Advertisement
ಅಪರೂಪದ ವಾಸ್ತು ವಿನ್ಯಾಸದ ಮೂಲಕ ಜಾಗತಿಕ ಅದ್ಭುತ ಪಾರಂಪರಿಕ ಸ್ಮಾರಕ ಎನಿಸಿರುವ ಗೋಲಗುಮ್ಮಟ ವೀಕ್ಷಿಸಿದ ಬಳಿಕ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಅಚ್ಚರಿ ವ್ಯಕ್ತಪಡಿಸಿದ ಪರಿ ಇದು. ಕನಾಟಕ ರಾಜ್ಯಪಾಲರಾದ ಬಳಿಕ ಸೋಮವಾರ ಸಂಜೆ ವಿಜಯಪುರ ನಗರಕ್ಕೆ ಮೊದಲ ಭೇಟಿ ಮಾಡಿದ ಥಾವರಚಂದ್ ಗೆಹ್ಲೋಟ್ ಅವರು, ಗೋಧೂಳಿ ಸಂದರ್ಭದಲ್ಲಿ ನಗರದಲ್ಲಿರುವ ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳಾದ ಗೋಲಗುಮ್ಮಟ, ಬಾರಾಕಮಾನ್ ಸ್ಮಾರಕಗಳನ್ನು ವೀಕ್ಷಿಸಿದರು.
Related Articles
Advertisement
ಇದನ್ನೂ ಓದಿ : ಪತ್ರಕರ್ತರ ರಾಜ್ಯ ಸಮ್ಮೇಳನದ ಲಾಂಚನ ಬಿಡುಗಡೆ ಮಾಡಿದ ಸಿಎಂ
ಝೀರೋ ಟ್ರಾಫಿಕ್ : ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ವಿಜಯಪುರ ನಗರದ ಸ್ಮಾರಕಗಳ ವೀಕ್ಷಣೆ ಹಿಲ್ಲೆಯಲ್ಲಿ ಅವರು ಸಂಚರಿಸುವ ಮಾರ್ಗದಲ್ಲಿ ಝೋರೋ ಟ್ರಾಫಿಕ್ ವ್ಯವಸ್ಥೇ ಮಾಡಲಾಗಿತ್ತು. ಅದರಲ್ಲೂ ಬಾರಾಕಮಾನ್ ಸ್ಮಾರಕ ರಸ್ತೆಯಿಂದ ಗೋಲಗುಮ್ಮಟ ಸ್ಮಾರಕದ ವರೆಗೆ ಸ್ಟೇಶನ್ ರಸ್ತೆಯನ್ನು ಸಂಪೂರ್ಣವಾಗಿ ನಿರ್ಜನ ರಸ್ತೆಯಾಗಿ ಪರಿವರ್ತಿಸಲಾಗಿತ್ತು. ರಸ್ತೆ ಮಾತ್ರವಲ್ಲ ರಾಜ್ಯಪಾಲರು ವೀಕ್ಷಿಸುವ ಸ್ಮಾರಕಗಳ ಪ್ರದೇಶದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಏಕಾಏಕಿ ಸ್ಟೇಶನ್ ರಸ್ತೆಯಲ್ಲಿ ಝೀರೋ ಟ್ರೀಫಿಕ್ ಮಾಡಿದರೂ ನಗರದ ಜನರು ರಾಜ್ಯಪಾಲರು ಸಂಚರಿಸುವ ರಸ್ತೆಗಳ ಇಕ್ಕೆಲಗಳಲ್ಲಿ ನೆರದು ಕುತೂಹಲದಿಂದ ವೀಕ್ಷಿಸುತ್ತಿದ್ದರು. ರಾಜಬೀದಿಯಲ್ಲಿ ರಾಜನಿಗೆ ನೀಡುವ ರಾಜವೈಭವದ ಸ್ವಾಗತ ಮೆರಣಿಗೆ ರೀತಿಯಲ್ಲಿ ರಾಜ್ಯಪಾಲರಿಗೆ ವಿಶೇಷ ಗೌರ ನೀಡಿದ್ದನ್ನು ಕಂಡು ಜನರು ಹಿಂದೆಂದೂ ಇಂಥ ವೈಭವದ ರಾಜ ಮರ್ಯಾದೆ ಯಾರಿಗೂ ದೊರೆತಿರಲಿಲ್ಲ. ಹೀಗಾಗಿ ಥಾವರಚಂದ್ ಗೆಹ್ಲೋಟ್ ಅವರ ವಿಜಯಪುರ ಭೇಟಿಗೆ ಮಾಡಿದ್ದ ವ್ಯವಸ್ಥೆ ನಿಜಕ್ಕೂ ಸ್ಮರಣೆಯಲ್ಲಿ ಉಳಿಯುವಂತೆ ಮಾಡಿದೆ ಎಂದು ಜನರು ಅಭಿಪ್ರಾಯಿಸಿದರು.
