್ರ ರಾವ್.
ಇದರೊಂದಿಗೆ ಚಕ್ರಾ ಮೈದಾನ – ಮೂಡ್‌ಹಿತ್ಲು ರಸ್ತೆ, ಕಟ್ಟಿನಾಡಿ – ದೇವರಬಾಳು ರಸ್ತೆ, ಕೊಡ್ಲಾಡಿಕಟ್ಟು – ಹಾಡಿಮಕ್ಕಿ- ಕಾಸನಕಟ್ಟೆ ರಸ್ತೆಗಳಿಗೆ ಇನ್ನೂ ಡಾಮರು ಭಾಗ್ಯವೇ ಒದಗಿ ಬಂದಿಲ್ಲ.
ತಾಲೂಕು ಕೇಂದ್ರ ಇವರಿಗೆ ರಾಜಧಾನಿ ದಿಲ್ಲಿಯಷ್ಟೇ ದೂರ :
ಹಳ್ಳಿಹೊಳೆ: ಎಲ್ಲರೂ ನಂಬಬೇಕಾದ ಸಂಗತಿಯೆಂದರೆ ಹಳ್ಳಿಹೊಳೆಯ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಮೂರು ಬಸ್ ಹಿಡಿದು ಬರಬೇಕು. ಇಷ್ಟೇ ಅಲ್ಲ. ತಾಲೂಕು ಕೇಂದ್ರ ಜನರಿಗೆ ಹತ್ತಿರವಿರಬೇಕೆಂದಿದೆ. ಈ ಊರಿನವರಿಗೆ ತದ್ವಿರುದ್ಧ. ತಾಲೂಕು ಕೇಂದ್ರಕ್ಕೆ ಹಿಂದಿಗಿಂತಲೂ ಹೆಚ್ಚುವರಿ ಹದಿನೈದು ಕಿ.ಮೀ ಕ್ರಮಿಸಬೇಕು.
ನೇರವಾಗಿ ಒಂದೂ ಬಸ್ ಇಲ್ಲ. ಬೈಂದೂರು ತಾಲೂಕಿಗೆ ಸೇರಿರುವ ಹಳ್ಳಿಹೊಳೆ ಗ್ರಾಮಸ್ಥರು 3 ಬಸ್ ಹತ್ತಿ ಇಳಿದರೆ ಮಾತ್ರ ತಾಲೂಕು ಕೇಂದ್ರವನ್ನು ತಲುಪಬಹುದು.
ಈ ಹಿಂದೆ ಕುಂದಾಪುರ ತಾಲೂಕಿನಲ್ಲಿದ್ದ ಹಳ್ಳಿಹೊಳೆ ಸುತ್ತಲಿನ ಗ್ರಾಮಗಳನ್ನು ಸರಕಾರ ಹೊಸ ತಾಲೂಕಾಗಿ ರಚಿಸಿದ ಬೈಂದೂರಿಗೆ ಸೇರಿಸಿತು. ಕಂದಾಯ ಇಲಾಖೆಯ ಅಸಮರ್ಪಕ ವಿಂಗಡಣೆಯಿಂದ ಜನರಿಗೀಗ ತಾಲೂಕು ಕಚೇರಿಗಿಂತ ದಿಲ್ಲಿಯೇ ಹತ್ತಿರ !
