Advertisement

ನರೇಗಾದಡಿ ಸರಕಾರಿ ಶಾಲೆ, ಕಾಲೇಜು ಮೈದಾನ ಕಾಯಕಲ್ಪ: ಕ್ರೀಡಾ ಸಾಮಗ್ರಿ ಖರೀದಿಗೂ ಅನುದಾನ

02:13 AM Jun 26, 2022 | Team Udayavani |

ಉಡುಪಿ: ಪ್ರತೀ ಶಾಲೆ, ಕಾಲೇಜಿಗೂ ಸುಸಜ್ಜಿತ ಆಟದ ಮೈದಾನ ಇರಬೇಕು ಎನ್ನುವುದು ವಾಡಿಕೆ. ಬಹುತೇಕ ಸರಕಾರಿ ಶಾಲೆ, ಕಾಲೇಜುಗಳಲ್ಲಿ ಮೈದಾನವಿದೆ. ಆದರೆ ಸುಸಜ್ಜಿತವಾಗಿಲ್ಲ. ಈಗ ನರೇಗಾದಡಿ ಸರಕಾರದ ಕ್ರೀಡಾ ಅಂಕಣ ಯೋಜನೆಯಡಿ ಗ್ರಾ.ಪಂ.ಗೊಂದು ಮೈದಾನವನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ಆರಂಭವಾಗಿದೆ.

Advertisement

ಜಿ.ಪಂ.ನಿಂದ ನರೇಗಾದಡಿ ಶಾಲೆ, ಕಾಲೇಜಿನ ಮೈದಾನವನ್ನು ಸುಸಜ್ಜಿತಗೊಳಿಸಿ ವಾಲಿಬಾಲ್‌, ಖೋಖೋ, ಶಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌ ಜತೆಗೆ ಜಾಗದ ಲಭ್ಯತೆಯ ಆಧಾರದಲ್ಲಿ ರನ್ನಿಂಗ್‌ ಟ್ರ್ಯಾಕ್‌ ಕೂಡ ನಿರ್ಮಿಸಲಾಗುತ್ತದೆ. ವಿವಿಧ ಕೋರ್ಟ್‌, ಟ್ರ್ಯಾಕ್‌ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಅನಂತರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಸಾಮಗ್ರಿ ಖರೀದಿಗೆ ಅನುದಾನ ಒದಗಿಸಲಾಗುತ್ತದೆ.

ಇದು ರಾಜ್ಯಾದ್ಯಂತ ನಡೆಯಲಿದ್ದು, ಸರಕಾರ 504 ಕೋ.ರೂ.ಗಳನ್ನು ಮೀಸಲಿಟ್ಟಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆಯ ಸಹಭಾಗಿತ್ವದಲ್ಲಿ ಇದು ನಡೆಯಲಿದೆ.

ಉಡುಪಿಯಲ್ಲಿ 57 ಮೈದಾನ
ಉಡುಪಿ ಜಿಲ್ಲೆಯಲ್ಲಿ ಸುಮಾರು 2.63 ಕೋ.ರೂ. ವೆಚ್ಚದಲ್ಲಿ 57 ಆಟದ ಮೈದಾನಗಳನ್ನು ಮೇಲ್ದರ್ಜೆಗೆ ಏರಿಸಲು ಯೋಜನೆ ರೂಪಿಸಲಾಗಿದೆ. ಹಾಗೆಯೇ ದ.ಕ.ದಲ್ಲಿ ಸುಮಾರು 75ಕ್ಕೂ ಅಧಿಕ ಮೈದಾನಗಳನ್ನು ಸುಮಾರು 3 ಕೋ.ರೂ.ಗಳಿಗೂ ಅಧಿಕ ಮೊತ್ತದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಪ್ರತೀ ಗ್ರಾ.ಪಂ.ಗಳಲ್ಲೂ ಒಂದೊಂದು ಕ್ರೀಡಾಂಗಣ ಮೇಲ್ದರ್ಜೆಗೆ ಏರಿಸುವುದು ಸರಕಾರದ ಯೋಜನೆ.

