Advertisement

Waqf Property: ವಕ್ಫ್ ಭೂ ವಿವಾದ: ಬಿಜೆಪಿ ಗಡುವು, ಹೋರಾಟದ ಎಚ್ಚರಿಕೆ

02:52 AM Oct 28, 2024 | Esha Prasanna |

ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ಉಳುವ ಭೂಮಿಯನ್ನು ವಕ್ಫ್ ಮಂಡಳಿಯ ಆಸ್ತಿ ಎಂದು ನೋಟಿಸ್‌ ಜಾರಿಗೊಳಿಸಿರುವ ವಿಚಾರವನ್ನು ರಾಜ್ಯ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ವಕ್ಫ್ ಮಂಡಳಿ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಬಗ್ಗೆ ರೈತರ ಅಹವಾಲು ಆಲಿಸಲು ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಐವರ ತಂಡವನ್ನೂ ರಚಿಸಿದೆ. ಜತೆಗೆ 15 ದಿನದಲ್ಲಿ ನೋಟಿಸ್‌ ಹಿಂಪಡೆಯದಿದ್ದರೆ ರೈತರ ಜತೆಗೂಡಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.

Advertisement

ರವಿವಾರ ಈ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಪ್ರಸ್ತಾವಿಸಿದ್ದು, ಲೋಕಸಭೆ ಹಾಗೂ ರಾಜ್ಯಸಭೆಗಳಿಂದ ಜಂಟಿ ಸದನ ಸಮಿತಿಯೂ ರಚನೆಯಾಗಿದೆ. ಈ ಸಮಿತಿಯು ದೇಶಾದ್ಯಂತ ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆದು ತಿದ್ದುಪಡಿ ಪ್ರಸ್ತಾವನೆಗಳನ್ನು ಶಿಫಾರಸು ಮಾಡಬೇಕಿದೆ. ಅಷ್ಟರಲ್ಲಿ ಭೂಮಿ ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಆರೋಪಿಸಿದರು.

ರಾಜ್ಯ ಸರಕಾರದಿಂದ ತುಘಲಕ್‌ ದರ್ಬಾರ್‌
ನಮಗಿರುವ ಮಾಹಿತಿ ಪ್ರಕಾರ ವಿಜಯಪುರ ಜಿಲ್ಲೆಯ ಸುಮಾರು 400 ಹಳ್ಳಿಗಳಲ್ಲಿ ಇದೇ ರೀತಿ ಆಗಿದೆ. ರೈತರು, ಹಿಂದುಳಿದವರಿಗೆ ಸೇರಿದ ಸುಮಾರು 15 ಸಾವಿರ ಎಕರೆ ಭೂಮಿ ಕಬಳಿಸುವ ಹುನ್ನಾರ ನಡೆದಿದೆ. ಕಾಂಗ್ರೆಸ್‌ ಸರಕಾರ ದುರಾಡಳಿತ ಮಾಡುತ್ತಿದೆ. ತುಘಲಕ್‌ ದರ್ಬಾರ್‌ ನಡೆಸುತ್ತಿದೆ. ವಕ್ಫ್ ಮಂಡಳಿಗೆ 15 ದಿನ ಸಮಯಾವಕಾಶ ಕೊಡುತ್ತೇವೆ. ಅಷ್ಟರಲ್ಲಿ ರೈತರಿಗೆ ಕೊಟ್ಟಿರುವ ನೋಟಿಸ್‌ ಹಿಂಪಡೆಯಬೇಕು ಹಾಗೂ ರೈತರ ಪಹಣಿಯಲ್ಲಿ ಸ್ಪಷ್ಟ ತಿದ್ದುಪಡಿಗಳಾಗಬೇಕು. ಇಲ್ಲದಿದ್ದರೆ ರೈತರನ್ನು ಸಂಘಟಿಸಿ ಬೃಹತ್‌ ಹೋರಾಟ ನಡೆಸುತ್ತೇವೆ ಎಂದರು.


