Advertisement
ಕೆಲವು ಶಾಲೆಗಳು ಸರಕಾರಿ ಜಮೀನಿನಲ್ಲಿದ್ದರೂ ಕಂದಾಯ, ಲೋಕೋಪಯೋಗಿ, ಮೀನುಗಾರಿಕೆ ಅಥವಾ ಬೇರ್ಯಾವುದೋ ಇಲಾಖೆಯಲ್ಲಿ ಅದರ ದಾಖಲೆ ಪತ್ರಗಳಿರುತ್ತವೆ. ಕೆಲವು ಶಾಲೆಗಳ ಜಮೀನು ದಾನವಾಗಿ ಬಂದಿದ್ದು, ಅದರ ನೋಂದಣಿ ಕಷ್ಟವಾಗುತ್ತದೆ. ಕೆಲವೆಡೆ ಖಾಸಗಿ ಸೊತ್ತು, ಬೇರೆ ಬೇರೆ ಸಂಘ ಸಂಸ್ಥೆಗಳ ಅಧೀನದ ಜಮೀನಿನಲ್ಲಿ ಶಾಲೆಗಳಿವೆ. ಎಲ್ಲವನ್ನೂ ನೋಂದಣಿ ಮಾಡಿಸುವ ಪ್ರಕ್ರಿಯೆ ವರ್ಷಗಳಿಂದ ನಡೆಯುತ್ತಿದ್ದು, ಶೇ. 100ರಷ್ಟು ಸಾಧನೆ ಸಾಧ್ಯವಾಗುತ್ತಿಲ್ಲ.
ಸರಕಾರಿ ಜಮೀನಿನಲ್ಲಿರುವ ಆಸ್ತಿಗಳನ್ನು ಶಾಲೆಯ ಹೆಸರಿಗೆ ಸುಲಭವಾಗಿ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರಣ ಮೂಲ ಇಲಾಖೆಯಿಂದ ಆ ಜಮೀನನ್ನು ಶಿಕ್ಷಣ ಇಲಾಖೆಗೆ ನೋಂದಣಿ ಮಾಡಿ ಕೊಡಲು ಅಧಿಕಾರಿಗಳು ಒಪ್ಪುತ್ತಿಲ್ಲ. ಮಾಡಿ ಕೊಡಲು ಸಿದ್ಧವಿರುವ ಕೆಲವು ಕಡೆ ಮೇಲಧಿಕಾರಿಗಳು ಮುಂದಿನ ಪ್ರಕ್ರಿಯೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಶಾಲಾ ಮುಖ್ಯ ಶಿಕ್ಷಕರಿಗೆ ಜಮೀನು ದಾಖಲೆ ಹಿಡಿದು ಇಲಾಖೆಯಿಂದ ಇಲಾಖೆಗೆ ಅಲೆಯುವುದೇ ಕೆಲಸ ವಾಗಿದೆ. ಕೆಲವು ತಾಂತ್ರಿಕ ಸವಾಲುಗಳಿಗೆ ಸರಕಾರವೇ ಮುಕ್ತಿ ನೀಡಬೇಕು ಎಂಬ ಆಗ್ರಹವೂ ಕೇಳಿಬರುತ್ತಿವೆ. ಉಡುಪಿ ಜಿಲ್ಲೆಯಲ್ಲಿ 578 ಸರಕಾರಿ ಪ್ರಾಥಮಿಕ ಶಾಲೆ ಹಾಗೂ 106 ಪ್ರೌಢಶಾಲೆಗಳಿವೆ. 384 ಪ್ರಾಥಮಿಕ ಶಾಲೆಗಳ ಆಸ್ತಿ ನೋಂದಣಿ ಮಾಡಿದ್ದು, 194 ನೋಂದಣಿಗೆ ಬಾಕಿಯಿದೆ.
Related Articles
Advertisement
ದ.ಕ. ಜಿಲ್ಲೆಯ 914 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 838 ಶಾಲೆಗಳ ಆಸ್ತಿ ನೋಂದಣಿ ಆಗಿದ್ದು, 76 ಬಾಕಿಯಿದೆ. 21 ದಾನ, 45 ಖಾಸಗಿ ಸೊತ್ತು ಸೇರಿದೆ. 170 ಪ್ರೌಢಶಾಲೆಗಳಲ್ಲಿ 158 ನೋಂದಣಿಯಾಗಿದ್ದು, 12 ಬಾಕಿಯಿದೆ. ತಲಾ ಒಂದೊಂದು ದಾನ ಹಾಗೂ ಖಾಸಗಿ ಸೊತ್ತಾಗಿದೆ.
ಸರಕಾರಿ ಜಮೀನು ಹೆಚ್ಚಿದೆಉಭಯ ಜಿಲ್ಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಯಾವುದೇ ಶಾಲೆಯ ನೋಂದಣಿ ಪ್ರಕ್ರಿಯೆ ನಡೆದಿಲ್ಲ. ಆಸ್ತಿ ನೋಂದಣಿಗೆ ಬಾಕಿ ಇರುವ 333 ಶಾಲೆಗಳಲ್ಲಿ 226 ಶಾಲೆಗಳು ಸರಕಾರಿ ಜಮೀನಿನಲ್ಲಿವೆ. ಉಳಿದವು ಖಾಸಗಿ ಹಾಗೂ ದಾನ ರೂಪದಲ್ಲಿ ಬಂದಿರುವ ಜಮೀನಿನಲ್ಲಿವೆ. ನೋಂದಣಿ ಯಾಕೆ?
ಹಲವು ಕಡೆಗಳಲ್ಲಿ ಸರಕಾರಿ ಶಾಲೆಗಳ ಜಮೀನು ಎಷ್ಟಿದೆ ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ. ಕೆಲವು ಕಡೆಗಳಲ್ಲಿ ಸರಕಾರಿ ಶಾಲೆಯ ಜಾಗವನ್ನು ಪರಭಾರೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸರಕಾರಿ ಶಾಲೆಗಳ ಆಸ್ತಿ ನೋಂದಣಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಸರಕಾರಿ ಇಲಾಖೆಗಳ ಜಮೀನಿನಲ್ಲಿರುವ ಶಾಲೆಯನ್ನು ಶಿಕ್ಷಣ ಇಲಾಖೆಯಡಿ ನೋಂದಣಿ ಮಾಡಿಕೊಳ್ಳಲು ಶಾಲೆಗಳಿಂದ ಹೋಗಿರುವ ಪ್ರಸ್ತಾವನೆ ಆಧಾರದಲ್ಲಿ ಮೂಲ ಇಲಾಖೆಯಿಂದ ಸರಕಾರಕ್ಕೆ ಕಳುಹಿಸಿ, ಅನುಮತಿ ನೀಡ ಬೇಕಾಗುತ್ತದೆ. ಕೆಲವು ಕಡೆಗಳಲ್ಲಿ ಫಾಲೋಅಪ್ ಕೊರತೆಯಿಂದ ನೋಂದಣಿ ಬಾಕಿ ಉಳಿದಿದೆ. ಆದಷ್ಟು ಬೇಗ ಪೂರ್ಣಗೊಳಿಸ ಲಾಗುವುದು.
-ಡಾ| ವಿಶಾಲ್, ಆಯುಕ್ತರು,
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ -ರಾಜು ಖಾರ್ವಿ ಕೊಡೇರಿ