Advertisement

ರೈಲ್ವೆ ಯೋಜನೆ ಅಭಿವೃದ್ಧಿಗೆ ಆದ್ಯತೆ: ಬಿವೈಆರ್‌

11:28 AM Feb 04, 2019 | |

ಶಿವಮೊಗ್ಗ: ರಾಜ್ಯದ ಹಲವು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದ್ದು ಯಡಿಯೂರಪ್ಪ ಅವರು ಸಿಎಂ ಆದಾಗಲೇ. ತಾಳಗುಪ್ಪ ಬ್ರಾಡ್‌ಗೇಜ್‌ ಶುರುವಾಗಿದ್ದು ಕೂಡ ಅವರ ಕಾಲದಲ್ಲೇ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

Advertisement

ಭಾನುವಾರ ರೈಲ್ವೆ ನಿಲ್ದಾಣ ಆವರಣದಲ್ಲಿ ನಡೆದ ಜನಶತಾಬ್ದಿ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಧನೆ ಮಾತನಾಡಬೇಕು. ಮಾತನಾಡುವುದೇ ಸಾಧನೆ ಆಗಬಾರದು ಎಂಬ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ. ಶಿವಮೊಗ್ಗದ ಹಲವು ರೈಲ್ವೆ ಯೋಜನೆಗಳಿಗೆ ಒತ್ತು ನೀಡಲಾಗಿದೆ ಎಂದರು.

ಹೊಳೆಹೊನ್ನೂರು ರಸ್ತೆಯಲ್ಲಿ ರೈಲ್ವೆ ಫ್ಲೈ ಓವರ್‌ ಕುರಿತು ಚರ್ಚೆ ನಡೆಸಲಾಗಿದ್ದು, ಸೇತುವೆ ಜಾಗ ಪಾಲಿಕೆ ವ್ಯಾಪ್ತಿಗೆ ಸೇರಿದ್ದರೆ ತಕ್ಷಣ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ. ಆ ಕೆಲಸ ಪ್ರಗತಿಯಲ್ಲಿದೆ. ರೈಲ್ವೆ ನಿಲ್ದಾಣ ಸಂಪರ್ಕಿಸುವ ರಿಂಗ್‌ ರಸ್ತೆ ಅರೆಬರೆಯಾಗಿದ್ದು ಅದಕ್ಕೂ ಮುಕ್ತಿ ಸಿಗಲಿದೆ ಎಂದರು.

ಶಿವಮೊಗ್ಗದಿಂದ ಚೆನ್ನೈ ತಲುಪಲು ವಿಶೇಷ ಟ್ರೈನ್‌ ಕೇಳಲಾಗಿದೆ. ಶಿವಮೊಗ್ಗ- ಚಿತ್ರದುರ್ಗ ಮೂಲಕ ತಿರುಪತಿಗೂ ಸಹ ವಿಶೇಷ ರೈಲು ಕೇಳಲಾಗಿದೆ. ಹರಿಹರ- ಶಿವಮೊಗ್ಗ, ಶಿಕಾರಿಪುರ- ರಾಣೇಬೆನ್ನೂರು ಮಾರ್ಗಗಳಿಗೆ ಆದಷ್ಟು ಬೇಗ ಚಾಲನೆ ಸಿಗಲಿದೆ. ರೈಲ್ವೆ ನಿಲ್ದಾಣದಲ್ಲಿ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಎಲಿವೇಟರ್‌ ತಕ್ಷಣ ಬರಲಿದೆ ಎಂದರು.

ಕೋಟೆಗಂಗೂರಿನಲ್ಲಿ ಇರುವ 64 ಎಕರೆ ರೈಲ್ವೆ ಜಾಗ ಸದ್ಬಳಕೆಯಾಗಲು ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರು, ಕಾರ್ಮಿಕರು, ನೌಕರರು, ಉದ್ಯಮಿಗಳು ಬೆಂಗಳೂರಿಗೆ ತಲುಪಿ ಅದೇ ದಿನ ವಾಪಸ್‌ ಬರಲು ಅನುಕೂಲವಾಗುವಂತೆ ಜನಶತಾಬ್ದಿ ರೈಲು ವ್ಯವಸ್ಥೆ ಮಾಡಲಾಗಿದೆ ಎಂದರು.

