Advertisement

ಸರ್ಕಾರಿ ಶಾಲಾ ಮಕ್ಕಳಿಂದ ಆಂಗ್ಲ ನಾಟಕ ಪ್ರದರ್ಶನ

01:18 PM Feb 25, 2017 | |

ದಾವಣಗೆರೆ: ತಾಲೂಕಿನ  ನರಗನಹಳ್ಳಿಯ ಸಮಾನ ಮನಸ್ಕ ಸಂಘಟನೆಗಳ ಗೆಳೆಯರ ಬಳಗದಿಂದ ಮಾಜಿ ಶಿಕ್ಷಣ ಸಚಿವ ದಿ. ಎಚ್‌.ಜಿ. ಗೋವಿಂದೇಗೌಡರ ಸ್ಮರಣಾರ್ಥ ಶಿಕ್ಷಕ ಪ್ರಕಾಶ್‌ ಕೊಡಗನೂರು ಅವರ ರೋಲ್‌ ಪ್ಲೇಸ್‌… ಕೃತಿ ಬಿಡುಗಡೆ ಹಾಗೂ ಮಕ್ಕಳ ರಂಗ ಪ್ರದರ್ಶನ ಫೆ. 25, 26 ರಂದು ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಗಂಗಾಧರ ಬಿ.ಎಲ್‌. ನಿಟ್ಟೂರು ತಿಳಿಸಿದ್ದಾರೆ. 

Advertisement

ನರಗನಹಳ್ಳಿಯ ಸರ್ಕಾರಿ ಶಾಲಾ ಶಿಕ್ಷಕ ಪ್ರಕಾಶ್‌ ಕೊಡಗನೂರು 3 ರಿಂದ 10ನೇ ತರಗತಿಯ ಇಂಗ್ಲಿಷ್‌ ಪಠ್ಯಾಧಾರಿಸಿ ರೋಲ್‌ ಪ್ಲೇಸ್‌… ಕೃತಿ ರಚಿಸಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ವಿದ್ಯಾರ್ಥಿಗಳು ಪಠ್ಯದ ಅನುಭವದೊಂದಿಗೆ ಭಾಷೆಯನ್ನು ಸಂತಸದಿಂದ ನಿರರ್ಗಳವಾಗಿ ಬಳಸುವಂತೆ ಬರೆದಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ನರಗನಹಳ್ಳಿಯ ಸರ್ಕಾರಿ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲೆಯ 65ಕ್ಕೂ ಹೆಚ್ಚು ಮಕ್ಕಳು ಇಂಟ್ರಡಕ್ಷನ್‌, ಎ ಯೂನಿಕ್‌ ಪೇಂಟಿಂಗ್‌, ಲವ್‌ ಫಾರ್‌ ಅನಿಮಲ್ಸ್‌, ಆ್ಯಕ್ಷನ್‌ ವರ್ಡ್ಸ್‌, ದಿ ಎಂಚಾಂಟೆಡ್‌ ಪೂಲ್‌… ಎಂಗ ಆಂಗ್ಲ ನಾಟಕ ಪ್ರದರ್ಶನ ನೀಡುವರು. ಗ್ರಾಮೀಣ ಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಆಂಗ್ಲ ಭಾಷೆ ಓದುವುದು ಮತ್ತು ಬರೆಯುವುದೇ ಕಷ್ಟ.

