Advertisement

Mangaluru ಸಹಿತ 5 ಕಡೆ ಸರಕಾರಿ ವಿಶೇಷ ದತ್ತು ಸಂಸ್ಥೆ

11:42 PM Dec 08, 2023 | Team Udayavani |

ಮಂಗಳೂರು: ದತ್ತು ಮಕ್ಕಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಈಗ ಇರುವ ದತ್ತು ಕೇಂದ್ರಗಳ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಮಂಗಳೂರು, ಬೆಳಗಾವಿ, ಬೀದರ್‌, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರಿನಲ್ಲಿ “ಸರಕಾರಿ ವಿಶೇಷ ದತ್ತು ಸಂಸ್ಥೆ’ಗಳು ಶೀಘ್ರ ಆರಂಭವಾಗಲಿವೆ.

Advertisement

ದ.ಕ. ಜಿಲ್ಲೆಯ ಪುತ್ತೂರಿನಲ್ಲಿ “ಶ್ರೀ ರಾಮಕೃಷ್ಣ ಸೇವಾ ಸಮಾಜದ ವಾತ್ಸಲ್ಯಧಾಮ ದತ್ತು ಕೇಂದ್ರ’ವಿದ್ದು 2010ರಿಂದ ಕಾರ್ಯಾಚರಿಸುತ್ತಿದೆ. ಇದು 10 ಮಕ್ಕಳ ಸಾಮರ್ಥ್ಯ ಹೊಂದಿದೆ. ಆದರೆ ಕೆಲವೊಮ್ಮೆ ಹೆಚ್ಚು ಮಕ್ಕಳನ್ನು ಪಾಲನೆ ಮಾಡಬೇಕಾಗುವುದರಿಂದ ಹೆಚ್ಚುವರಿ ಕೇಂದ್ರಕ್ಕೆ ಬೇಡಿಕೆ ಇತ್ತು. ಜಿಲ್ಲೆಗೆ ಮಂಜೂರಾದ “ಸರಕಾರಿ ವಿಶೇಷ ದತ್ತು ಸಂಸ್ಥೆ’ ಬೋಂದೆಲ್‌ನಲ್ಲಿ ಶೀಘ್ರ ಕಾರ್ಯಾರಂಭಿಸಲಿದ್ದು ಇದು ಕೂಡ 10 ಮಕ್ಕಳ ಸಾಮರ್ಥ್ಯ ಹೊಂದಿದೆ. ಉಡುಪಿ ಜಿಲ್ಲೆಯ ಸಂತೆಕಟ್ಟೆಯಲ್ಲಿರುವ “ಶ್ರೀಕೃಷ್ಣಾನುಗ್ರಹ ದತ್ತು ಕೇಂದ್ರ’ 30 ಮಕ್ಕಳ ಸಾಮರ್ಥ್ಯ ಹೊಂದಿದ್ದು ಸದ್ಯ ಭರ್ತಿಯಾಗಿದೆ. ಇಲ್ಲಿಗೂ ಮತ್ತೊಂದು ಕೇಂದ್ರದ ಬೇಡಿಕೆ ಇದೆ.

264 ಮಕ್ಕಳ ದತ್ತು
ದ.ಕ. ಜಿಲ್ಲೆಯಿಂದ 166 ಮತ್ತು ಉಡುಪಿ ಜಿಲ್ಲೆಯಿಂದ 98 ಸೇರಿದಂತೆ ಒಟ್ಟು 264 ಮಕ್ಕಳನ್ನು ದತ್ತು ನೀಡಲಾಗಿದೆ. ಇದರಲ್ಲಿ ವಿಶೇಷ ಮಕ್ಕಳನ್ನು ವಿದೇಶಿಯರು ದತ್ತು ಪಡೆದುಕೊಂಡಿದ್ದಾರೆ.

7 ವರ್ಷಗಳ ಕಾಯುವಿಕೆ
ದ.ಕ. ಜಿಲ್ಲೆಯಲ್ಲಿ ಸದ್ಯ ಸುಮಾರು 400 ಮಂದಿ ಸದ್ಯ ದತ್ತು ಮಕ್ಕಳಿಗೆ ಬೇಡಿಕೆ ಇಟ್ಟಿದ್ದಾರೆ. ಕೆಲವರು 7ರಿಂದ 8 ವರ್ಷಗಳ ಹಿಂದೆಯೇ ನೋಂದಣಿ ಮಾಡಿ ಕಾಯುತ್ತಿದ್ದಾರೆ. 2 ವರ್ಷದವರೆಗಿನ ಮಗು ದೊರೆಯಲು ಸುಮಾರು ಮೂರುವರೆ ವರ್ಷ, ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳನ್ನು ದತ್ತು ಪಡೆಯಲು 7ರಿಂದ 8 ವರ್ಷಗಳ ವರೆಗೆ ಕಾಯುವ ಸ್ಥಿತಿ ಇದೆ. ಉಡುಪಿ ಜಿಲ್ಲೆಯಲ್ಲಿ ಸದ್ಯ ಸುಮಾರು 330 ಮಂದಿ ದತ್ತು ಮಕ್ಕಳಿಗಾಗಿ ನೋಂದಣಿ ಮಾಡಿಕೊಂಡಿದ್ದಾರೆ.