ಆರ್.ಟಿ.ಸಿ. ಸರ್ವೇ, ಖಾತಾ ಬದಲಾವಣೆ, ಆರೋಗ್ಯ ಸೌಲಭ್ಯ ಸೇರಿದಂತೆ ಎಲ್ಲದಕ್ಕೂ ಬೈಂದೂರಿಗೆ ಬರಬೇಕಿದೆ. ಕೃಷಿಕರೇ ಅಧಿಕವಾಗಿದ್ದು, ಕಡತಗಳಿಗಾಗಿ ದಿನವಿಡೀ ವ್ಯಯಿಸಬೇಕಿದೆ. ಬೈಂದೂರಿಗೆ ತೆರಳಲು ಹಳ್ಳಿಹೊಳೆಯಿಂದ ಜಡ್ಕಲ್, ಮುದೂರಿಗೆ ಹೋಗುವ ಬಸ್ ಹತ್ತಿ, ಅಲ್ಲಿಂದ ಕೊಲ್ಲೂರಿಗೆ ಹೋಗುವ ಬಸ್‌ನಲ್ಲಿ ತೆರಳಿ, ಹಾಲ್ಕಲ್‌ನಲ್ಲಿ ಇಳಿದು, ಗೋಳಿಹೊಳೆ ಮಾರ್ಗದ ಮೂಲಕ ಬೈಂದೂರಿಗೆ ಬಸ್ ಹತ್ತಬೇಕು. ಇಲ್ಲದಿದ್ದರೆ ಕುಂದಾಪುರಕ್ಕೆ ಬಂದು, ಬೈಂದೂರಿಗೆ ತೆರಳಬೇಕು. ಇದು ತುಂಬಾ ದೂರದ ಮಾರ್ಗ. ಒಂದು ನೇರ ಬಸ್ಸಿದ್ದರೆ ಕಷ್ಟಪಟ್ಟಾದರೂ ಹೋಗಬಹುದಿತ್ತು. ಅದೂ ಸಾಧ್ಯವಿಲ್ಲವಾಗಿದೆ.
ಕುಂದಾಪುರಕ್ಕೆ ಏಳು ಬಸ್:
ಹಳ್ಳಿಹೊಳೆಯಿಂದ ಕುಂದಾ ಪುರಕ್ಕೆ ಸುಮಾರು 50 ಕಿ.ಮೀ. ದೂರವಿದ್ದರೆ, ಬೈಂದೂರಿಗೆ 65 ಕಿ.ಮೀ. ದೂರ. ಈಗ ಲಾಕ್‌ಡೌನ್‌ನಿಂದಾಗಿ ಬಸ್‌ಗಳೂ ಇಲ್ಲ. ಆದರೆ ಹಿಂದೆ ಕುಂದಾಪುರದಿಂದ ದಿನಕ್ಕೆ 7 ಬಸ್‌ಗಳು ಹಳ್ಳಿಹೊಳೆಗೆ ಸಂಚರಿಸಿದರೆ, ಬೈಂದೂರಿನಿಂದ ಒಂದೂ ಬಸ್ ಸಂಚರಿಸುತ್ತಿರಲಿಲ್ಲ.
ವಿರೋಧವೂ ಕೇಳಲಿಲ್ಲ :
ಬೈಂದೂರು ತಾಲೂಕು ರಚನೆಯಾದ ದಿನದಿಂದಲೂ ಹಳ್ಳಿಹೊಳೆಯನ್ನು ಕುಂದಾಪುರ ತಾಲೂಕಿನಿಂದ ಬೇರ್ಪಡಿಸಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೂ ಕುಂದಾಪುರಕ್ಕೆ ಹತ್ತಿರವಿದ್ದ ಹಳ್ಳಿಹೊಳೆ ಗ್ರಾಮವನ್ನು ಬೈಂದೂರಿಗೆ ಸೇರಿಸಲಾಗಿದೆ. ಹಾಗಾಗಿಯೇ ಸಮಸ್ಯೆಯಾಗಿದ್ದು, ಬೈಂದೂರಿಗೆ ಅಲೆಯುವುದಕ್ಕೆ ಮುಕ್ತಿ ಸಿಗಬೇಕಾಗಿದೆ.
