Advertisement

ಗ್ರಾ.ಪಂ. ತೆರಿಗೆ ಸಂಗ್ರಹ: ದ.ಕ. ರಾಜ್ಯಕ್ಕೆ ಪ್ರಥಮ

11:43 AM Jul 30, 2018 | Team Udayavani |

ಮಂಗಳೂರು: ವಿದ್ಯುತ್‌ ಬಿಲ್‌ ಪಾವತಿಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆ ಗ್ರಾ. ಪಂ. ತೆರಿಗೆ ಸಂಗ್ರಹಣೆಯಲ್ಲಿಯೂ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಜಿಲ್ಲಾ ವ್ಯಾಪ್ತಿಯ ಗ್ರಾ. ಪಂ.ಗಳು ತೆರಿಗೆ ಸಂಗ್ರಹದಲ್ಲಿ ಶೇ.68.34ರಷ್ಟು ಗುರಿ ಸಾಧಿಸಿ ರಾಜ್ಯಕ್ಕೆ ಮಾದರಿ ಎನಿಸಿವೆ. ಶೇ.65.44ರಷ್ಟು ತೆರಿಗೆ ಸಂಗ್ರಹಿಸಿ ಉತ್ತರ ಕನ್ನಡ ಜಿಲ್ಲೆ ದ್ವಿತೀಯ ಹಾಗೂ ಶೇ.51.04ರಷ್ಟು ತೆರಿಗೆ ಸಂಗ್ರಹಿಸಿ ಉಡುಪಿ ಜಿಲ್ಲೆ ತೃತೀಯ ಸ್ಥಾನದಲ್ಲಿವೆ. ರಾಜ್ಯದಲ್ಲಿ ತೆರಿಗೆ ವಸೂಲಿ ಮಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಗ್ರಾ. ಪಂ.ಗಳು ಅಸಡ್ಡೆ ತೋರುತ್ತಿರುವ ಆರೋಪ ಕೇಳಿ ಬರುತ್ತಿರುವಾಗಲೇ ಕರಾವಳಿ ಭಾಗದಲ್ಲಿ ಗ್ರಾ.ಪಂ. ತೆರಿಗೆ ಸಂಗ್ರಹ ದಾಖಲೆ ಮಟ್ಟದಲ್ಲಿ ಸಂಗ್ರಹವಾಗಿರುವುದು ವಿಶೇಷ. 

Advertisement

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಕಾಯ್ದೆ 1993 ಯ‌ನ್ವಯ ಗ್ರಾ. ಪಂ.ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕೃಷಿಯೇತರ ಆಸ್ತಿಗಳ ಮೇಲೆ ತೆರಿಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾ.ಪಂ.ಗಳು ತಮ್ಮ ಸ್ವಂತ ಸಂಪನ್ಮೂಲಗಳನ್ನು ಕ್ರೋಡೀಕರಿಸಿ  ಸ್ವಾವಲಂಬಿಗಳಾಗಬೇಕು ಎಂಬುದು ಸರಕಾರದ ಆಶಯ. ಆದರೆ ಹೆಚ್ಚಿನ ಗ್ರಾ.ಪಂ.ಗಳು ತಮಗೆ ನೀಡಲಾದ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ತೆರಿಗೆ ನಿರ್ಧರಣೆ, ಪರಿಷ್ಕರಣೆ ಹಾಗೂ ವಸೂಲಾತಿಯಲ್ಲಿ ನಿರ್ಲಕ್ಷ್ಯವಹಿಸಿದ್ದವು. 

ದ. ಕನ್ನಡ ಜಿಲ್ಲೆಯ ಒಟ್ಟು 230 ಗ್ರಾ. ಪಂ.ಗಳಿಂದ 2017-18ರಲ್ಲಿ 26.59 ಕೋ.ರೂ ತೆರಿಗೆ ಸಂಗ್ರಹವಾಗಿದ್ದು 12.31 ಕೋ.ರೂ ಸಂಗ್ರಹಕ್ಕೆ ಬಾಕಿ ಇದೆ. ಉಡುಪಿಯಲ್ಲಿ 15.36 ಕೋ.ರೂ. ಸಂಗ್ರಹವಾಗಿದ್ದು, 14.73 ಕೋ. ರೂ. ಬಾಕಿ ಇದೆ. ಇದು ಉಳಿದ ಜಿಲ್ಲೆಗಳಿಗಿಂತ ಹೆಚ್ಚು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ತಿಳಿಸಿದೆ. 

