Advertisement

Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್‌ ರಾಜ್ಯಭಾರ!

04:43 PM Dec 29, 2024 | Team Udayavani |

ಸುರತ್ಕಲ್‌: ಸುರತ್ಕಲ್‌-ಗಣೇಶಪುರ ರಸ್ತೆಯನ್ನು ದ್ವಿಪಥಕ್ಕೆ ವಿಸ್ತರಿಸಿ ಕಾಂಕ್ರಿಟ್‌ ಮಾಡಿ ಸುಸಜ್ಜಿತಗೊಳಿಸಲಾಗಿದೆ. ಆದರೆ, ಇದರಿಂದ ಜನರಿಗೆ ನಯಾಪೈಸೆ ಲಾಭ ಆಗಿಲ್ಲ. ಯಾಕೆಂದರೆ ಈ ಚತುಷ್ಪಥ ರಸ್ತೆಯಲ್ಲಿ ಟ್ಯಾಂಕರ್‌, ಲಾರಿಗಳೇ ರಾಜ್ಯಭಾರ ಮಾಡುತ್ತಿವೆ. ರಸ್ತೆಯ ಇಕ್ಕೆಲಗಳಲ್ಲೂ ಬೃಹತ್‌ ಕಂಪನಿಗಳ ಟ್ಯಾಂಕರ್‌ಗಳು ಸಾಲುಗಟ್ಟಿ ನಿಲ್ಲುತ್ತಿರುವುದರಿಂದ ವಾಹನ ಸವಾರರಿಗೆ ನಿತ್ಯ ಅಪಘಾತದ ಭೀತಿ ಆವರಿಸಿದೆ.

Advertisement

ಸುರತ್ಕಲ್‌ ಎಸ್‌ಇಝಡ್‌ ವಲಯ, ಎಚ್‌ಪಿಸಿಎಲ್‌, ಬಿಎಎಸ್‌ಎಫ್‌, ಎಂಆರ್‌ಪಿಎಲ್‌ ಕಂಪೆನಿಗಳಲ್ಲಿ ಅನಿಲ, ಇಂಧನ, ಡಾಮರು ಮತ್ತಿತರ ಕಚ್ಚಾ ತೈಲದ ಉಪ ಉತ್ಪನ್ನಗಳ ಸಾಗಾಟ ನಿರಂತರವಾಗಿ ಇರುವುದರಿಂದ ಇದರಿಂದ ಈ ವ್ಯಾಪ್ತಿಯ ಕಂಪನಿಗಳ ಹೊರಭಾಗದ ರಸ್ತೆ ಬದಿಗಳಲ್ಲಿ ಟ್ಯಾಂಕರ್‌, ಲಾರಿಗಳ ನಿಲುಗಡೆ ಹೆಚ್ಚಾಗಿದೆ.

ಟ್ಯಾಂಕರ್‌ಗಳು ಕಂಪೆನಿಗಳ ಯಾರ್ಡ್‌ ಪ್ರವೇಶಕ್ಕೆ ಮುನ್ನ ಕಿ.ಮೀ. ಗಟ್ಟಲೆ ರಸ್ತೆಯಲ್ಲಿ ಕಾಯಬೇಕಾಗಿದೆ. ಹೀಗಾಗಿ ರಸ್ತೆಯ ಬದಿಗಳಲ್ಲಿ ಅವು ಸಾಲಾಗಿ ನಿಂತಿರುತ್ತವೆ. ಲೋಡಿಂಗ್‌ ಸಂದರ್ಭ ಮಾತ್ರ ಅಗತ್ಯವಿರುವಷ್ಟು ಟ್ರಕ್‌, ಟ್ಯಾಂಕರ್‌ಗಳನ್ನು ಸ್ಥಾವರದ ಒಳಗೆ ಪ್ರವೇಶಿಸಲು ನಿಯಮಿತವಾಗಿ ಅನುಮತಿ ಕೊಡಲಾಗುತ್ತಿರುವುದರಿಂದ ಉಳಿದ ಟ್ಯಾಂಕರ್‌ಗಳು ರಸ್ತೆಯಲ್ಲೇ ಕಾಯಬೇಕಾಗುತ್ತದೆ.

ಮುಂಜಾನೆಯಿಂದ ನಿಯಮಿತವಾಗಿ ಒಳಗೆ ಪ್ರವೇಶ ಇರುವುದರಿಂದ ಮೊದಲ ಸಾಲಿನಲ್ಲಿ ಲೋಡಿಂಗ್‌ಗೆ ತೆರಳಲು ಚಾಲಕರ ನಡುವೆ ಪೈಪೋಟಿ ಏರ್ಪಟ್ಟು ರಸ್ತೆಯಲ್ಲಿಯೇ ಲಾರಿಗಳ ಮೇಲಾಟವೂ ನಡೆಯುತ್ತದೆ. ಇದರಿಂದ ಸವಾರರಿಗೆ ನಿತ್ಯ ಕಿರಿಕಿರಿ. ಮುಂಜಾನೆ 4ರಿಂದಲೇ ರಸ್ತೆಯಲ್ಲಿ ಟ್ಯಾಂಕರ್‌, ಲಾರಿಗಳದ್ದೇ ಕಾರುಬಾರು ಎಂಬಂತಾಗಿದೆ.

