Advertisement
ರಾಜ್ಯದಲ್ಲಿ ವೈದ್ಯರ ಸಲಹೆ ಇಲ್ಲದೆ ಆ್ಯಂಟಿ ಬಯಾಟಿಕ್‌ಗಳು ಹಾಗೂ ಕಳಪೆ ಗುಣಮಟ್ಟದ ಔಷಧಗಳು ಮಾರಾಟವಾಗುತ್ತಿವೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಪ್ರಾಣಹಾನಿ ಸಂಭವಿಸುತ್ತಿದೆ. ಈಗ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯು ಆ್ಯಂಟಿಬಯಾಟಿಕ್ ಹಾಗೂ ಕಳಪೆ ಗುಣಮಟ್ಟದ ಔಷಧಗಳ ಮಾರಾಟ ವನ್ನು ನಿಯಂತ್ರಿಸಲು ಕೇರಳ ಮಾದರಿ ಯೋಜನೆ ಆಳವಡಿಸಿಕೊಳ್ಳಲು ಅಗತ್ಯವಿರುವ ವರದಿಯನ್ನು ನೀಡುವಂತೆ ರಾಜ್ಯ ಔಷಧ ನಿಯಂತ್ರಣ ವಿಭಾಗಕ್ಕೆ ಆದೇಶ ನೀಡಿದೆ. ಈ ವರದಿಯು ಮುಂದಿನ 15 ದಿನಗಳಲ್ಲಿ ಇಲಾಖೆಯ ಕೈಸೇರಲಿದೆ.
ಸಣ್ಣಪುಟ್ಟ ಕಾಯಿಲೆಗಳಿಗೂ ನಿರಂತರವಾಗಿ ಆ್ಯಂಟಿ ಬಯಾಟಿಕ್ ಸೇವನೆ ಮಾಡುವುದರಿಂದ ರೋಗಕಾರಕ ಸೂಕ್ಷ್ಮಜೀವಿಗಳು ಔಷಧ ಪ್ರತಿರೋಧ ಗುಣ ಬೆಳೆಸಿಕೊಳ್ಳುತ್ತವೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಆ್ಯಂಟಿಬಯಾಟಿಕ್ ಔಷಧಗಳನ್ನು ನೀಡಿದರೂ ಕೆಲಸ ಮಾಡದೆ ಪ್ರಾಣ ಹಾನಿ ಸಂಭವಿಸುತ್ತದೆ. ಔಷಧ ನಿಯಂತ್ರಕರ ಕೊರತೆ!
ರಾಜ್ಯದಲ್ಲಿ 116 ಔಷಧ ನಿಯಂತ್ರಕ ಹುದ್ದೆಗಳಿವೆ. ಅದರಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ಹುಬ್ಬಳ್ಳಿಯಲ್ಲಿ ಒಟ್ಟು 6 ಹುದ್ದೆಗಳು ಮಾತ್ರ ಭರ್ತಿಯಾಗಿದೆ. ಸುಮಾರು 110 ಹುದ್ದೆಗಳು ಖಾಲಿಯಿವೆ. ಪ್ರಸ್ತುತ ಸಹಾಯಕ ಔಷಧ ನಿಯಂತ್ರಕರು ಔಷಧ ಮಳಿಗೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ದಾಳಿಗಳು ನಿರಂತರವಾಗಿ ನಡೆಯದ ಹಿನ್ನೆಲೆಯಲ್ಲಿ ಔಷಧ ಅಂಗಡಿಗಳಲ್ಲಿ ವ್ಯಾಪಕವಾಗಿ ವೈದ್ಯರ ಚೀಟಿ ಇಲ್ಲದೆ ಆ್ಯಂಟಿಬಯಾಟಿಕ್ ಔಷಧಗಳು ಮಾರಾಟವಾಗುತ್ತಿವೆ.
Related Articles
ಕೇರಳದಲ್ಲಿ ಅತಿಯಾದ ಆ್ಯಂಟಿಬಯಾಟಿಕ್ ಔಷಧಗಳ ಬಳಕೆಗೆ ಕಡಿವಾಣ ಹಾಕಲು “ಆಪರೇಶನ್ ಅಮೃತ್’ ಜಾರಿಗೊಳಿಸಲಾಗಿದೆ. ವೈದ್ಯರ ಸಲಹೆ ಇಲ್ಲದೆ ನೇರ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಔಷಧ ಅಂಗಡಿಗಳಿಗಾಗಿ ನಿಯಾಮಾವಳಿಯನ್ನು ರೂಪಿಸಿದ್ದು, ಅದರ ಅನ್ವಯ ಮಳಿಗೆಗಳು ಎಷ್ಟು ಆ್ಯಂಟಿಬಯಾಟಿಕ್ ಖರೀದಿಸಲಾಗಿದೆ, ಎಷ್ಟು ಮಾರಾಟವಾಗಿದೆ ಎನ್ನುವ ನಿಖರ ಮಾಹಿತಿಯನ್ನು ಒದಗಿಸ ಬೇಕಾಗುತ್ತದೆ. ಇಲ್ಲಿ ಸಾರ್ವಜನಿಕ ಸಹಭಾಗಿತ್ವಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಸಾರ್ವಜನಿಕರು ಕಾನೂನು ಉಲ್ಲಂ ಸುವ ಔಷಧ ಅಂಗಡಿಗಳ ವಿರುದ್ಧ ದೂರು ನೀಡಬಹುದಾಗಿದೆ. ಅದಕ್ಕಾಗಿ ಉಚಿತ ಸಹಾಯವಾಣಿ ಸ್ಥಾಪಿಸಲಾಗಿದೆ. ಜತೆಗೆ ನಿರಂತರವಾಗಿ ಔಷಧ ಮಳಿಗೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಪರಿಶೀಲನೆ ವೇಳೆ ವ್ಯತ್ಯಾಸ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮವನ್ನು ಕೇರಳ ಔಷಧ ನಿಯಂತ್ರಕ ಇಲಾಖೆ ಕೈಗೊಳ್ಳುತ್ತಿದೆ.
Advertisement
ರಾಜ್ಯದಲ್ಲಿ ವೈದ್ಯರ ಸಲಹೆ ಚೀಟಿ ಇಲ್ಲದೆ ಆ್ಯಂಟಿ ಬಯಾಟಿಕ್ ಹಾಗೂ ಕಳಪೆ ಗುಣಮಟ್ಟದ ಔಷಧ ಮಾರಾಟವಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆ್ಯಂಟಿಬಯಾಟಿಕ್ ಬಳಕೆ ನಿಯಂತ್ರಣಕ್ಕೆ ಸಂಬಂಧಿಸಿ ಕೇರಳ ಮಾದರಿಯ ನಿಯಮವನ್ನು ಕರ್ನಾಟಕದಲ್ಲಿ ಅಳವಡಿಸಲಾಗುತ್ತದೆ.-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವರು -ತೃಪ್ತಿ ಕುಮ್ರಗೋಡು