ನಿವಾರಣೆಯಾಗದ ಜಿಲ್ಲಾ ಗಡಿ : ಹಳ್ಳಿಹೊಳೆ ಗ್ರಾಮವು ಬೈಂದೂರು ತಾಲೂಕು, ಉಡುಪಿ ಜಿಲ್ಲೆಗೆ ಸೇರಿದ್ದಾಗಿದ್ದರೂ ಗಡಿ ಗುರುತಿನ ನಕ್ಷೆ ಪ್ರಕಾರ ಈ ಗ್ರಾಮದ ದೇವರಬಾಳು, ಕಟ್ಟಿನಾಡಿ, ರಾಮನಹಕ್ಲು ಪ್ರದೇಶವು ಶಿವಮೊಗ್ಗ ಜಿಲ್ಲೆಗೆ ಸೇರುತ್ತದೆ ಎನ್ನುವ ತಾಂತ್ರಿಕ ತೊಂದರೆ ಇನ್ನೂ ನಿವಾರಣೆಯಾಗಿಲ್ಲ. ಹೇಮಲತಾ ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಗಡಿ ಗುರುತಿನ ಕುರಿತಂತೆ ಅರಣ್ಯ, ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿ ಕೆಲವರಿಗಷ್ಟೇ ಹಕ್ಕು ಪತ್ರ ನೀಡಲಾಗಿದೆ. ಹಕ್ಕುಪತ್ರ ಸಿಗಲು ವಿಳಂಬವಾಗುತ್ತಿರುವುದಕ್ಕೆ ಕಾರಣ ಗಡಿ ಸಮಸ್ಯೆ.
ಪ್ರೌಢಶಾಲೆ 20 ಕಿ.ಮೀ. ದೂರ :
ಹಳ್ಳಿಹೊಳೆ: ಈ ಊರಿನ ಬಹುತೇಕ ಮಕ್ಕಳದ್ದು ಪ್ರಾಥಮಿಕ ಶಿಕ್ಷಣವೇ ಅಂತಿಮ. ಅದಕ್ಕಿಂತ ಹೆಚ್ಚು ಕಲಿಯಲು ನಿತ್ಯವೂ ಹತ್ತಾರು ಕಿ.ಮೀ. ದೂರ ಕ್ರಮಿಸಬೇಕು ಇಲ್ಲವೇ ನಗರ ಪ್ರದೇಶದಲ್ಲಿ ಹಾಸ್ಟೆಲ್, ರೂಮ್ ಮಾಡಿಕೊಂಡು ಪ್ರೌಢ ಶಿಕ್ಷಣ ಕಲಿಯಬೇಕು. ಅದೇ ಕಾರಣಕ್ಕೆ ಹಳ್ಳಿಹೊಳೆ ಸುತ್ತಮುತ್ತಲಿನಲ್ಲಿ 10 ವರ್ಷಗಳಲ್ಲಿ ಕನಿಷ್ಠವೆಂದರೂ 100ಕ್ಕೂ ಹೆಚ್ಚು ಮಂದಿ ಪ್ರೌಢ ಶಿಕ್ಷಣದ ಮೆಟ್ಟಿಲನ್ನೇ ಹತ್ತಿಲ್ಲ.
ಉನ್ನತ ಶಿಕ್ಷಣ ಅನಂತರದ ಮಾತು. ಕಿ.ಮೀ. ಗೊಂದು ಶಾಲೆ ಇರುವ ಈ ಕಾಲದಲ್ಲಿ ಈ ಗ್ರಾಮ ಗಳ ಮಕ್ಕಳು ಪ್ರೌಢ ಶಿಕ್ಷಣ ಪಡೆಯಲು ಹತ್ತಾರು ಕಿ.ಮೀ ದೂರ ಕಾಲ್ನಡಿಗೆಯಲ್ಲೇ ಕ್ರಮಿಸಬೇಕು.
ಹಳ್ಳಿಹೊಳೆ ಗ್ರಾಮದಲ್ಲಿ ದೇವರಬಾಳು ಹಾಗೂ ವಾಟೆಬಚ್ಚಲು 2 ಕಿ.ಪ್ರಾ. ಶಾಲೆಗಳಿದ್ದರೆ, ಹಳ್ಳಿಹೊಳೆ ಶೆಟ್ಟಿಪಾಲು, ಚಕ್ರಾ ಮೈದಾನ, ಹೊಸಬಾಳು, ಇರಿಗೆ ಸೇರಿ 4 ಹಿ.ಪ್ರಾ. ಶಾಲೆಗಳಿವೆ. ದೇವರಬಾಳು, ಕಟ್ಟಿನಾಡಿ, ಕಬ್ಬಿನಾಲೆ, ಇರಿಗೆ ಕಲ್ಸಂಕ, ವಾಟೆಬಚ್ಚಲು ವಿನ ಮಕ್ಕಳು ಸರಕಾರಿ ಪ್ರೌಢಶಾಲೆಗೆ ಹೋಗಬೇಕಾದರೆ ಸುಮಾರು 20 ಕಿ.ಮೀ. ದೂರದ ಸಿದ್ದಾಪುರಕ್ಕೆ ಹೋಗಬೇಕು. ಇಲ್ಲವೇ 5 ಕಿ.ಮೀ. ದೂರದ ಕಮಲ ಶಿಲೆಯಲ್ಲಿರುವ ಅನು ದಾನಿತ ಪ್ರೌಢ ಶಾಲೆಯನ್ನು ಸೇರಬೇಕು.