ಏನು ಮಾಡಬಹುದು?
-ಕಂಪೆನಿಗಳು ತಮ್ಮ ಉತ್ಪನ್ನ ಸಾಗಾಟಕ್ಕೆ ಬಂದ ಟ್ಯಾಂಕರ್‌, ಲಾರಿಗಳಿಗೆ ತಮ್ಮ ಯಾರ್ಡ್‌ ಒಳಗೇ ವ್ಯವಸ್ಥೆ ಮಾಡಿಕೊಡಬಹುದು.
-ಸರಕಾರವೇ ಟ್ರಕ್‌ ಟರ್ಮಿನಲ್‌ಗ‌ಳನ್ನು ನಿರ್ಮಿಸಿ ಟ್ಯಾಂಕರ್‌, ಲಾರಿಗಳ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಬಹುದು.
-ಯಾರ್ಡ್‌ ಪ್ರವೇಶದ ಪೈಪೋಟಿ ತಪ್ಪಿಸಲು ಮೊದಲೇ ಸಮಯ ನಿಗದಿ ಮಾಡಿ ನೇರ ಸ್ಥಾವರದೊಳಗೆ ಹೋಗಲು ವ್ಯವಸ್ಥೆ ಮಾಡುವುದು.
-ಆನ್‌ಲೈನ್‌ ಮೂಲಕ ಮೆಸೇಜ್‌, ಒಟಿಪಿ ವ್ಯವಸ್ಥೆ ಒತ್ತು ನೀಡಿ.
-ಲಾರಿ ಚಾಲಕ, ನಿರ್ವಾಹಕರಿಗೆ ಶೌಚಾಲಯ ವ್ಯವಸ್ಥೆಯನ್ನು ಸ್ಥಳೀಯಾಡಳಿತ ಮಾಡಲಿ.

Advertisement

ವಾಹನಿಗರಿಗೆ ಏನು ಸಮಸ್ಯೆ?
ರಸ್ತೆಯ ಉದ್ದಕ್ಕೂ ಟ್ಯಾಂಕರ್‌ ಲಾರಿಗಳದೇ ದರ್ಬಾರು. ಹೀಗಾಗಿ ದ್ವಿಚಕ್ರ ವಾಹನಗಳು ಆತಂಕ ದಿಂದಲೇ ಸಾಗಬೇಕು. ಈಗಾಗಲೇ ಹಲವು ದ್ವಿಚಕ್ರ ವಾಹನಗಳು ನಿಂತ ಲಾರಿಗಳಿಗೆ ಢಿಕ್ಕಿ ಹೊಡೆದ ಘಟನೆಗಳು ನಡೆದಿವೆ. ಕೆಲವೊಮ್ಮೆ ಸಂಚಾರ ಎಷ್ಟೊಂದು ಅಸ್ತವ್ಯಸ್ತವಾಗಿರುತ್ತದೆ ಎಂದರೆ ಜನರು ಒಳರಸ್ತೆ ಹಿಡಿಯುವುದು ಅನಿವಾರ್ಯ. ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಘನ ವಾಹನಗಳಡಿ ಸಿಲುಕಿಕೊಳ್ಳುವುದು ಖಚಿತ ಎಂಬಂತಿದೆ.

ಬಿಜೆಪಿ ಸರಕಾರವಿದ್ದಾಗ ಟ್ರಕ್‌ ಟರ್ಮಿನಲ್‌ಗೆ ಸರ್ವೆ ಮಾಡಲು ಪ್ರಯತ್ನ ನಡೆಸಲಾಗಿತ್ತು. ಬೃಹತ್‌ ಟ್ರಕ್‌ ಟರ್ಮಿನಲ್‌ಗೆ ಕನಿಷ್ಠವೆಂದರೂ 35 ಎಕ್ರೆ ಜಾಗದ ಅಗತ್ಯವಿದೆ. ಜಿಲ್ಲಾಡಳಿತವೂ ಸರಕಾರಿ ಜಾಗವನ್ನು ಗುರುತಿಸಿ ಹಸ್ತಾಂತರಿಸುವ ಕೆಲಸ ಮಾಡಬೇಕು. ಸರಕಾರದ ಮಟ್ಟದಲ್ಲಿಯೂ ಪ್ರಯತ್ನ ನಡೆಸಲಾಗುವುದು.
-ಡಾ| ಭರತ್‌ ಶೆಟ್ಟಿ ವೈ, ಶಾಸಕರು

-ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next