ಅದರಲ್ಲೂ  ಆಂಗ್ಲ ನಾಟಕ ಪ್ರದರ್ಶನ  ನೀಡುವುದು ಸುಲಭದ ಮಾತಲ್ಲ. ಶಿಕ್ಷಕ ಪ್ರಕಾಶ್‌ ಕೊಡಗನೂರು ಅದನ್ನು ಸಾಧ್ಯವಾಗಿಸಿದ್ದಾರೆ. ಮಕ್ಕಳು ಆಂಗ್ಲ ಭಾಷಾ ರಂಗ ಪ್ರದರ್ಶನ ನೀಡುವಂತೆ ಸಜ್ಜುಗೊಳಿಸಿದ್ದಾರೆ ಎಂದು ತಿಳಿಸಿದರು. ಶನಿವಾರ ಸಂಜೆ 4ಕ್ಕೆ ಮಕ್ಕಳ ರಂಗ ಪ್ರದರ್ಶನವನ್ನು ಶಿಕ್ಷಣಾಧಿಕಾರಿ ಜಿ.ಎಂ. ಬಸವಲಿಂಗಪ್ಪ ಉದ್ಘಾಟಿಸುವರು. 

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್‌.ಆರ್‌. ಅಣ್ಣೇಶಪ್ಪ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ. ನಾರಾಯಣಗೌಡ ಬಣ) ಜಿಲ್ಲಾ ಗೌರವಾಧ್ಯಕ್ಷ ಎನ್‌. ವಾಸುದೇವರಾಯ್ಕರ್‌, ಬಿಇಒ ಬಿ.ಆರ್‌. ಬಸವರಾಜಪ್ಪ ಇತರರು ಭಾಗವಹಿಸುವರು. ಫೆ. 26ರ ಭಾನುವಾರ ಬೆಳಗ್ಗೆ 10.30ಕಕೆ ನಡೆಯುವ ರೋಲ್‌ ಪ್ಲೇಸ್‌… ಕೃತಿ ಬಿಡುಗಡೆ ಸಮಾರಂಭದಲ್ಲಿ ಲೇಖಕ ಪ್ರೊ. ಮಲ್ಲಿಕಾರ್ಜುನ್‌ ಪಾಟೀಲ್‌, ಡಿಡಿಪಿಐ ಎಚ್‌.ಎಂ. ಪ್ರೇಮಾ, ಪ್ರೊ. ಭಿಕ್ಷಾವರ್ತಿ, ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ ಎಲ್‌.ಎಚ್‌. ಅರುಣ್‌ಕುಮಾರ್‌ ಇತರರು ಭಾಗವಹಿಸುವರು ಎಂದು ತಿಳಿಸಿದರು. 

Advertisement

ಶಿಕ್ಷಕ ಪ್ರಕಾಶ್‌ ಕೊಡಗನೂರು ಮಾತನಾಡಿ, ನನ್ನಂಥಹ ಸಾವಿರಾರು ಶಿಕ್ಷಕರಿಗೆ ಸೇವೆ ಒದಗಿಸುವ ಅವಕಾಶ ಮಾಡಿಕೊಟ್ಟವರು ಮಾಜಿ ಶಿಕ್ಷಣ ಸಚಿವ ದಿ. ಎಚ್‌. ಜಿ. ಗೋವಿಂದೇಗೌಡರು. ಹಾಗಾಗಿ ಅವರ ಸ್ಮರಣಾರ್ಥ ರೋಲ್‌ ಪ್ಲೇಸ್‌… ಕೃತಿ ಬಿಡುಗಡೆ ಹಾಗೂ ಮಕ್ಕಳ ರಂಗ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಆಂಗ್ಲ ಭಾಷೆಯಲ್ಲಿ ಮಾತನಾಡುವುದು ಮಾತ್ರವಲ್ಲ ನಾಟಕಗಳನ್ನು ಮಾಡಬಲ್ಲರು ಎಂಬುದನ್ನು ರುಜುವಾತುಪಡಿಸುವುದಕ್ಕಾಗಿಯೇ ಆಂಗ್ಲ ನಾಟಕಗಳ ಪ್ರದರ್ಶನ ನೀಡಲಾಗುತ್ತಿದೆ ಎಂದು ತಿಳಿಸಿದರು. ಸಾಹಿತಿ ಬಿ. ಶಿವಯೋಗಿ , ಭುವನ್‌ ಪ್ರಕಾಶ್‌ ಕೊಡಗನೂರು ಸುದ್ದಿಗೋಷ್ಠಿಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next