ಇದು ಟಿಪ್ಪು ಸರಕಾರವೋ?
ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ರೈತರ ಜಮೀನನ್ನು ವಕ್ಫ್ ಆಸ್ತಿ ಎಂದು ವಿಜಯಪುರ ಜಿಲ್ಲಾಧಿಕಾರಿ ನೋಟಿಸ್‌ ಕೊಟ್ಟಿದ್ದಾರೆ. ಸಚಿವ ಜಮೀರ್‌ ಖಾನ್‌ ಕೂಡ ಅದು ವಕ್ಫ್ ಜಮೀನು ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ವಕ್ಫ್ ಆಸ್ತಿ ಹೆಚ್ಚಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ. ರೈತರನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತ ಇದೆಯೋ? ಟಿಪ್ಪು ಸುಲ್ತಾನನ ಆಡಳಿತ ಇದೆಯೋ? ಸಚಿವ ಜಮೀರ್‌ ಅವರಂತೂ ಟಿಪ್ಪು ಸುಲ್ತಾನನ ಅಪರಾವತಾರ ಆಗಿದ್ದಾರೆ. ಸರಕಾರ ಮೊದಲು ಅವರ ರಾಜೀನಾಮೆ ಪಡೆಯಬೇಕು. ರೈತರಿಗೆ ಕೊಟ್ಟಿರುವ ನೋಟಿಸ್‌ ಹಿಂಪಡೆಯಬೇಕು ಎಂದರು.

ನಾಳೆ ವಿಜಯಪುರಕ್ಕೆ ಬಿಜೆಪಿ ತಂಡ ಭೇಟಿ
ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್ ಬೋರ್ಡ್‌ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ಸಂತ್ರಸ್ತ ರೈತರ ಅಹವಾಲನ್ನು ಆಲಿಸಲು ಬಿಜೆಪಿ ವತಿಯಿಂದ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಈ ತಂಡವು ಅ. 29ರಂದು ವಿಜಯಪುರಕ್ಕೆ ಭೇಟಿ ನೀಡಿ ನೋಟಿಸ್‌ನಲ್ಲಿ ಏನಿದೆ? ರೈತರ ಅಹವಾಲುಗಳೇನು? ಎಂಬುದನ್ನು ತಿಳಿದು ಜಿಲ್ಲಾಧಿಕಾರಿಯಿಂದಲೂ ಮಾಹಿತಿ ಪಡೆದುಕೊಳ್ಳಲಿದೆ. ಅನಂತರ ವರದಿ ಸಿದ್ಧಪಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೂಲಕ ರಾಜ್ಯ ಸರಕಾರ ಹಾಗೂ ರಾಜ್ಯಪಾಲರಿಗೆ ಸಲ್ಲಿಸಲಿದೆ.

Advertisement

ದಾಖಲೆ ಪರಿಶೀಲನೆಗೆ ಕಾರ್ಯಪಡೆ: ಎಂ.ಬಿ.ಪಾಟೀಲ್‌
ವಿಜಯಪುರ: ವಕ್ಫ್‌ ಆಸ್ತಿಗೆ ಸಂಬಂಧಿ ಸಿದಂತೆ ಜಿಲ್ಲಾ ಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ಪೋರ್ಸ್‌ ಸಮಿತಿಯೊಂದನ್ನು ರಚಿಸಿ 1964ರಿಂದ 1974ರ ವರೆಗಿನ ದಾಖಲೆಗಳನ್ನು ಪರಿಶೀಲಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು. ಜಿಲ್ಲೆಯಾದ್ಯಂತ ರೈತರು ಸೇರಿ ಖಾಸಗಿ ಜಮೀನುಗಳ ಪೈಕಿ ಒಂದು ಎಕರೆಯನ್ನೂ ಕೂಡ ಸೇರಿಸಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next