Advertisement

ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ದೇಶದ ಆರ್ಥಿಕ ಪರಿಸ್ಥಿತಿ ಇತರೆ ದೇಶಗಳಿಗಿಂತ ಉತ್ತಮವಾಗಿದೆ. ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗುವ ಮೂಲಕ ಚೀನಾ, ಅಮೆರಿಕ ಆರ್ಥಿಕತೆ ಹಿಂದಿಕ್ಕಲಿದ್ದಾರೆ. 280 ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎಂಎಲ್ಸಿ ಆಯನೂರು ಮಂಜುನಾಥ್‌ ಮಾತನಾಡಿ, ಶಿವಮೊಗ್ಗಕ್ಕೆ ಕೇಂದ್ರ ಸರಕಾರದ ಅನುದಾನ ಹರಿದುಬಂದಿದ್ದರೆ ಅದು ಬಿಜೆಪಿ ಸಂಸದರಿದ್ದ ಕಾಲದಲ್ಲಿ. ಮಲೆನಾಡಿನ ನಾಟಾ ಸಾಗಿಸಲು ರೈಲ್ವೆ ಬಳಸಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣ ಸ್ವಚ್ಛ ಭಾರತ ಯೋಜನೆ ಜಾರಿಯಾದ ನಂತರ ಸುಂದರವಾಗಿದೆ. ಎಂದರು. ನೈರುತ್ಯ ರೈಲ್ವೆ ಜನರಲ್‌ ಮ್ಯಾನೇಜರ್‌ ಅಜಯ್‌ಕುಮಾರ್‌ ಸಿಂಗ್‌ ಮಾತನಾಡಿದರು. ಮೈಸೂರು ವಲಯದ ಡಿಆರ್‌ಎಂ ಅಪರ್ಣ ಗಾರ್ಗ್‌, ಶಾಸಕ ಅಶೋಕ್‌ ನಾಯ್ಕ, ಮೇಯರ್‌ ಲತಾ ಗಣೇಶ್‌, ಉಪಮೇಯರ್‌ ಚನ್ನಬಸಪ್ಪ ಇತರರಿದ್ದರು.

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ
ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಎಸ್‌ಐ ಆಸ್ಪತ್ರೆ ಆರಂಭವಾದರೆ ಜಿಲ್ಲೆಯ 65 ಸಾವಿರ ಕುಟುಂಬಗಳಿಗೆ ಸಹಾಯವಾಗಲಿದೆ. ಜಿಲ್ಲೆಯ ಸವಾಂರ್ಗೀಣ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಅಭಿವೃದ್ಧಿ ಬಗ್ಗೆ ಸಂಬಂಧಪಟ್ಟ ಸಚಿವರ ಬಳಿ ಮಾತನಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪ್ರತಿ ದಿನ ಜನಶತಾಬ್ದಿ
ವಾರದಲ್ಲಿ ನಾಲ್ಕು ದಿನ ಇರುವ ಜನಶತಾಬ್ದಿ ರೈಲನ್ನು ವಾರದ ಎಲ್ಲ ದಿನಗಳಿಗೂ ವಿಸ್ತರಿಸಲು ಮನವಿ ಮಾಡಲಾಗಿದೆ. ಒಂದು ವಾರದೊಳಗೆ ಇದಕ್ಕೆ ಗ್ರೀನ್‌ ಸಿಗ್ನಲ್‌ ಸಿಗುವ ಸಾಧ್ಯತೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಕತ್ತೆಗಳ ವ್ಯಾಪಾರ ಮಾಡಲ್ಲ
ಎನ್‌ಎಸ್‌ಯುಐ ಸಂಘಟನೆ ವತಿಯಿಂದ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿದ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ ಎಂಎಲ್ಸಿ ಆಯನೂರು ಮಂಜುನಾಥ್‌, ಕುದುರೆಗಳಾದರೆ ವ್ಯಾಪಾರ ಮಾಡಬಹುದು, ಕತ್ತೆಗಳನ್ನು ವ್ಯಾಪಾರ ಮಾಡಲು ಸಾಧ್ಯವೇ? ಎಂದು ಹರಿಹಾಯ್ದರು.

ಮೋದಿ ವಿರುದ್ಧ ಘೋಷಣೆ: ಎನ್‌ಎಸ್‌ಯುಐನ 10 ಜನರ ಬಂಧನ
ಶಿವಮೊಗ್ಗ:
ರಾಜ್ಯದಲ್ಲಿ ಬಿಜೆಪಿಯವರು ಕುದುರೆ ವ್ಯಾಪಾರ ಮಾಡುವ ಮೂಲಕ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿಕೂಟವನ್ನು ಬೀಳಿಸಲು ಹೊರಟಿದ್ದಾರೆ ಎಂದು ಆರೋಪಿಸಿರುವ ಎನ್‌ಎಸ್‌ಐಯು ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.ಜನಶತಾಬ್ದಿ ರೈಲಿಗೆ ಚಾಲನೆ ನೀಡಲು ಹೋಗುತ್ತಿದ್ದ ಬಿಎಸ್‌ವೈ ಹಾಗೂ ಬಿವೈಆರ್‌ ಸಮ್ಮುಖದಲ್ಲಿಯೇ ಪ್ರಧಾನಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಈ ವೇಳೆ ಪೊಲೀಸರು 10 ಜನರನ್ನು ವಶಕ್ಕೆ ಪಡೆದರು. ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ತರುವ ಉದ್ದೇಶದಿಂದ ನಾಯಕರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿರೋಧಿಸಿದರು. ಜಿಲ್ಲಾಧ್ಯಕ್ಷ ಬಾಲಾಜಿ, ರಾಜ್ಯ ಉಪಾಧ್ಯಕ್ಷ ಚೇತನ್‌, ಯುವ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಮಧುಸೂದನ್‌, ವಿಜಯ ಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next