ಮಹಾಲಿಂಗಪುರ: ಸಮಾಜದಲ್ಲಿರುವ ಅರ್ಹರಿಗೆ ಸರ್ಕಾರಿ ಯೋಜನೆಗಳು ತಲುಪುವಂತಾಗಲಿ. ಅಧಿಕಾರಿಗಳು ಬಡವರಿಗೆ ಅನ್ಯಾಯ ಆಗದಂತೆ ಎಲ್ಲರ ಮನವಿಯನ್ನು ಕಡ್ಡಾಯವಾಗಿ ದಾಖಲಿಸಿಕೊಂಡು ಅವುಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಸಂಗಾನಟ್ಟಿ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಂದಾಯ ಅಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಮತ್ತು ಬಡವರ ದುಡಿಮೆಯ ಸಮಯ ಹಾಗೂ ಹಣದ ವ್ಯಯ ತಪ್ಪಿಸುವ ಅಧಿಕಾರಿಗಳ ನಡೆ ಹಳ್ಳಿಯ ಕಡೆ, ಗ್ರಾಮ-1 ಯೋಜನೆಗಳು ಸಫಲವಾಗಬೇಕು. ಸಾಮಾಜಿಕ ಭದ್ರತೆಯ ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ ಮಾಸಾಶನಕ್ಕೆ ಅರ್ಹರಿರುವವರಿಗೆ ತಕ್ಷಣವೇ ಮಂಜೂರಾತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಗ್ರಾಮಸ್ಥರಿಗೆ ತಿಳಿಸಿದರು. ತಹಶೀಲ್ದಾರ್ ಸಂಜಯ ಇಂಗಳೆ, ಉಪತಹಶೀಲ್ದಾರ್ ಎಸ್.ಬಿ.ಕಾಂಬಳೆ, ಗ್ರಾಮದ ಪರಪ್ಪ ಹುದ್ದಾರ, ಮಹಾಲಿಂಗ ಇಟ್ನಾಳ ಮಾತನಾಡಿದರು. ಸಭೆಯಲ್ಲಿ ಹಲವಾರು ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ಮನವಿ ಸ್ವೀಕರಿಸಿ, ಸ್ಥಳದಲ್ಲೇ ಪರಿಹಾರ ಸೂಚಿಸಲಾಯಿತು.
ಸ್ಥಳೀಯ ಹನಮವ್ವ ಕೂಗಾಟೆಯವರ ಪುತ್ರ 19 ವರ್ಷದ ಅನಿಲನಿಗೆ 8 ತಿಂಗಳ ಹಿಂದೆ ಅಪಘಾತವಾಗಿ ಕೈಗಳು ತುಂಡಾಗಿದ್ದು, ಗೋಕಾಕ ಉಮರಾಣಿ ಆಸ್ಪತ್ರೆಯಲ್ಲಿ ಇದುವರೆಗೂ ಚಿಕಿತ್ಸೆ ಪಡೆಯುತ್ತಿದ್ದು 10 ಲಕ್ಷ ರೂ.ಬಿಲ್ ಮಾಡಲಾಗಿದೆ. ದುಡಿಯುವ ಮಗ ಆಸ್ಪತ್ರೆ ಸೇರಿ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಹನಮವ್ವ ತನ್ನ ಸಂಕಷ್ಟವನ್ನು ಶಾಸಕರ ಮತ್ತು ಅಧಿ ಕಾರಿಗಳ ಮುಂದೆ ಹೇಳಿ ಸಹಾಯಕ್ಕೆ ಮನವಿ ಮಾಡಿದರು. ಶಾಸಕ ಸಿದ್ದು ಸವದಿ ಸ್ಥಳದಲ್ಲಿಯೇ 5 ಸಾವಿರ ರೂ. ನೀಡಿ, ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಶೀಘ್ರ ಸಿಎಂ ನಿಧಿಯಿಂದ ಪರಿಹಾರ ನೀಡುವ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ನೂರಜಹಾನ್ ನದಾಫ್, ಉಪಾಧ್ಯಕ್ಷೆ ಶೋಭಾ ಮಾಂಗ, ಲಕ್ಕಪ್ಪ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಶಿವಲಿಂಗಪ್ಪ ಕೌಜಲಗಿ, ಮಾರುತಿ ಇಟ್ನಾಳ, ಬಸವರಾಜ ನಾಗನೂರ, ಗೋಪಾಲ ನಡುವಿನಮನಿ, ಮಲ್ಲು ಉಳ್ಳಾಗಡ್ಡಿ, ಸಿ.ಎಂ.ಉಳ್ಳಾಗಡ್ಡಿ, ತಾಪಂ ಇಒ ಹಿಪ್ಪರಗಿ, ಪಿಡಿಒ ಡಿ.ಕೆ. ಸಾವಳಗಿ ಇದ್ದರು.