ಬಸ್ ಸೌಕರ್ಯವೂ ಇಲ್ಲ :
ಸರಿಯಾದ ಬಸ್ ಸೌಕರ್ಯವಿದ್ದರೆ ದೂರ ವಾದರೂ ಆರ್ಥಿಕ ನಷ್ಟವಾದರೂ ಮಕ್ಕಳನ್ನು ಕಳಿಸಿ ಓದಿಸಬಹುದು. ಆದರೆ ಅದರ ಕೊರತೆಯೂ ಇದೆ. ಹಳ್ಳಿಹೊಳೆ, ಚಕ್ರಾ ಮೈದಾನ ಬಳಿಯಿಂದ ಬಸ್ ಸೌಕರ್ಯವಿದೆ. ಆದರೆ ಅಲ್ಲಿಗೆ ಹೋಗಲು ದೇವರಬಾಳು, ಕಬ್ಬಿನಾಲೆ, ಕಟ್ಟಿನಾಡಿ, ರಾಮನಹಕ್ಲು, ಕಾರೇಬೈಲು, ಇರಿಗೆ ಕಲ್ಸಂಕ, ವಾಟೆಬಚ್ಚಲು ಪ್ರದೇಶಗಳ ಮಕ್ಕಳು ಐದಾರು ಕಿ.ಮೀ ನಡೆದೇ ಹೋಗಬೇಕು. ಈ ಊರುಗಳಿಗೆ ಬಸ್ ಸೌಕರ್ಯವಿಲ್ಲ.
ಪ್ರಾಥಮಿಕಕ್ಕೆ ಸೀಮಿತ..! :
ಇಲ್ಲಿನ ಹೆಚ್ಚಿನ ಮಕ್ಕಳಲ್ಲಿ ನೀವು ಪ್ರಾಥಮಿಕ ಶಾಲೆಯವರೆಗೆ ಮಾತ್ರ ಓದಿದ್ದೀರಿ, ಮುಂದೆ ಯಾಕೆ ಶಾಲೆಗೆ ಹೋಗಿಲ್ಲ ಎಂದು ಕೇಳಿದರೆ, “ಅಯ್ಯೋ ಸರ್ ಇಲ್ಲೆಲ್ಲೂ ಹತ್ತಿರದಲ್ಲಿ ಶಾಲೆಯಿಲ್ಲ. ಹೆಚ್ಚು ಕಲಿಯಬೇಕೆಂದರೆ ಸಿದ್ದಾಪುರಕ್ಕೆ ಹೋಗ ಬೇಕು. ಪ್ರತೀ ನಿತ್ಯ ಅಷ್ಟೊಂದು ದೂರ ಹೋಗಿ ಬರಲು ಸಾಧ್ಯವಿಲ್ಲ. ಈ ಕಾರಣಕ್ಕೆ ಇಷ್ಟಕ್ಕೆ ಸಾಕು’ ಎಂಬ ಉತ್ತರ ಕೊಡುತ್ತಾರೆ ಮಕ್ಕಳು.
