Advertisement

ಮಕ್ಕಳು ಬಳಸದಂತಿವೆ ಸರ್ಕಾರಿ ಶೂ, ಸಾಕ್ಸ್‌! 

06:00 AM Jul 25, 2018 | |

ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭವಾಗಿ ಒಂದು ತಿಂಗಳು ಕಳೆದಿದ್ದು, ತಡವಾಗಿ ಬಂದಿರುವ ಶೂಗಳು ಶಾಲಾ ಮಕ್ಕಳ ಪಾದಕ್ಕೇ ನಿಲುಕುತ್ತಿಲ್ಲ, ಸಾಕ್ಸ್‌ಗಳು ಕಾಲಿಗೆ ಎಟುಕುತ್ತಿಲ್ಲ. ಇದು ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪೇಚು!

Advertisement

ಹೆಚ್ಚಿನ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಶಾಲಾಡಳಿತ ಮಂಡಳಿ ಸಮವಸ್ತ್ರ ಸಹಿತವಾಗಿ ಶೂ, ಸಾಕ್ಸ್‌ಗಳನ್ನು ಪಾಲಕರಿಂದ ವೆಚ್ಚ ಭರಿಸಿ ಒದಗಿಸುತ್ತವೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರವೇ ಉಚಿತವಾಗಿ ಸಮವಸ್ತ್ರ ಹಾಗೂ ಶೂ, ಸಾಕ್ಸ್‌ ನೀಡುತ್ತದೆ. ಆದರೆ, ಸರ್ಕಾರನೀಡಿರುವ ಶೂ, ಸಾಕ್ಸ್‌ಗಳು ತರಗತಿ ಆರಂಭವಾಗಿ ತಿಂಗಳ ನಂತರ ವಿದ್ಯಾರ್ಥಿಗಳ ಕೈ ಸೇರಿದ್ದರೂ, ಉಪಯೋಗಿ ಸಲಾಗದ ಪೇಚಿಗೆ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಪ್ರಸಕ್ತ ಸಾಲಿನಲ್ಲಿ 42,291 ಸರ್ಕಾರಿ ಶಾಲೆಯ 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 44.57 ಲಕ್ಷ
ವಿದ್ಯಾರ್ಥಿಗಳಿಗೆ ಒಂದು ಜತೆ ಶೂ, ಎರಡು ಜತೆ ಸಾಕ್ಸ್‌ ವಿತರಿಸಲು 115 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. 1ರಿಂದ 5ನೇ ತರಗತಿ ಮಕ್ಕಳ ಒಂದು ಜತೆ ಶೂ, ಸಾಕ್ಸ್ಗೆ 225 ರೂ., 6ರಿಂದ 8ನೇ ತರಗತಿ ಮಕ್ಕಳ ಶೂ, ಸಾಕ್ಸ್‌ಗೆ 250 ರೂ. ಹಾಗೂ 9ರಿಂದ 10ನೇ
ತರಗತಿ ಮಕ್ಕಳ ಶೂ, ಸಾಕ್ಸ್‌ಗೆ 275 ರೂ. ನಿಗದಿ ಮಾಡಲಾಗಿತ್ತು. ಶೂ, ಸಾಕ್ಸ್‌ ಖರೀದಿಗೆ ಟೆಂಡರ್‌ ಪ್ರಕ್ರಿಯೆ ನಡೆದೇ ಇಲ್ಲ.

ಬೆಂಗಳೂರು ನಗರ, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಬಹುತೇಕ ಸರ್ಕಾರಿ
ಶಾಲೆಗಳ ವಿದ್ಯಾರ್ಥಿಗಳಿಗೆ ನೀಡಿದ ಶೂ, ಸಾಕ್ಸ್‌ ಅವರ ಪಾದದ ಅಳತೆಗೆ ಸಮನಾಗಿಲ್ಲ. ಗುಣಮಟ್ಟವೂ ಅಷ್ಟು ಚೆನ್ನಾಗಿಲ್ಲ ಎಂದು ಪಾಲಕರು ಈಗಾಗಲೇ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸಾಕಪ್ಪಾ ಸಾಕು ಈ ಗೋಳು
ಪ್ರತಿ ವಿದ್ಯಾರ್ಥಿಯ ಪಾದದ ಅಳತೆ ಪಡೆದು, ಅವರ ಕಾಲಿಗೆ ಸರಿ ಹೊಂದುವ ಶೂ, ಸಾಕ್ಸ್‌ಗಳನ್ನೇ ನೀಡಬೇಕು ಎಂದು ಎಲ್ಲ ಶಾಲೆಗಳ ಎಸ್‌ಡಿಎಂಸಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಖಡಕ್‌ ಸೂಚನೆ ನೀಡಲಾಗಿತ್ತು. ಎಸ್‌ಡಿಎಂಸಿಗಳು ಶಾಲಾ ಶಿಕ್ಷಕರ ಮೂಲಕ ಮಕ್ಕಳ ಪಾದದ ಅಳತೆ ಪಡೆದಿದ್ದರು. ಕೆಲವು ಶಾಲೆಗಳಲ್ಲಿ ಸ್ಥಳೀಯ ಶೂ ವ್ಯಾಪಾರಿ ಗಳನ್ನೇ ಶಾಲೆಗೆ ಕರೆಸಿ ಅವರಿಂದ ಅಳತೆ ಪಡೆದಿದ್ದರು. ಆದರೂ ಮಕ್ಕಳಿಗೆ ಈ ಕಷ್ಟ ತಪ್ಪಿಲ್ಲ.

ಶೂ, ಸಾಕ್ಸ್‌ ಅಳತೆ ವ್ಯತ್ಸಾಸ ವಿರುವ ಬಗ್ಗೆ ದೂರುಗಳು ಇಲಾಖೆಗೆ ಬಂದಿವೆ. ತಾಲೂಕು ಮಟ್ಟದಲ್ಲಿಯೇ ಇದನ್ನು ಸರಿಪಡಿಸಲು ಬೇಕಾದ ಸೂಚನೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಿದ್ದೇವೆ. ವಿದ್ಯಾರ್ಥಿಗಳ ಪಾದದ ಅಳತೆಗೆ ಸರಿಯಾದ ಶೂ ಮತ್ತು ಸಾಕ್ಸ್‌ಗಳೇ ನೀಡಬೇಕು.
ಡಾ.ಪಿ.ಸಿ.ಜಾಫ‌ರ್‌, ಆಯುಕ್ತ, ಸಾರ್ವಜನಿಕ ಶಿಕ್ಷಣ

Advertisement

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next