ನಿಯಮಾವಳಿ ಬದಲಾವಣೆ
ಮಕ್ಕಳ ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಇತ್ತೀಚೆಗೆ ಬದಲಿಸಲಾಗಿದ್ದು ಮಕ್ಕಳ ದತ್ತು ಆದೇಶ ಅಧಿಕಾರವನ್ನು ಸಿವಿಲ್‌ ನ್ಯಾಯಾಲಯಗಳಿಂದ ಜಿಲ್ಲಾಧಿಕಾರಿ ನ್ಯಾಯಾಲಯಗಳಿಗೆ ವರ್ಗಾಯಿಸಲಾಗಿದೆ. ಇದರಿಂದಾಗಿ ದತ್ತು ಸ್ವೀಕರಿಸುವ ಪೋಷಕರ “ಕಾಯುವಿಕೆ’ ಕಡಿಮೆಯಾಗುವ ನಿರೀಕ್ಷೆ ಇದೆ. ಮಕ್ಕಳ ದತ್ತು ಸ್ವೀಕಾರಕ್ಕೆ ನೋಂದಣಿಯಾಗಿ ವರ್ಷಗಳ ಕಾಲ ಕಾದು ಅನಂತರ ಮಕ್ಕಳು ಲಭ್ಯವಾದರೂ ಕೆಲವು ಜಿಲ್ಲೆಗಳಲ್ಲಿ ಸಿವಿಲ್‌ ನ್ಯಾಯಾಲಯದಿಂದ ದತ್ತು ಆದೇಶ (ಅಡಾಪ್ಷನ್‌ ಆರ್ಡರ್‌) ಪಡೆಯಲು ಮತ್ತೆ ಹಲವಾರು ತಿಂಗಳು ಕಾಯಬೇಕಿತ್ತು. ಈ ರೀತಿಯ ವಿಳಂಬ ತಡೆಯುವುದಕ್ಕಾಗಿ ನಿಯಮಾವಳಿಯಲ್ಲಿ ತಿದ್ದುಪಡಿ ಮಾಡಲಾಗಿದ್ದು ಅದರಂತೆ ದತ್ತು ಆದೇಶ ನೀಡುವ ಅಧಿಕಾರ ಡಿಸಿ ಕೋರ್ಟ್‌(ಜಿಲ್ಲಾಧಿಕಾರಿ ನ್ಯಾಯಾಲಯ)ಗೆ ನೀಡಲಾಗಿದೆ. ಇದರಿಂದಾಗಿ 2 ತಿಂಗಳಿನ ಒಳಗೆ ದತ್ತು ಆದೇಶ ಪಡೆಯಬಹುದಾಗಿದೆ.

Advertisement

ವಯಸ್ಸಿನ ಮಿತಿ ಇಳಿಕೆ
2 ವರ್ಷದ ವರೆಗಿನ ಮಕ್ಕಳನ್ನು ದತ್ತು ಸ್ವೀಕರಿಸುವ ಪೋಷಕರ (ದಂಪತಿ) ಒಟ್ಟು ವಯಸ್ಸಿನ ಮಿತಿಯನ್ನು 90 ವರ್ಷದಿಂದ 85 ವರ್ಷಕ್ಕೆ ಇಳಿಸಲಾಗಿದೆ. ಅಲ್ಲದೆ 2 ವರ್ಷದವರೆಗಿನ ಮಕ್ಕಳನ್ನು ದತ್ತು ಸ್ವೀಕರಿಸುವ ಏಕ ಪೋಷಕರ ಗರಿಷ್ಠ ವಯಸ್ಸನ್ನು 45ರಿಂದ 40ಕ್ಕೆ ಇಳಿಸಲಾಗಿದೆ. ಅನೇಕ ಮಂದಿ ಪೋಷಕರು ನಿಗದಿತ ವಯಸ್ಸು ದಾಟಿದ ಮೇಲೆ ದತ್ತು ಮಕ್ಕಳಿಗೆ ಬೇಡಿಕೆ ಸಲ್ಲಿಸುತ್ತಿರುವುದು ಕಂಡುಬಂದಿದೆ. ಆದರೆ ಪೋಷಕರು 110 ವರ್ಷ(ಇಬ್ಬರ ಒಟ್ಟು ವಯಸ್ಸು)ದ ವರೆಗೆ, ಏಕಪೋಷಕರು ಗರಿಷ್ಠ 55 ವರ್ಷ ವಯಸ್ಸಿನವರೆಗೆ ಮಾತ್ರ ದತ್ತು ಮಕ್ಕಳನ್ನು ಪಡೆಯಲು ಅವಕಾಶವಿದೆ.

//www.cara.wcd.gov.in ಅಥವಾ ಮಕ್ಕಳ ರಕ್ಷಣಾ ಘಟಕ, ದತ್ತುಕೇಂದ್ರಗಳು ಅಥವಾ ಶಿಶು ಅಭಿವೃದ್ಧಿ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

ದತ್ತು ಮಕ್ಕಳಿಗೆ ಬೇಡಿಕೆ ಹೆಚ್ಚುತ್ತಿದೆ. ದತ್ತು ಪಡೆಯುವ ಪೋಷಕರು ಮತ್ತು ಮಕ್ಕಳ ಹಿತದೃಷ್ಟಿಯಿಂದ ರಾಷ್ಟ್ರ ಮಟ್ಟದಲ್ಲಿಯೇ ನಿಯಮಾವಳಿ ತಿದ್ದುಪಡಿ ಮಾಡಲಾಗಿದೆ. ಕಾನೂನುಬಾಹಿರ ದತ್ತು ಸ್ವೀಕಾರ ಶಿಕ್ಷಾರ್ಹ ಅಪರಾಧ. ಇದರಿಂದ ಆಪತ್ತು ಉಂಟಾಗುತ್ತದೆ. ಈ ಬಗ್ಗೆ ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ.
– ಕುಮಾರ್‌,
ದ.ಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next