ಹೊಸಪೇಟೆ: ನಾಡಿನ ಸಾಹಿತಿ-ಬುದ್ಧಿಜೀವಿಗಳಿಗೆ ಕುತ್ತು ಬಂದರೆ ಅದಕ್ಕೆ ಕೇಂದ್ರದ ಗೃಹಮಂತ್ರಿ ಅಮಿತ್ ಶಾ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು ನೇರ ಹೊಣೆಯಾಗಲಿದ್ದಾರೆ ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ರಾಷ್ಟ್ರದ ಐಕ್ಯತೆ ಒಗ್ಗಟ್ಟಿಗೆ ಪ್ರಾಣ ತ್ಯಾಗಕ್ಕೂ ಸಿದ್ಧರಿದ್ದಾರೆ. ಸಾಹಿತಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕು. ಬುದ್ಧಿಜೀವಿಗಳಿಗೆ ರಕ್ಷಣೆ ನೀಡಲು ಕಾಂಗ್ರೆಸ್ ಸದಾ ಸಿದ್ಧವಿದೆ. ಕಾಂಗ್ರೆಸ್‌ನವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧ ಎಂದರು.
ಬಿಜೆಪಿಯವರು ಧರ್ಮದ ಹೆಸರಿನಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಗೃಹಮಂತ್ರಿ ಆರಗ ಜ್ಞಾನೆಂದ್ರ ಅವರು ಯಾವುದೇ ಘಟನೆ ನಡೆದರೂ ಕೋಮುಬಣ್ಣ ಬಳಿಯಲು ಹೊರಟಿದ್ದಾರೆ ಎಂದರು. ಬಿಜೆಪಿಯವರಿಗೆ ರೊಟ್ಟಿ ಅಂದ್ರೆ ಹಲಾಲ್, ಕಪಡಾ ಅಂದ್ರೆ ಹಿಜಾಬ್, ಕೋಮುಬಣ್ಣ ಅಂದರೆ ಜೀವನವಾಗಿ ಬಿಟ್ಟಿದೆ. ಮೊದಲು ಯುವಕರಿಗೆ ಉದ್ಯೊಗ ನೀಡಲಿ. ಬಡವರ ಸಂಕಷ್ಟಕ್ಕೆ ಸ್ಪಂದಿಸಲಿ ಎಂದು ಹೇಳಿದರು.
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಹಿಂದಿ ಮಾತನಾಡಬೇಕು ಅಂತಾ ಹೇಳಿಕೆ ನೀಡಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಶೇ. 47 ಜನರು ಮಾತ್ರ ಹಿಂದಿ ಭಾಷೆ ಮಾತನಾಡುತ್ತಾರೆ. ಹಿಂದಿ ಭಾಷೆಯನ್ನು ರಾಷ್ಟ್ರದಲ್ಲಿ ಹೇರಿಕೆ ಮಾಡಲು ಹೊರಟಿದ್ದಾರೆ ಎಂದು ದೂರಿದರು. ಮುಸ್ಲಿಮರ ಬಳಿ ವ್ಯಾಪಾರ ಮಾಡಬಾರದು ಅಂತಾ ಹೇಳ್ತಾರೆ. ಮುಸ್ಲಿಮರ ಪೆಟ್ರೋಲ್ ಖರೀದಿ ಮಾಡಲ್ಲ ಅಂತಾ ಹೇಳಲಿ. ಗಲ್ಫ್ ರಾಷ್ಟ್ರಗಳ ಪ್ರಟೋಲ್ ಬೇಡವೆಂದು ಹೇಳಲಿ. ಜನರ ಭಾವನೆ ಕೆರಳಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಗುತ್ತಿಗೆದಾರರು ರಾಜ್ಯದಲ್ಲಿ ಶೇ. 42ರಷ್ಟು ಕಮೀಷನ್ ಪಡೆದುಕೊಳ್ಳುತ್ತಿದ್ದಾರೆ ಅಂತಾ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸರ್ಕಾರದ ತಪ್ಪುಗಳನ್ನ ಎತ್ತಿ ತೋರಿಸಿದ್ರೆ ಅವರನ್ನ ರಾಷ್ಟ್ರ ವಿರೋಧಿಗಳು ಅಂತ ಬಿಂಬಿಸುತ್ತಾರೆ ಎಂದು ದೂರಿದರು.
ಹಿಜಾಬ್ ಮೂಲಕ ಹೆಣ್ಣುಮಕ್ಕಳ ಶಿಕ್ಷಣ ವಂಚನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ ಹಿಂದುಗಳು ಸಹ ಗುಂಗಟ್ ಹಾಕಿಕೊಳ್ಳುತ್ತಿದ್ದಾರೆ. ವಿಧವೆಯರು ಸಹ ಗಂಡ ಸತ್ತ ಮೇಲೆ ತಲೆ ಮೇಲೆ ಸೆರಗು ಹಾಕ್ತಾರೆ ಅದನ್ನ ತೆಗಿಸಲಿ ಎಂದರು.
ಕಾಂಗ್ರೆಸ್ ಕಟ್ಟಿದ ಹಲವು ಸರ್ಕಾರಿ ಸಂಸ್ಥೆಗಳನ್ನು ಬಿಜೆಪಿ ಮಾರಾಟ ಮಾಡುತ್ತಿದೆ ಎಂದು ದೂರಿದರು. ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಮುಖಂಡರಾದ ವೆಂಕಟರಾವ್ ಘೋರ್ಪಡೆ, ಎಚ್‌ಎನ್‌ಎಫ್ ಇಮಾಮ್ ನಿಯಾಜಿ, ದೀಪಕ್ ಸಿಂಗ್, ಗುಜ್ಜಲ ನಾಗರಾಜ, ಗುಜ್ಜಲ ರಘು, ಕುರಿ ಶಿವಮೂರ್ತಿ, ರಾಜಶೇಖರ ಹಿಟ್ನಾಳ, ನಿಂಬಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್, ವಿ. ಸೋಮಪ್ಪ ಮತ್ತಿತರರಿದ್ದರು.