Advertisement

Maninalkur: ಶಿಥಿಲಾವಸ್ಥೆಯಲ್ಲಿ ಹಳೆ ಶಾಲಾ ಕಟ್ಟಡ; ಕ್ರಮಕ್ಕೆ ಆಗ್ರಹ

02:27 PM Oct 17, 2024 | Team Udayavani |

ಬಂಟ್ವಾಳ: ಸರಕಾರಿ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಾಗ ತತ್‌ಕ್ಷಣಕ್ಕೆ ದುರಸ್ತಿ ಅಥವಾ ಹಳೆ ಕಟ್ಟಡವಾದರೆ ಅದನ್ನು ತೆರವು ಮಾಡುವುದು ಇಲಾಖೆಯ ಕರ್ತವ್ಯವಾಗಿದೆ. ಆದರೆ ಶಿಕ್ಷಣ ಇಲಾಖೆ ಹಲವು ಕಾರಣಗಳನ್ನು ಮುಂದಿಟ್ಟು ಶಿಥಿಲಾವಸ್ಥೆಯ ಕಟ್ಟಡವನ್ನು ಹಾಗೇ ಬಿಡುತ್ತಿದೆ. ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಸರಕಾರಿ ಹಿ.ಪ್ರಾ.ಶಾಲೆಯ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದ್ದು, ಕಟ್ಟಡದ ಒಂದು ಭಾಗದ ಹಂಚುಗಳನ್ನು ತೆಗೆದಿಟ್ಟು ಹಾಗೇ ಬಿಡಲಾಗಿದೆ. ಕಟ್ಟಡವು ಬಿದ್ದು ಅಪಾಯ ಸಂಭವಿಸುವ ಮೊದಲು ಇಲಾಖೆ ಕ್ರಮಕೈಗೊಳ್ಳುವಂತೆ ಆಗ್ರಹ ಕೇಳಿ ಬರುತ್ತಿದೆ.

Advertisement

ಮಾವಿನಕಟ್ಟೆ ಸರಕಾರಿ ಶಾಲೆಯಲ್ಲಿ 1ರಿಂದ 7ನೇ ತರಗತಿಯ ವರೆಗೆ 77 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರಸ್ತುತ ಮಕ್ಕಳಿಗೆ ಬೇಕಾದಷ್ಟು ಸುಸಜ್ಜಿತವಾದ ಆರ್‌ಸಿಸಿ ಕಟ್ಟಡವಿದೆ. ಶಾಲೆಯ ಮುಂಭಾಗದಲ್ಲಿ ಹಳೆಯದಾದ ಕಟ್ಟಡವೊಂದಿದ್ದು, ಇಲಾಖೆಯ ಮಾಹಿತಿ ಪ್ರಕಾರ ಕಟ್ಟಡವನ್ನು ತೆರವು ಮಾಡುವುದಕ್ಕೆ ಪಂಚಾಯತ್‌ರಾಜ್‌ ವಿಭಾಗಕ್ಕೆ ಬರೆಯಲಾಗಿದೆ ಎಂದು ಶಾಲೆಯ ಮೂಲಗಳು ತಿಳಿಸಿದೆ.

ಶಾಲೆಯ ಇನ್ನೊಂದು ಹಳೆ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದ್ದು, ಅದನ್ನು ಈಗಾಗಲೇ ತೆರವು ಮಾಡಲಾಗಿದೆ. ಪ್ರಸ್ತುತ ಮುಂಭಾಗದಲ್ಲಿರುವ ಈ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ತೆರವು ಮಾಡದೇ ಇದ್ದರೆ ಕಟ್ಟಡದ ಸಾಮರ್ಥ್ಯವನ್ನು ಪರಿಶೀಲಿಸಿ ದುರಸ್ತಿಗಾದರೂ ಕ್ರಮಕೈಗೊಳ್ಳಬೇಕಿದೆ.