ಕ್ರೀಡಾ ಇಲಾಖೆಯಿಂದ ಪರಿಕರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಒಂದು ಶಾಲೆ ಅಥವಾ ಕಾಲೇಜಿಗೆ ಅಲ್ಲಿನ ಕ್ರೀಡಾಂಗಣಗಳ ನಿರ್ಮಾಣದ ಆಧಾರದಲ್ಲಿ 25 ಸಾವಿರ ರೂ.ಗಳ ವರೆಗೂ ಪರಿಕರ
ಖರೀದಿಗೆ ಅನುದಾನ ನೀಡಲಾಗುತ್ತದೆ. ಸರಕಾರಿ ಶಾಲೆ, ಕಾಲೇಜುಗಳಿಗೆ ಮಾತ್ರ ಇದು ಅನ್ವಯಿಸಲಿದೆ.

Advertisement

ದೇಸಿ, ಗ್ರಾಮೀಣ ಕ್ರೀಡೆಗೆ ಉತ್ತೇಜನ
ಗ್ರಾಮೀಣ ಮತ್ತು ದೇಸಿ ಕ್ರೀಡೆಗಳನ್ನುಉತ್ತೇಜಿಸಲು ಮತ್ತು ಈ ಕ್ರೀಡೆಗಳ ಬಗ್ಗೆ ಶಾಲೆ, ಕಾಲೇಜು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಮೈದಾನಗಳನ್ನು ಸುಸಜ್ಜಿತಗೊಳಿಸಲಾಗುತ್ತಿದೆ. ಮುಖ್ಯವಾಗಿ ವಾಲಿಬಾಲ್‌, ಖೋಖೋ, ತ್ರೋಬಾಲ್‌, ಶಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌ ನಿರ್ಮಾಣ ಮಾಡಲಾಗುತ್ತದೆ. ಸುಮಾರು 10 ಲಕ್ಷ ರೂ.ಗಳ ವರೆಗೂ ಕಾಮಗಾರಿ ನಡೆಸಲಾಗುತ್ತದೆ. ನರೇಗಾ ಯೋಜನೆಯಡಿ ಸ್ಥಳೀಯರಿಗೆ ಉದ್ಯೋಗ ನೀಡಲಾಗುತ್ತದೆ ಮತ್ತು ಇದರಿಂದ ಮಾನವ ದಿನದ ಸೃಜನೆಯೂ ಹೆಚ್ಚಾಗುತ್ತದೆ.

ಗ್ರಾ.ಪಂ.ಗೆ ಒಂದರಂತೆ ಸರಕಾರಿ
ಶಾಲೆ ಅಥವಾ ಕಾಲೇಜಿನ ಮೈದಾನ ವನ್ನು ಸುಸಜ್ಜಿತಗೊಳಿಸುವ ರಾಜ್ಯ ಸರಕಾರದ ಕ್ರೀಡಾ ಅಂಕಣ ಯೋಜನೆಯನ್ನು ನರೇಗಾ ದಡಿಯಲ್ಲಿ ಆರಂಭಿಸಿದ್ದೇವೆ. ಇದಕ್ಕೆ ಸಂಬಂಧಿಸಿ ರೂಪರೇಖೆಗಳನ್ನು ಸಿದ್ಧಪಡಿಸಿದ್ದೇವೆ.
-ಎಚ್‌. ಪ್ರಸನ್ನ, ಜಿ.ಪಂ. ಸಿಇಒ, ಉಡುಪಿ

ನರೇಗಾ ಯೋಜನೆಯಡಿ
ಸರಕಾರಿ ಶಾಲೆ ಅಥವಾ ಕಾಲೇಜಿನ ಮೈದಾನವನ್ನು ಸುಸಜ್ಜಿತಗೊಳಿಸಿ, ಮೇಲ್ದರ್ಜೆಗೆ ಏರಿಸಲಾಗುತ್ತದೆ. ವಿವಿಧ ಕ್ರೀಡೆಯ ಕೋರ್ಟ್‌ ನಿರ್ಮಾಣದ ಅನಂತರ ನಮ್ಮ ಇಲಾಖೆಯಿಂದ ಅದಕ್ಕೆ ಬೇಕಾದ ಕ್ರೀಡಾ ಪರಿಕರಗಳನ್ನು ಖರೀದಿಸಲು ಅನುದಾನ ನೀಡಲಾಗುತ್ತದೆ.
– ಡಾ| ರೋಶನ್‌ ಶೆಟ್ಟಿ, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ


-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next