Advertisement

ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ವ್ಯತ್ಯಯ ಸಾಧ್ಯತೆ

06:16 AM Feb 11, 2019 | |

ಬೆಂಗಳೂರು: ಗುತ್ತಿಗೆ ನೌಕರರಿಗೆ ಸಮಾನ ವೇತನ, ಸೇವಾಭದ್ರತೆ ನೀಡಬೇಕೆಂದು ಒತ್ತಾಯಿಸಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರದಿಂದ ಆರಂಭಿಸಿರುವ ಪ್ರತಿಭಟನೆ ಮುಂದುವರಿದಿದೆ.

Advertisement

ಆರೋಗ್ಯ ಇಲಾಖೆಯಲ್ಲಿ ಖಾಯಂ ನೌಕರರಿಗಿಂತ ಗುತ್ತಿಗೆ ಆಧಾರಿತ ನೌಕರರ ಸಂಖ್ಯೆ ಹೆಚ್ಚಿದ್ದು, ಇಲಾಖೆಯೂ ಗುತ್ತಿಗೆ ನೌಕರರನ್ನೇ ಹೆಚ್ಚು ಅವಲಂಭಿಸಿದೆ. ಆದರೂ, ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಿಲ್ಲ. “ಜೀತ ಪದ್ಧತಿಯನ್ನು ದೂರ ಮಾಡಿ ಸೇವಾಭದ್ರತೆ ಒದಗಿಸಿ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾನಿರತರ ಪರವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಚ್‌.ವೈ. ವಿಶ್ವಾರಾಧ್ಯ, ಗುತ್ತಿಗೆ ಸಿಬ್ಬಂದಿಗೆ ತಾರತಮ್ಯ ಮಾಡದೇ ಸಮಾನ ವೇತನ ನೀಡಬೇಕು ಎಂದು ಸುಪ್ರಿಂಕೋರ್ಟ್‌ ಆದೇಶ ನೀಡಿದರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ.

ಭದ್ರತೆ ಇಲ್ಲದೇ ಉದ್ಯೋಗ ಮಾಡುತ್ತಿರುವ ಸಿಬ್ಬಂದಿಗಳು ಗುಣಮಟ್ಟದ ಸೇವೆ ನೀಡಲು ಹೇಗೆ ಸಾಧ್ಯ? ಜೀತ ವ್ಯವಸ್ಥೆಯಂತಿರುವ ಗುತ್ತಿಗೆ ಪದ್ಧತಿ ಅಸಂವಿಧಾನಿಕ ವ್ಯವಸ್ಥೆಯಾಗಿದ್ದು, ದೆಹಲಿ ಮತ್ತು ಹರಿಯಾಣ ರಾಜ್ಯ ಸರ್ಕಾರ ವೇತನ ಹಾಗೂ ಸೇವಾ ಭದ್ರತೆ ಕ್ರಮಗಳನ್ನು ಜಾರಿಗೊಳಿಸಿದೆ. ಈ ಕೂಡಲೇ ರಾಜ್ಯ ಸರ್ಕಾರ ಎಲ್ಲ ಗುತ್ತಿಗೆ ನೌಕರರಿಗೆ ಸೇವಾಭದ್ರತೆ ಸಮಾನ, ವೇತನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಇಲಾಖೆಯ ಕಾಯಂ ಸಿಬ್ಬಂದಿಯ ವೇತನಕ್ಕಿಂತ ಅರ್ಧದಷ್ಟು ಕಡಿಮೆ ವೇತನವನ್ನು ಗುತ್ತಿಗೆ ಸಿಬ್ಬಂದಿ ಪಡೆಯುತ್ತಿದ್ದರೂ, ಕಾಯಂ ಸಿಬ್ಬಂದಿಗಿಂತ ಎರಡು ಪಟ್ಟು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ವೈದ್ಯರಷ್ಟೇ ಅಲ್ಲ ರಾಷ್ಟ್ರೀಯ ಆರೋಗ್ಯ ಮಿಷನ್‌ ಅಡಿ ಇಲಾಖೆಯಲ್ಲಿ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಎಲ್ಲಾ ಸಿಬ್ಬಂದಿಯೂ ವೇತನ ಅಸಮಾನತೆಯನ್ನು ಹೊಂದಿದ್ದಾರೆ.

Advertisement

ಇತ್ತೀಚೆಗೆ ಹತ್ತಾರು ವರ್ಷ ಇಲಾಖೆಯಲ್ಲಿ ದುಡಿದು ಇದ್ದಕ್ಕಿದ್ದಂತೆ ಇಲಾಖೆಗೆ ಸಂಬಂಧವೇ ಇಲ್ಲದಂತೆ ಗುತ್ತಿಗೆ ನೌಕರರನ್ನು ಅಮಾನವೀಯವಾಗಿ ಹೊರದೂಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡೆಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಂಜ್‌ ಕುಮಾರ್‌ ಪಾಂಡೆ ಅವರು ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲುಗಳನ್ನು ಆಲಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು,

ಸಮಸ್ಯೆ ಬಗೆಹರಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಸರ್ಕಾರ ಗುತ್ತಿಗೆ ನೌಕರರ ನಿಯಮದಲ್ಲಿರುವ ಲೋಪದೋಷ ಸರಿಪಡಿಸಬೇಕಾಗಿದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು, ಪರಿಹಾರ ಕಂಡುಕೊಳ್ಳಲಾಗುವುದು. ಗುತ್ತಿಗೆ ನೌಕರರು ಪ್ರತಿಭಟನೆಯನ್ನು ವಾಪಸ್ಸು ಪಡೆದು, ಎಂದಿನಂತೆ ಕಾರ್ಯನಿರ್ವಹಿಸಬೇಕು ಎಂದು ಪಂಕಜ್‌ ಕುಮಾರ್‌ ಪಾಂಡೆ ಮನವಿ ಮಾಡಿದರು. 

ಹೊರ ರೋಗಿಗಳ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ?: ಪ್ರತಿಭಟನೆ ಮುಂದುವರೆದರೆ ಸೋಮವಾರದಿಂದ ಸರ್ಕಾರಿ ಆಸ್ಪತ್ರೆಗಳ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಸೋಮವಾರ ರಾಜ್ಯದ ನಾನಾ ಭಾಗಗಳಿಂದ ಗುತ್ತಿಗೆ ನೌಕರರು ಆಗಮಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ವ್ಯತ್ಯಯವಾಗುವ ಸಾಧ್ಯತೆಗಳಿವೆ.

ಹಿಂದೆ ಸಾಂಕೇತಿಕವಾಗಿ ಮುಷ್ಕರ ಮಾಡಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಮೂಲಕ ಮನವಿ ಮಾಡಲಾಗಿತ್ತು. ಈವರೆಗೂ ಯಾರಿಂದಲೂ ನಮಗೆ ಉತ್ತರ ಬಂದಿಲ್ಲ. ನಮಗೆ ಸೇವಾ ಭದ್ರತೆ ಕುರಿತು ಆಯೋಗ್ಯ ಇಲಾಖೆ ಸಚಿವರು ಲಿಖೀತ ರೂಪದ ಭರವಸೆ ನೀಡಬೇಕು. 
-ಎಚ್‌.ವೈ. ವಿಶ್ವಾರಾಧ್ಯ, ಅಧ್ಯಕ್ಷ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next