ರಂಗೋಲಿ ಸ್ವಾಗತ : ರಾಜ್ಯಪಾಲರು ವೀಕ್ಷಣೆ ಮಾಡಲು ಸಂಚರಿಸುವ ಸ್ಟೇಶನ್ ರಸ್ತೆಯಲ್ಲಿನ ಎರಡೂ ಬದಿಯಲ್ಲಿ ಗೂಡಂಗಡಿಗಳು, ಬೀದಿ ಬದಿ ವ್ಯಾಪಾರಿಗಳನ್ನು ಪೊಲೀಸರ ಸಹಾಯದಿಂದ ತೆರವು ಗೊಳಿಸಲಾಗಿತ್ತು. ಅಲ್ಲದೇ ಗೋಲಗುಮ್ಮಟ ಹಾಗೂ ಬಾರಾಕಮಾನ್ ಸ್ಮಾರಕಗಳ ಆವರಣದ ಪ್ರವೇಶ ದ್ವಾರದಲ್ಲಿ ವಿಶಿಷ್ಟ ರೀತಿಯಲ್ಲಿ ರಂಗೋಲಿ ಬಿಡಿಸಿ, ಸ್ವಾಗತ ಕೋರಲಾಗಿತ್ತು.
ತೇಪೆಕಂಡ ಹದಗೆಟ್ಟ ರಸ್ತೆಗಳು : ನಗರದಲ್ಲಿನ ಪ್ರಮುಖ ರಸ್ತೆಗಳಲ್ಲ ಹದಗೆಟ್ಟಿದ್ದು, ಜನತೆ ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದರು. ಆದರೆ ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ನಗರ ಸ್ಟೇಶನ್ ರಸ್ತೆಯಿಂದ ರಾಜ್ಯಪಾಲರು ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿರುವ ತೊರವಿ ಬಳಿಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವರೆಗಿನ ಸುಮಾರು 20 ಕಿ.ಮೀ. ಗುಂಡಿಬಿದ್ದಿದ್ದ ರಸ್ತೆಗಳನ್ನು ರಾತ್ರೋರಾತ್ರಿ ಡಾಂಬರು ತೇಪೆ ಕಾಣುವಂತಾಗಿದೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಭೇಟಿ ಖಚಿತವಾಗುತ್ತಲೇ ರಾತ್ರೋರಾತ್ರಿ ಈ ರಸ್ತೆಯ ದುರಸ್ತಿ ಕಾರ್ಯಕ್ಕೆ ಮುಂದಾದ ಅಧಿಕಾರಿಗಳು, ರಸ್ತೆ ಸಂಚಾರಿ ಸೂಚನಾ ಫಲಕಗಳನ್ನು ಅಳವಡಿಸಲು ಮುಂದಾಗಿದ್ದರು.
ಹದಗೆಟ್ಟಿದ್ದ ರಸ್ತೆಗಳ ದುರಸ್ತಿಗೆ ವರ್ಷಗಟ್ಟಲೆ ಹಲವು ರೀತಿಯಲ್ಲಿ ಪ್ರತಿಭಟನೆ, ಮನವಿಗಳಂಥ ಮಾರ್ಗದ ಮೂಲಕ ಬೇಡಿಕೆ ಮಂಡಿಸಿದರೂ ಜನತೆಯ ಭಾವನೆಗೆ ಸ್ಪಂದನೆ ಸಿಕ್ಕಿರಲಿಲ್ಲ. ಆದರೆ ರಾಜ್ಯಪಾಲರ ಭೇಟಿ ಖಚಿತವಾಗುತ್ತಲೇ ತ್ವರಿತವಾಗಿ ಪ್ರಮುಖ ರಸ್ತೆ ದುರಸ್ತಿ ಕಂಡಿದೆ. ಹೀಗಾಗಿ ರಾಜ್ಯಪಾಲರು ಸೇರಿದಂತೆ ಗಣ್ಯರು ನಗರದ ಎಲ್ಲ ಸ್ಮಾರಕಗಳ ವೀಕ್ಷಣೆಗೆ ಮುಂದಾದಲ್ಲಿ ನಗರ ಎಲ್ಲ ರಸ್ತೆಗಳಿಗೆ ದುರಸ್ತಿ ಭಾಗ್ಯ ಸಿಗಲಿದೆ ಎನ್ನುವ ಮಾತುಗಳು ಸಾಮಾನ್ಯವಾಗಿ ಕೇಳಿಬಂತು.
– ಜಿ.ಎಸ್.ಕಮತರ