Advertisement

ಎರಡು ಪಿಟ್‌ ಶೌಚಾಲಯಕ್ಕೆ ಉತ್ತೇಜನ

12:30 AM Mar 01, 2019 | |

ಉಡುಪಿ: ಆಳವಾದ ಒಂದು ಗುಂಡಿ ಇರುವ ಶೌಚಾಲಯದ ಬದಲು ಆಳ ಕಡಿಮೆ ಇರುವ ಎರಡು ಗುಂಡಿಯ ಶೌಚಾಲಯ (ಟ್ವಿನ್‌ ಪಿಟ್‌ ಟಾಯ್ಲೆಟ್‌) ನಿರ್ಮಿಸಲು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಲ್ಲ ಜಿಲ್ಲೆಗಳಿಗೆ ಸೂಚನೆ ನೀಡಿದೆ. ಸ್ವಚ್ಛ ಭಾರತ್‌ ಮಿಶನ್‌ ಯೋಜನೆಯಡಿ ಇದನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. 

Advertisement

ತಾಂತ್ರಿಕವಾಗಿ ಎರಡು ಗುಂಡಿಗಳ ಶೌಚಾಲಯ ಸುರಕ್ಷಿತ ಎಂಬ ನೀತಿ ಇತ್ತು. ಆದರೆ ಸ್ಥಳಾಭಾವದಿಂದ ಇದು ಸಾಧ್ಯವಾಗಿರಲಿಲ್ಲ. ಸಾಮಾನ್ಯವಾಗಿ ಒಂದು ಗುಂಡಿಯ ಬಳಕೆ ರೂಢಿ ಯಾಗಿದೆ. ಒಮ್ಮೆ ಶೌಚಾಲಯ ನಿರ್ಮಿ ಸಲು ಜನಜಾಗೃತಿಗೊಳಿಸಿದ ಸರಕಾರವೀಗ ಒಂದು ಗುಂಡಿಯ ಬದಲು 2 ಗುಂಡಿಯ ಶೌಚಾಲಯ ನಿರ್ಮಿಸಲು ಉತ್ತೇಜಿಸುತ್ತಿದೆ.

ಸಾಮಾನ್ಯವಾಗಿ ಎಂಟು ಅಡಿ ಆಳದ ಗುಂಡಿ ಮಾಡುತ್ತಾರೆ. ಇದರಿಂದ ರೋಗಾಣುಗಳು ಬಾವಿಗೆ ಸೇರಿ ನೀರು ಕಲುಷಿತವಾಗುವ ಸಾಧ್ಯತೆ ಇರುತ್ತದೆ. ಇದೂ ಕೂಡ ಆಯಾ ಮಣ್ಣಿನ ಗುಣದ ಮೇಲೆ ಅವಲಂಬಿತ. ಮಣಿಪಾಲದಂತಹ ಮುರಕಲ್ಲಿನ ಪ್ರದೇಶದಲ್ಲಿ ಗುಂಡಿ ಕೂಡಲೇ ತುಂಬುತ್ತದೆ. ಹೊಗೆ ಇರುವ ಮಣ್ಣಿನಲ್ಲಿ ಇಂಗಿ ಅಥವಾ ಹರಿದು ಹೋಗುತ್ತದೆ. ಈಗ ಎರಡು ಗುಂಡಿ ನಿರ್ಮಿಸುವಾಗ ನಾಲ್ಕು ಅಡಿ ಆಳ ಮಾಡಬೇಕೆಂದು ಸಲಹೆ ನೀಡಲಾಗುತ್ತಿದೆ. ಒಂದು ಗುಂಡಿ ತುಂಬಿದಾಗ ಇನ್ನೊಂದಕ್ಕೆ ಹರಿಯುವಂತೆ ಮಾಡಲಾಗುತ್ತದೆ. ಆಗ ಹಿಂದಿನ ಗುಂಡಿಯಲ್ಲಿದ್ದ ತ್ಯಾಜ್ಯ ಇಂಗಿ ಹೋಗುತ್ತದೆ. 2ನೇ ಗುಂಡಿ ತುಂಬಿದಾಗ ಮೊದಲ ಗುಂಡಿಗೆ ಹರಿಯುವಂತೆ ಮಾಡಬೇಕು. 

ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲೀಗ 510 ಮತ್ತು ದ.ಕ. ಜಿಲ್ಲೆಯಲ್ಲಿ 810 ಶೌಚಾಲಯ ರಹಿತರಿದ್ದಾರೆ. ಇವರು ಶೌಚಾಲಯ ಬಳಸುತ್ತಿಲ್ಲವೆಂದು ಅರ್ಥವಲ್ಲ. ಮನೆಯಲ್ಲಿ ಪಾಲು ಆಗಿ ಹೊರಬಂದವರು, ಇನ್ನೊಬ್ಬರ ಮನೆಯ ಶೌಚಾಲಯ ಬಳಸುವವರೂ ಈ ಪಟ್ಟಿ ಯಲ್ಲಿದ್ದಾರೆ. 

ಉಡುಪಿ ಜಿಲ್ಲೆಯಲ್ಲಿ ಗ್ರಾ.ಪಂ. ಮಟ್ಟದಲ್ಲಿರುವ ಸ್ವಚ್ಛತಾಗೃಹಿಗಳಿಗೆ ತರಬೇತಿ ನೀಡಲಾಗಿದೆ. ಮುಂದೆ ಗಾರೆ ಕೆಲಸ ಮಾಡುವವರಿಗೆ ತರಬೇತಿ ನೀಡುತ್ತೇವೆ. ನಮ್ಮಲ್ಲಿ  70  ಎರಡು ಗುಂಡಿಗಳ ಶೌಚಾಲಯ ನಿರ್ಮಾಣವಾಗಿದೆ. ಶೌಚಾಲಯರಹಿತರ ಪಟ್ಟಿಯಲ್ಲಿ 50 ಮನೆಗಳಲ್ಲಿ 2  ಗುಂಡಿಗಳ ಶೌಚಾಲಯ ನಿರ್ಮಾಣವಾಗಿದೆ. ಖಾಸಗಿಯವರು ಸ್ವಯಂ ಆಸಕ್ತಿಯಿಂದ ಎರಡು ಗುಂಡಿ ನಿರ್ಮಿಸುತ್ತಿದ್ದಾರೆ.
– ಶ್ರೀನಿವಾಸ ರಾವ್‌, ಮುಖ್ಯ ಯೋಜನಾಧಿಕಾರಿ, ಜಿ.ಪಂ. ಉಡುಪಿ. 

Advertisement

ನಾವು ಎರಡು ಗುಂಡಿಯ ಶೌಚಾಲಯಕ್ಕೆ ವಿನ್ಯಾಸ ರೂಪಿಸುತ್ತಿದ್ದೇವೆ. ತರಬೇತಿಗಳನ್ನೂ ಕೊಡುತ್ತೇವೆ. 600 ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ಕೊಟ್ಟಿದ್ದು ಸ್ಥಳಾವಕಾಶವಿದ್ದಲ್ಲಿ ಎರಡು ಗುಂಡಿಯ ಶೌಚಾಲಯ ನಿರ್ಮಿಸಲು ಹೇಳುತ್ತಿದ್ದೇವೆ. ಹೊಸದಾಗಿ ನಿರ್ಮಿಸುವವರು ಹೀಗೆ ಶೌಚಾಲಯ ನಿರ್ಮಿಸಬೇಕೆಂದು ತಿಳಿಸುತ್ತಿದ್ದೇವೆ. ಜನರಿಗೂ ಇದರ ಅಗತ್ಯ ಅರ್ಥವಾಗುತ್ತಿದೆ. 
ಎಸ್‌.ಸಿ. ಮಹೇಶ್‌, 
ದ.ಕ. ಜಿ.ಪಂ. ಉಪಕಾರ್ಯದರ್ಶಿ, ಸ್ವತ್ಛಭಾರತ್‌ ಮಿಶನ್‌ ನೋಡಲ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next