Advertisement

Waqf Property: ವಕ್ಫ್ ನೋಟಿಸ್‌ಗೆ ಸಿಎಂ, ಡಿಸಿಎಂ ಚಿತಾವಣೆ: ಬಿಜೆಪಿ

03:58 AM Oct 30, 2024 | Team Udayavani |

ಬೆಂಗಳೂರು: ರೈತರ ಜಮೀನುಗಳಿಗೆ ವಕ್ಫ್ ಆಸ್ತಿ’ ಅಂತ ನೋಟಿಸ್‌ ಬರುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮೌನ ಮುರಿಯಬೇಕು. ಈ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ವಿಪಕ್ಷ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

Advertisement

ಸಿಎಂ-ಡಿಸಿಎಂ ಚಿತಾವಣೆ ಮೇರೆಗೇ ರೈತರ ಜಮೀನು ನುಂಗುವ ಕೆಲಸ ಆಗುತ್ತಿದೆ. ರೈತರು ವಿಶೇಷವಾಗಿ ಉತ್ತರ ಕರ್ನಾಟಕ ರೈತರು ಸರಕಾರದ ಈ ಅಧ್ವಾನಗಳಿಂದ ಕಂಗಾಲಾಗಿದ್ದಾರೆ. ಆದರೆ, ಸಿಎಂ ಆಗಲಿ ಡಿಸಿಎಂ ಆಗಲಿ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ತಾವು ಸಂವಿಧಾನದ ಪರವೋ ಷರಿಯಾ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ ಮತ್ತು ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಕೂಡಲೇ ಆಯಾ ರೈತರಿಗೆ ಜಮೀನು ವಾಪಸ್‌ ನೀಡಬೇಕು. ಇಲ್ಲದಿದ್ದರೆ, ತೀವ್ರ ಹೋರಾಟ ನಡೆಸಲಾಗುವುದು. ಬರುವ ಚಳಿಗಾಲದ ಅಧಿವೇಶನದಲ್ಲೂ ಈ ಬಗ್ಗೆ ನಿಲುವಳಿ ಸೂಚನೆ ಮಂಡಿಸಿ, ಹೋರಾಟ ನಡೆಸಲಾಗುವುದು’ ಎಂದು ಆರ್‌. ಅಶೋಕ್‌ ಎಚ್ಚರಿಸಿದರು. ನಮ್ಮಲ್ಲಿ ಷರಿಯಾ ಕಾನೂನು ಇಲ್ಲ. ಸಿದ್ದರಾಮಯ್ಯ ಒಂದು ಕೋಮಿನ ಪರ ಎಂಬ ನಿಲುವು ತೆಗೆದುಕೊಂಡರೆ ಅದು ಕಾನೂನು ಕ್ಷೋಭೆಗೆ ಕಾರಣವಾಗಲಿದೆ. ಈ ವಿಚಾರದಲ್ಲಿ ಸಿಎಂ ಮೌನ ಮುರಿದು, ತಾವು ಸಂವಿಧಾನ ಪರವೋ ಷರಿಯಾ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಸಿ.ಟಿ. ರವಿಆಗ್ರಹಿಸಿದರು.

ದಾಖಲೆ ಕೇಳಿದ್ದರಾ?: ಜೋಶಿ
ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡುವಾಗ ಯಾವುದೇ ದಾಖಲೆ ಕೇಳದ ಅಧಿಕಾರಿಗಳು ಈಗ ಸರಿಪಡಿಸಲು ದಾಖಲೆ ಏಕೆ ಕೇಳುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಧಾರವಾಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವಕ್ಫ್ ಹೆಸರು ನಮೂದು ಮಾಡುವಾಗ ದಾಖಲೆ ಕೇಳಿದ್ದರಾ? ಜಿಲ್ಲಾಧಿಕಾರಿ ತಕ್ಷಣವೇ ಯಾವುದೇ ಸಬೂಬು ನೀಡದೆ ನೋಟಿಸ್‌ ಹಿಂಪಡೆದು ಪಹಣಿ ಸರಿಪಡಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದರು.

ಮಸೀದಿಗಳು ಕರ್ನಾಟಕ ಸರಕಾರವನ್ನು ಆಳುತ್ತಿವೆ. ರಾಜ್ಯದೆಲ್ಲೆಡೆ ರೈತರ ಜಮೀನು ವಕ್ಫ್ ಆಸ್ತಿ ಎಂದು ಬದಲಾಯಿಸಲಾಗುತ್ತಿದೆ. ಮಠಗಳನ್ನು ವಕ್ಫ್ಗೆ ಸೇರಿಸಿ ಎಂದು ಪತ್ರ ಬರೆಯುತ್ತಿರುವುದು ಹಾಗೂ ಸರಕಾರಿ ಜಾಗೆಯನ್ನು ಸಹ ವಕ್ಫ್ಗೆ ಪಡೆಯುತ್ತಿರುವುದನ್ನು ನೋಡಿದರೆ ರಾಜ್ಯ ಸರಕಾರವನ್ನು ಮಸೀದಿಗಳೇ ನಿರ್ವಹಿಸುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ.
– ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್‌ ವಿಪಕ್ಷ ನಾಯಕ

Advertisement

ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕರ್ನಾಟಕ ಸರ್ಕಾರ ರೈತರ ಜಮೀನಿಗೆ ವಕ್ಫ್ ಆಸ್ತಿ ಎಂದು ನೋಟಿಸ್‌ ನೀಡಿದ್ದು, ಈ ನಡೆಯ ವಿರುದ್ಧ ಸಂಸತ್‌ನಲ್ಲಿ ಹಕ್ಕುಚ್ಯುತಿ ಮಂಡಿಸಲಾಗುವುದು. – ಗೋವಿಂದ ಕಾರಜೋಳ ಚಿತ್ರದುರ್ಗ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next