ಶಿಕ್ಷಣವೇ ಮೊಟಕು :
ಆಫ್‌ಲೈನ್ ತರಗತಿಗಳು ನಡೆಯುತ್ತಿಲ್ಲ. ಆನ್‌ಲೈನ್ ತರಗತಿಗಳು ಕೈಗೆಟಕುತ್ತಿಲ್ಲ. ಆದಕಾರಣ, ನೆಟ್‌ವರ್ಕ್ ಸಮಸ್ಯೆಯಿಂದಾಗಿ ಈ ಭಾಗದ ಸುಮಾರು 50 ಮಂದಿ ಮಕ್ಕಳು ಶಿಕ್ಷಣವನ್ನೇ ಅರ್ಧಕ್ಕೆ ನಿಲ್ಲಿಸಿ, ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರಾದ ಧನಂಜಯ ಛಾತ್ರ.
ಅರ್ಧಕ್ಕರ್ಧ ಊರೇ ನೆಟ್‌ವರ್ಕ್ ವಂಚಿತ :
ಹಳ್ಳಿಹೊಳೆ: ಸಾಮಾನ್ಯವಾಗಿ ಒಂದು ಪ್ರದೇಶ ಅಥವಾ ಒಂದು ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆಯಿರುತ್ತದೆ. ಆದರೆ ಹಳ್ಳಿಹೊಳೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅರ್ಧಕ್ಕರ್ಧ ಜಾಗದಲ್ಲಿ ನೆಟ್ ವರ್ಕ್ ಇಲ್ಲ. ಒಂದು ಕರೆ ಮಾಡಲು ಅಥವಾ ಸ್ವೀಕರಿಸಲು ಐದಾರು ಕಿ.ಮೀ. ಹೋಗ ಬೇಕು. ಈಗಂತೂ ಆನ್‌ಲೈನ್ ತರಗತಿಯ ವಿದ್ಯಾರ್ಥಿಗಳ, ವರ್ಕ್ ಫ್ರಂ ಹೋಂನ ಉದ್ಯೋಗಿಗಳ ಕಥೆ ಹೇಳತೀರದು.
ಹಳ್ಳಿಹೊಳೆ ಗ್ರಾಮದ ಇರಿಗೆ ಕಲ್ಸಂಕ, ಕಬ್ಬಿ ನಾಲೆ, ದೇವರಬಾಳು, ಕಟ್ಟಿನಾಡಿ, ರಾಮನ ಹಕ್ಲು, ಕಾರೇಬೈಲು ಭಾಗದಲ್ಲಿ ಎಲ್ಲಿಯೂ ಸರಿಯಾದ ನೆಟ್‌ವರ್ಕ್ ಇಲ್ಲ. ಈ ಊರು ಗಳು ನೆಟ್‌ವರ್ಕ್‌ಗಾಗಿ ವರ್ಷಗಳಿಂದ ಕಾಯುತ್ತಲೇ ಇವೆ.
ಒಂದು ಕರೆಗೆ 5 ಕಿ.ಮೀ…! :
ಬಿಎಸ್ಸೆನ್ನೆಲ್ ಸಿಮ್ ಇದ್ದವರು ಕರೆ ಮಾಡಲು ಕಬ್ಬಿನಾಲೆ, ದೇವರಬಾಳುವಿನಿಂದ 5 ಕಿ.ಮೀ. ದೂರದಲ್ಲಿರುವ ಚಕ್ರಾ ಮೈದಾನ ದೆಡೆಗೆ ಬರಬೇಕು. ಇನ್ನು ಇತರ ಖಾಸಗಿ ಕಂಪೆನಿಗಳ ಸಂಪರ್ಕ ಹೊಂದಿರು ವವರಿಗೆ 7 ಕಿ.ಮೀ. ದೂರದ ಹಳ್ಳಿಹೊಳೆ ಪೇಟೆಗೆ ಬಂದರೆ ಮಾತ್ರ ಸಿಗ್ನಲ್ ಸಿಗುತ್ತದೆ. ಇರಿಗೆ ಕಲ್ಸಂಕ ಭಾಗದವರು ಇರಿಗೆ ಶಾಲೆಯ ಬಳಿಯ ಹಾಲಿನ ಡೈರಿ ಸಮೀಪ ಬಂದರೆ ಸ್ವಲ್ಪ ನೆಟ್‌ವರ್ಕ್ ಸಿಗುತ್ತದೆ. ಇಲ್ಲಿ ನಿತ್ಯ 10 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಬಂದು ಕುಳಿತು ಆನ್‌ಲೈನ್ ಪಾಠ ಕೇಳುತ್ತಾರೆ.