ಮಳೆ ನೀರು ಕಟ್ಟಡದ ಒಳಕ್ಕೆ
ಶಾಲಾ ಕಟ್ಟಡದ ಒಂದು ಬದಿಯ ಮೇಲ್ಛಾವಣಿ ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳ ಸುರಕ್ಷೆಯ ದೃಷ್ಟಿಯಿಂದ ಹಂಚು ತೆಗೆಯಲಾಗಿದೆ. ಪ್ರಸ್ತುತ ಮಳೆ ನೀರು ನೇರವಾಗಿ ಕಟ್ಟಡದ ಒಳ ಪ್ರವೇಶಿಸುತ್ತಿದ್ದು, ನೀರು ಅಡಿಪಾಯ ಒಳಗೆ ನುಗ್ಗಿ ಇಡೀ ಕಟ್ಟಡವೇ ಕುಸಿದು ಬೀಳುವ ಅಪಾಯವಿದೆ. ಹಂಚು ತೆಗೆದಿರುವ ಭಾಗದಲ್ಲಿ ಮೇಲ್ಛಾವಣಿಯ ಮರಮಟ್ಟು ತುಂಡಾದರೆ ಇಡೀ ಕಟ್ಟಡದ ಮೇಲ್ಛಾವಣಿ ಕೆಳಗೆ ಬೀಳಲಿದೆ.

Advertisement

ಕಟ್ಟಡದ ತೆರವಿಗೆ ಇಲಾಖೆ ನಿರ್ಧಾರ
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾದಷ್ಟು ಸುಸಜ್ಜಿತ ಕಟ್ಟಡಗಳು ಇರುವುದರಿಂದ ಈ ಹಳೆಯ ಕಟ್ಟಡವನ್ನು ತೆರವು ಮಾಡುವುದಕ್ಕೆ ಇಲಾಖೆ ನಿರ್ಧರಿಸಿ ಈಗಾಗಲೇ ಸಂಬಂಧಪಟ್ಟ ಎಂಜಿನಿಯರಿಂಗ್‌ ವಿಭಾಗಕ್ಕೆ ಬರೆಯಲಾಗಿದೆ. ಇಲಾಖೆಯ ಆದೇಶದ ಬಳಿಕ ಕಟ್ಟಡ ತೆರವುಗೊಳ್ಳಲಿದೆ.
-ಯಶೋದಾ, ಮುಖ್ಯಶಿಕ್ಷಕರು, ಮಾವಿನಕಟ್ಟೆ ಸರಕಾರಿ ಶಾಲೆ.

ಈ ಕಟ್ಟಡವು ಮುಂಭಾಗದಲ್ಲಿದ್ದು, ಇತರ ಕಟ್ಟಡಗಳು ಹಿಂದೆ ಇರುವುದರಿಂದ ವಿದ್ಯಾರ್ಥಿಗಳು ಇದೇ ಕಟ್ಟಡದ ಮೂಲಕವೇ ಹಾದು ಹಿಂದಕ್ಕೆ ಹೋಗಬೇಕಿದೆ. ದುರ್ಘ‌ಟನೆಗಳು ವಿದ್ಯಾರ್ಥಿಗಳು ಇರುವಾಗ ಸಂಭವಿಸಿ ಅನಾಹುತ ಉಂಟಾದರೆ ಯಾರು ಹೊಣೆ. ಕಳೆದ ಆಗಸ್ಟ್‌ ತಿಂಗಳಲ್ಲಿ ಕಡಬ ತಾಲೂಕಿನ ಕುಂತೂರು ಸರಕಾರಿ ಶಾಲೆಯ ಕಟ್ಟಡ ಕುಸಿದು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆಯ ಬಳಿಕವೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಂತೆ ಕಂಡುಬರುತ್ತಿಲ್ಲ. ಈ ಶಾಲಾ ಕಟ್ಟಡದ ಅಂಚಿನಲ್ಲೇ ಏರು ರಸ್ತೆಯೊಂದು ಹಾದು ಹೋಗುತ್ತಿದ್ದು, ಜನ ಓಡಾಟದ ಸಂದರ್ಭ ಕಟ್ಟಡ ಕುಸಿದರೆ ಸಾರ್ವಜನಿಕರಿಗೂ ಅಪಾಯ ತಪ್ಪಿದ್ದಲ್ಲ

Advertisement

Udayavani is now on Telegram. Click here to join our channel and stay updated with the latest news.

Next