ಕಲಬುರಗಿಗೆ ಕೊನೆಯ ಸ್ಥಾನ 
ಕಲಬುರಗಿ ಜಿಲ್ಲೆಯ 264 ಗ್ರಾ.ಪಂ. ಗಳಿಂದ 9.17 ಕೋ.ರೂ. ನಿರೀಕ್ಷೆ ಇರಿಸಲಾಗಿದ್ದು, ಸಂಗ್ರಹವಾಗಿರುವುದು 12.89 ಲಕ್ಷ ರೂ. ಮಾತ್ರ. ಬೀದರ್‌ ಜಿಲ್ಲೆಯ 185 ಗ್ರಾ.ಪಂ.ಗಳಿಂದ 5.94 ಕೋ.ರೂ ಸಂಗ್ರಹವಾಗಬೇಕಿದ್ದರೂ ಕೇವಲ 55.96 ಲಕ್ಷ ರೂ. ಸಂಗ್ರಹವಾಗಿದೆ. ಯಾದಗಿರಿಯಲ್ಲಿ 123 ಗ್ರಾ.ಪಂ.ಗಳಿಂದ 3.55 ಕೋ.ರೂ. ನಿರೀಕ್ಷೆಯಲ್ಲಿ 76.93 ಲಕ್ಷ ರೂ. ಮಾತ್ರ ಸಂಗ್ರಹವಾಗಿದೆ. 

ತೆರಿಗೆ ಪರಿಷ್ಕರಣೆ ಕುಸಿತ 
ರಾಜ್ಯದಲ್ಲಿ ಒಟ್ಟು 6,024 ಗ್ರಾ. ಪಂ.ಗಳು ಕಾರ್ಯನಿರ್ವಹಿಸುತ್ತಿವೆ. ತೆರಿಗೆ ಸಂಗ್ರಹಣೆಗೆ ವಿಶೇಷ ಒತ್ತು ನೀಡುವುದಕ್ಕಾಗಿ ತೆರಿಗೆ ಪರಿಷ್ಕರಣೆಗೆ ಗ್ರಾ.ಪಂ.ಗಳಿಗೆ ಅಧಿಕಾರ ನೀಡಲಾಗಿತ್ತು. ಆದರೆ ಬಹುತೇಕ ಗ್ರಾ.ಪಂ.ಗಳು ಈ ಅಧಿಕಾರವನ್ನೂ ಬಳಸಿಕೊಂಡಿಲ್ಲ ಎಂಬ ಆರೋಪವಿದೆ. 2015ನೇ ಸಾಲಿನಲ್ಲಿ ತಿದ್ದುಪಡಿ ತಂದಿದ್ದರೂ 1,421 ಗ್ರಾ.ಪಂ.ಗಳು ಮಾತ್ರ ತೆರಿಗೆ ಪರಿಷ್ಕರಣೆ ಮಾಡಿವೆ. ದ.ಕ. ಜಿಲ್ಲೆಯ 96, ಉ.ಕ. ಜಿಲ್ಲೆಯ 128, ಉಡುಪಿ ಜಿಲ್ಲೆಯ 88, ಬೆಂಗಳೂರು ನಗರದ 71, ಕೊಡಗು ಜಿಲ್ಲೆಯ 37 ಗ್ರಾ.ಪಂ.ಗಳು ತೆರಿಗೆ ಪರಿಷ್ಕರಣೆಯನ್ನು ಕಳೆದ 4 ವರ್ಷಗಳಲ್ಲಿ ಮಾಡಲೇ ಇಲ್ಲ. ಬೆಳಗಾವಿಯ 417, ತುಮಕೂರಿನ 273, ಮಂಡ್ಯದ 216, ಕಲಬುರಗಿಯ 211 ಗ್ರಾ.ಪಂ.ಗಳು ಕೂಡ ತೆರಿಗೆ ಪರಿಷ್ಕರಣೆ ಮಾಡಿಲ್ಲ.

Advertisement

*ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next