ನಾನು ಬೆಂಗಳೂರಿನ ಕಾಲೇಜಿನಲ್ಲಿ ಸಿಎಸ್ ಕಲಿಯುತ್ತಿದ್ದೇನೆ. ಈಗ ರೆಗ್ಯುಲರ್ ತರಗತಿಗಳು ಇಲ್ಲದ್ದರಿಂದ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ನಮ್ಮ ಈ ಊರಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಪಾಠ ಕೇಳಲಾಗದೇ ಪಠ್ಯದಿಂದ ವಂಚಿತರಾಗುವಂತಾಗಿದೆ ಎಂಬುದು ಇರಿಗೆ ಕಲ್ಸಂಕದ ಕೀರ್ತಿ ಹಾಗೂ ಸುಪ್ರೀತಾರ ಅಳಲು.
250 ಕ್ಕೂ ಹೆಚ್ಚು ಮನೆಗೆ ಸಮಸ್ಯೆ :
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಬ್ಬಿನಾಲೆಯಲ್ಲಿ 40, ದೇವರಬಾಳುವಿನಲ್ಲಿ 35, ಕಟ್ಟಿನಾಡಿಯಲ್ಲಿ 25, ಕಾರೇಬೈಲಿನಲ್ಲಿ ಸುಮಾರು 60, ಇರಿಗೆ ಕಲ್ಸಂಕ ಭಾಗದಲ್ಲಿ 150 ಕ್ಕೂ ಹೆಚ್ಚು -ಒಟ್ಟಾರೆ 250 ಕ್ಕೂ ಹೆಚ್ಚು ಮನೆಯವರಿಗೆ ಮೊಬೈಲ್ ನೆಟ್ ವರ್ಕ್ ಕೊರತೆಯೇ ದೊಡ್ಡ ಸಮಸ್ಯೆ.
ಜನಸಂಖ್ಯೆ:
2,855
ಶಾಲೆಗಳು:
06 : 4 ಹಿ.ಪ್ರಾ.
2 ಕಿ. ಪ್ರಾ.
ಒಟ್ಟು ಮನೆಗಳು:
638
ಬ್ಯಾಂಕ್ ರಾಷ್ಟ್ರೀಕೃತ ಇಲ್ಲ (ಖಾಸಗಿ ಬ್ಯಾಂಕ್ – 1, ಸಹಕಾರಿ ಸಂಘ – 3)
ಪ್ರಾಥಮಿಕ ಆರೋಗ್ಯ ಕೇಂದ್ರ – ಇದೆ
ಪಶು ಚಿಕಿತ್ಸಾಲಯ – ಇದೆ
ತುರ್ತಾಗಿ ಆಗಬೇಕಿರುವುದು :
- ಸರಕಾರಿ ಪ್ರೌಢಶಾಲೆ
- ಹೆಚ್ಚುವರಿ ಮೊಬೈಲ್ ಟವರ್
- ಸಿದ್ದಾಪುರ- ಜಡ್ಕಲ್ ಮುಖ್ಯ ರಸ್ತೆ ಅಗಲ ಕಾಮಗಾರಿ
- ಗ್ರಾಮೀಣ ರಸ್ತೆಗಳಿಗೆ ವಿಶೇಷ ಅನುದಾನ
- ಅಗತ್ಯವಿರುವ 2 ಕಡೆಗಳಲ್ಲಿ ಸೇತುವೆ
- ತಾಲೂಕು ಕೇಂದ್ರಕ್ಕೆ ಬೆಳಗ್ಗೆ ಮತ್ತು ಸಂಜೆ ವೇಳೆ ನೇರ ಬಸ್ ಸಂಪರ್ಕ
- ಹಕ್ಕುಪತ್ರ ಸಿಗದಿರುವವರಿಗೆ ಹಕ್ಕುಪತ್ರ
ವರದಿ: ಪ್ರಶಾಂತ್ ಪಾದೆ,
ಅರುಣ್ ಕುಮಾರ್ ಶಿರೂರು